A new study finds that using humour to communicate about topics like AI increases a scientist's likeability and credibility.

ವಿಜ್ಞಾನದ ಸಂವಹನ ಹೆಚ್ಚಿಸಲು, ಹಾಸ್ಯ ನೆರವಾಗಬಲ್ಲುದೇ?

Georgia
8 Apr 2025
Screenshot of 4 tweets from a fictional account talking about AI with varu=ing degrees of humour

ಕೋವಿಡ್‌ ಸಂದರ್ಭದಲ್ಲಿ, ವಿಜ್ಞಾನಿಗಳ ಮೇಲಿನ ಜನತೆಯ ವಿಶ್ವಾಸ ಮೇರು ಮಟ್ಟದಲ್ಲಿ ಇತ್ತಂತೆ. ಸಾಂಕ್ರಾಮಿಕತೆ ಹೆಚ್ಚುತ್ತಿದ್ದಂತೆ, ರೋಗವನ್ನು ನಿಯಂತ್ರಿಸುವ ನಿಖರವಾದ ಮಾರ್ಗದರ್ಶನಕ್ಕೆ, ಜನತೆ ವಿಜ್ಞಾನಿಗಳತ್ತ ಮುಖ ಮಾಡಿತ್ತು. ಇತ್ತೀಚೆಗೆ ನೇಚರ್‌ ಪ್ರಕಟಿಸಿದ ಸಂಶೋಧನಾ ವರದಿ, ಜನತೆ ವಿಜ್ಞಾನಿಗಳಲ್ಲಿ ಅತ್ಯಂತ ವಿಶ್ವಾಸ ಇಡುವ ೬೮ ರಾಷ್ಟ್ರಗಳಲ್ಲಿ ಭಾರತದ ಸ್ಥಾನ ಎರಡನೆಯದು ಎಂದಿದೆ. ಹಾಗಿದ್ದೂ, ವೈಜ್ಞಾನಿಕ ಬೆಳೆವಣಿಗೆಗಳ  ಜೊತೆಜೊತೆಗೇ ನಡೆದಿರುವ ಕಪಟವಿಜ್ಞಾನ, ಸುಳ್ಳುಸುದ್ದಿಗಳು  ಹಾಗೂ ಸಂಚಿನ ಸುದ್ದಿಗಳ ಹಾವಳಿಯೂ ಭಾರತದಲ್ಲಿ ಆರೋಗ್ಯ,  ಶಿಕ್ಷಣ ಹಾಗು ಇತರೆ ನೀತಿ ತೀರ್ಮಾನಗಳನ್ನು ಬಾಧಿಸಿದೆ.

ಇತ್ತೀಚಿನ ದಿನಗಳಲ್ಲಿಯಂತೂ, ಲಾಭ ಗಳಿಕೆಯನ್ನೇ ಉದ್ದೇಶವನ್ನಾಗಿಟ್ಟುಕೊಂಡು ಯಾಂತ್ರಿಕ ಬುದ್ಧಿಮತ್ತೆ ಅಥವಾ ಏಐ ನಂತಹ ನವನವೀನ ತಂತ್ರಜ್ಞಾನಗಳ ಬಗ್ಗೆ ಉತ್ಪ್ರೇಕ್ಷೆ ಅಥವ ಅತಿರಂಜಿತ ಮಾಹಿತಿಯನ್ನು ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಬರೆಹಗಳತ್ತ ಕಣ್ಣುಹಾಯಿಸಿದರೆ, ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ತಂತ್ರಜ್ಞರು, ಅಷ್ಟೇ ಯಾಕೆ ಹಾಸ್ಯಗಾರರೂ ಏಐ ಬಗ್ಗೆ ಏನೇನೋ ಹೇಳುವುದನ್ನು ಕೇಳಿದ್ದೇವೆ. ಇವೆಲ್ಲ ಗದ್ದಲದ ನಡುವೆ ಏಐ ಕುರಿತ ವಿಜ್ಞಾನಿಗಳ ಮಾತುಗಳು ಕೇಳುವಂತೆ ಮಾಡುವುದಾದರೂ ಹೇಗೆ?

ಅಮೆರಿಕೆಯ ಜಾರ್ಜಿಯಾ ವಿಶ್ವವಿದ್ಯಾನಿಲಯ, ಯುಟಾ ವಿಶ್ವವಿದ್ಯಾನಿಲಯ ಹಾಗೂ ಅರ್ಬಾನಾ-ಶಾಂಪೇನಿನಲ್ಲಿರುವ ಇಲಿನಾಯ್‌ ವಿಶ್ವವಿದ್ಯಾನಿಲಯದ ಸಂಶೋಧಕರ ಅಧ್ಯಯನವೊಂದು ಆನ್‌ಲೈನ್‌ ಲೋಕದಲ್ಲಿ ಸಂವಹನ ಮಾಡಲು ಹಾಸ್ಯವೇ ಒಳ್ಳೆಯ ಸಾಧನವಾಗಬಲ್ಲುದು ಎಂದು ತಿಳಿಸಿದೆ. ಇವರದ್ದೊಂದು ಸರಳ ಪ್ರಶ್ನೆ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುವಾಗ ವಿಜ್ಞಾನಿಗಳು ಹಾಸ್ಯವನ್ನೂ ಸೇರಿಸಿಕೊಂಡು ಮಾತನಾಡಿದರೆ, ಆಗ ಜನತೆ ಅವರ ಮಾತುಗಳನ್ನೂ, ಆ ವಿಷಯದ ಮಾಹಿತಿಯನ್ನೂ ನೋಡುವ ರೀತಿ ಬದಲಾದೀತೇ?

ವಿಭಿನ್ನ ಬಗೆಯ ಹಾಸ್ಯ ಜನತೆಯ ಅಭಿಪ್ರಾಯಗಳನ್ನು ಪ್ರಭಾವಿಸಬಹುದೇ ಎಂಬುದನ್ನು ತಿಳಿಯುವುದು ಸಂಶೋಧಕರ ಉದ್ದೇಶವಾಗಿತ್ತು. ಇದಕ್ಕಾಗಿ ಅವರು ಟ್ವಿಟ್ಟರ್‌ನತ್ತ  - ಈಗ ಇದನ್ನು ಎಕ್ಸ್‌ ಎನ್ನುತ್ತೇವೆ -, ಗಮನ ಹರಿಸಿದರು. ಇದು ಚುಟುಕುಆದ ಸಂದೇಶಗಳಿಗೆ ಹೆಸರುವಾಸಿ. ತಮ್ಮ ಪ್ರಯೋಗಗಳಿಗೆ ಸಂಶೋಧಕರು ಮೂರು ಬಗೆಯ ಹಾಸ್ಯವನ್ನು ಆರಿಸಿಕೊಂಡರು. ಮಾನವನ ಅಣಕ ಅಂದರೆ ಯಾಂಬುವನ್ನು ಮಾನವನಂತೆ ಕಾಣಿಸುವುದು, ವಿಡಂಬನೆ ಅಂದರೆ ಯಾಂಬುವಿನ ಅಪಹಾಸ್ಯ ಅಥವಾ ಇವೆರಡರ ಮಿಶ್ರ.  ಸಂದೇಶ ಕಳಿಸಿದ ವಿಜ್ಞಾನಿಯನ್ನು ಎಷ್ಟು ಮೆಚ್ಚುವರು, ಹಾಗೂ ಈ ವಿಜ್ಞಾನಿಯ ಸಂದೇಶಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ವಿಜ್ಞಾನದ ಮೂಲವೆಂದು ಜನರು ತಿಳಿಯುವರು ಎಂಬುದನ್ನು ಪತ್ತೆ ಮಾಡುವುದು ಸಂಶೋಧಕರ ಗುರಿಯಾಗಿತ್ತು.

ಅಕ್ಟೋಬರ್‌ ಎರಡು ಸಾವಿರದ ಇಪ್ಪತ್ತನೆಯ ಇಸವಿಯಲ್ಲಿ ಸಂಶೋಧಕರು ಅಮೆರಿಕೆಯಾದ್ಯಂತ ಎರಡು ಸಾವಿರದ ಇನ್ನೂರ ಹನ್ನೆರಡು ಜನರನ್ನು ಪ್ರಶ್ನಿಸಿದರು. ಹೀಗೆ ಇವರು ಆಯ್ದುಕೊಂಡ ಗುಂಪು ಅಮೆರಿಕೆಯ ಜನತೆಯಲ್ಲಿರುವ ವಯಸ್ಸು, ಲಿಂಗ ಹಾಗೂ ಇತರೆ ಸಾಮುದಾಯಿಕ ಪ್ರಮಾಣಗಳನ್ನು ಹೋಲುತ್ತಿತ್ತು. ಪ್ರತಿಯೊಬ್ಬರಿಗೂ ಕಪಟ ವಿಜ್ಞಾನಿ ಡಾ. ಜೇಮೀ ಡೆವೊನ್‌ ಎನ್ನುವ ಏಐ ಪೋಸ್ಟು ಮಾಡಿದನೆನ್ನಲಾದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದರು. ಈ ಸಂದೇಶವು ಏಐಗಳನ್ನು ವಿಶೇಷವಾಗಿ ಸ್ವಯಂ ಚಾಲಿಸುವ ಕಾರುಗಳ ಕುರಿತ ವ್ಯಂಗ್ಯ ಚಿತ್ರವಾಗಿತ್ತು.

ಪ್ರಯೋಗದಲ್ಲಿ ವ್ಯಂಗ್ಯಚಿತ್ರದ ನಾಲ್ಕು ಬಗೆಗಳನ್ನು ಬಳಸಿದ್ದರು. ಮೊದಲನೆಯದು ಯಾವುದೇ ಹಾಸ್ಯವಿಲ್ಲದ ವ್ಯಂಗ್ಯಚಿತ್ರ. ಎರಡನೆಯದು ಮಾನವನ ಅಣಕವೆನ್ನಿಸುವಂಥದ್ದು. ಇದರಲ್ಲಿ ಏಐ ಅಥವಾ ಸ್ವಯಂ ಚಾಲಿಸುವ ಕಾರಿಗೆ ಭಾವನೆಗಳಿವೆ ಅಂತಲೋ ತುಂಟಾಟವಾಡುತ್ತವೆ ಅಂತಲೋ ತೋರಿಸಿದ್ದರು. ವಿಡಂಬನಾತ್ಮಕ ವ್ಯಂಗ್ಯಚಿತ್ರದಲ್ಲಿ ಏಐ ಕುರಿತು ತಿಳಿ ಹಾಸ್ಯ ಅಥವಾ ಜೋಕುಗಳಿದ್ದುವು. ನಾಲ್ಕನೆಯದು ಮಾನವನ ಅಣಕ ಹಾಗೂ ವಿಡಂಬನೆ ಎರಡೂ ಸೇರಿದ ವ್ಯಂಗ್ಯಚಿತ್ರಗಳಾಗಿದ್ದುವು.

ಈ ನಾಲ್ಕು ಬಗೆಗಳ ವ್ಯಂಗ್ಯಚಿತ್ರಗಳ ಸಂದೇಶಗಳನ್ನು ತೋರಿಸುವಾಗ, ಅವುಗಳ ಜನಪ್ರಿಯತೆಯನ್ನು ಸೂಚಿಸಲು ರೆಟ್ವೀಟು ಹಾಗೂ ಶೇರ್‌ ಸಂಖ್ಯೆಗಳನ್ನು ಸರಿಹೊಂದಿಸಿದ್ದರು. ಇದು ವಿಜ್ಞಾನಿಯ ಬಗ್ಗೆ ಜನರ ಅಭಿಪ್ರಾಯಗಳನ್ನು ಬಾಧಿಸುತ್ತದೆಯೇ ಎಂದು ಅವರಿಗೆ ನೋಡಬೇಕಿತ್ತು. ಆದರೆ ಈ ಸಂಖ್ಯೆಗಳು ಅಧ್ಯಯನದ ಪ್ರಮುಖ ಪ್ರಶ್ನೆಗೆ ಅವಶ್ಯಕವಲ್ಲದಿದ್ದರೂ, ಜನಪ್ರಿಯತೆಯು ಪ್ರಯೋಗದ ಫಲಿತಾಂಶಗಳನ್ನು ಬಾಧಿಸದಂತೆ ತಡೆಯಲು ಬೇಕಿತ್ತು.

ಚುಟುಕು ಸಂದೇಶಗಳಲ್ಲಿ ಯಾವುದಾದರೂ ಒಂದನ್ನು ನೋಡಿದವರನ್ನು ಮೂರು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಯಿತು. ಪ್ರಶ್ನೆಗಳು ಹೀಗಿದ್ದುವು. ಅವರಿಗೆ ಆ ವಿಜ್ಞಾನಿ ಎದುರಾದರೆ ಏನೆನ್ನಿಸುತ್ತದೆ: ಆತನ ಸ್ವಭಾವ ಹಿತವಾಗಿ, ಪ್ರಿಯವಾಗಿದೆಯೋ, ಸಂದೇಶದಲ್ಲಿರುವ ಮಾಹಿತಿ ಏಐ ಕುರಿತು ವಿಶ್ವಾಸಾರ್ಹ ಮೂಲ ಎನ್ನಿಸುತ್ತದೆಯೋ, ಅಥವಾ ಆ ಸಂದೇಶ ನಗು ತರಿಸುವಷ್ಟು ಹಾಸ್ಯಮಯವಾಗಿದೆಯೋ? ಇವೇ ಮೂರು ಪ್ರಶ್ನೆಗಳು.

ಈ ಪ್ರಶ್ನೆಗಳಿಗೆ ದೊರೆತ ಉತ್ತರಗಳ ವಿಶ್ಲೇಷಣೆ ತಿಳಿದಿದ್ದು. ಮೂರೂ ಬಗೆಯ ಹಾಸ್ಯಮಯ ಸಂದೇಶಗಳನ್ನು ಪಡೆದವರು,  ಅಂತಹ ಸಂದೇಶ ಪಡೆಯದವರಿಗಿಂತಲೂ ಹೆಚ್ಚು ನಕ್ಕಿದ್ದರು. ಈ ಮೂರು ಹಾಸ್ಯದ ಬಗೆಗಳಲ್ಲಿ, ವಿಡಂಬನೆ ಹಾಗೂ ಮಾನವನ ಅಣಕುಗಳೆರಡೂ ಬೆರೆತಿದ್ದ ಸಂದೇಶಗಳು ಹೆಚ್ಚು ನಗೆಯುಕ್ಕಿಸಿದ್ದುವು.  ನಗೆ ಎಂದರೆ ಖುಷಿಯ ಅನುಭವವಷ್ಟೆ. ಇದರಿಂದಾಗಿ, ಆ ಬಗೆಯ ಸಂದೇಶಗಳನ್ನು ಕಳಿಸಿದ ಅಥವಾ ಖುಷಿತಂದ ವಿಜ್ಞಾನಿಯನ್ನು ಜನರು ಹೆಚ್ಚು ಮೆಚ್ಚಿದರಲ್ಲದೆ, ಆ ಸಂದೇಶಗಳು ಏಐ ಕಳಿಸಿದವುಗಳಲ್ಲಿ ಹೆಚ್ಚು ವಿಶ್ವಾಸಾರ್ಹ ಎಂದು ಕಂಡಿದ್ದರು.

ಯಾವುದೇ ವಸ್ತುವನ್ನು ಮನುಷ್ಯನಂತೆಯೇ ಬಿಂಬಿಸುವ ಮಾನವನ ಅಣಕು ಹಾಸ್ಯಗಳು ಜಟಿಲವಾದ ವಿಷಯಗಳನ್ನೂ ಜನರಿಗೆ ಆಪ್ತವನ್ನಾಗಿಸಬಹುದು. ಉದಾಹರಣೆಗೆ, ಸ್ವಯಂಚಾಲಕ ಕಾರಿಗೆ ಕಾಫಿ ಕುಡಿಯಲು ವಿರಾಮ ಬೇಕು ಎಂದು ಯಾರಾದರೂ ವಿಜ್ಞಾನಿ ಸಂದೇಶಿಸಿದರೆ, ಜಟಿಲವಾದ ಆ ತಂತ್ರಜ್ಞಾನಕ್ಕೊಂದು ಹಾಸ್ಯಮಯ ವ್ಯಕ್ತಿತ್ವವನ್ನು ನೀಡುತ್ತದೆ. ಆದರೆ ಜನರನ್ನು ಆಕರ್ಷಿಸಲು ವಿಡಂಬನೆಯು ಚಾಟೂಕ್ತಿ ಇಲ್ಲವೇ ವ್ಯಂಗ್ಯವನ್ನು ಬಳಸುತ್ತದೆ. ಕೆಲವೊಮ್ಮೆ ಉತ್ಪ್ರೇಕ್ಷೆಯನ್ನೂ ಮಾಡಬಹುದು. ವಿಜ್ಞಾನಿಯೊಬ್ಬ ದಿನವಿಡೀ ದುಡಿಯುತ್ತಲೇ ಇರಬೇಕಲ್ಲ ಎಂದು ಏಐ ಸ್ಮಾರ್ಟ್‌ ಗಡಿಯಾರ ದೂರುತ್ತಿದೆ ಎಂದು ಜೋಕು ಮಾಡಿದರೆ, ಅದು ಏಐ ಕುರಿತ ನೀತಿಗಳು ಹಾಗೂ ಕೆಲಸದ ಒತ್ತಡಗಳ ಬಗ್ಗೆ ಅರಗಿಸಿಕೊಳ್ಳುವ ಹಾಸ್ಯದ ರೂಪದಲ್ಲಿ ತಿಳಿಸಿದಂತೆ.

ಈ ಹಾಸ್ಯ ಹೇಗೆ ಸಂದೇಶಕಾರನನ್ನು ಪ್ರಿಯವಾಗಿಸಿತು ಹಾಗೂ ಆತನನ್ನು ವಿಶ್ವಾಸಾರ್ಹ ಮಾಹಿತಿ ಮೂಲವನ್ನಾಗಿಸಿತು ಎನ್ನುವುದು ವಿಶೇಷ. ಏಐ ಕುರಿತು ಜೋಕು ಮಾಡುವುದರಿಂದ ವಿಜ್ಞಾನಿಯ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಂತೆ ಆಗುವುದಿಲ್ಲ ಎಂದು ಕೆಲವರು ವಾದಿಸಬಹುದು. ಪರಿಣತರು, ವಿದ್ವಾಂಸರು ಎಂದರೆ ಗಾಂಭೀರ್ಯ ಇರುವ ವಸ್ತುನಿಷ್ಠವಾಗಿ ಮಾತನಾಡುವವರು ಎಂದು ನಾವೆಲ್ಲ ತಿಳಿದುಕೊಂಡಿದ್ದೇವಷ್ಟೆ. ಒಂದಿಷ್ಟು ಹಾಸ್ಯ ಬೆರೆಸುವುದರಿಂದ ಈ ಭಾವನೆಗೆ ಕುಂದೇನೂ ಆಗುವುದಿಲ್ಲ ಎಂದು ಈ ಅಧ್ಯಯನ ತಿಳಿಸುತ್ತದೆ. ಬದಲಿಗೆ ಇಂತಹ ವಿಜ್ಞಾನಿಯಿಂದ ದೊರೆತ ಸಂದೇಶಗಳನ್ನು ಒಪ್ಪಿಕೊಳ್ಳುವುದರಲ್ಲಿ ಕೇಳುಗರಿಗೆ ಸಂಕೋಚವಿರಲಿಲ್ಲ. ಇದು ವಿಜ್ಞಾನಿಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಇರುವ ಅವರ ಕೇಳುಗರ ನಡುವಣ ಬಾಂಧವ್ಯವನ್ನು ಇನ್ನಷ್ಟು ಭದ್ರಗೊಳಿಸುತ್ತವೆ.

ಭಾರತದಲ್ಲಿಯೂ ಹಲವು ವಿಜ್ಞಾನಿಗಳು ವೈಜ್ಞಾನಿಕ ಹಾಗೂ ಸಾಮಾಜಿಕ ವಿಷಯಗಳನ್ನು ಚರ್ಚಿಸಲು ಹಾಸ್ಯವನ್ನು ಬಳಸುತ್ತಾರೆ. ಇಪ್ಪತ್ತಮೂರು ಸಾವಿರಕ್ಕೂ ಮಿಗಿಲಾದ ಬೆಂಬಲಿಗರಿರುವ ನಿರ್ಮಾಲ್ಯ ಕಜೂರಿ ಹಾಗೂ ಹನ್ನೆರಡು ಸಾವಿರಕ್ಕೂ ಹೆಚ್ಚು ಬೆಂಬಲಿಗರಿವು ಮನು ಅವಸ್ಥಿ ಸಾಮಾಜಿಕ ಮಾಧ್ಯಮದಲ್ಲಿ ಬಲು ಜನಪ್ರಿಯರಾದ ವಿಜ್ಞಾನಿಗಳು. ವಿಜ್ಞಾನದ ವಿಷಯಗಳೊಟ್ಟಿಗೆ ಹಾಸ್ಯವನ್ನು ಬೆರೆಸುವುದರಲ್ಲಿ ಸಿದ್ಧಹಸ್ತರು ಕೂಡ. ಹಾಸ್ಯ ಹಾಗೂ ವಿಜ್ಞಾನವನ್ನು ಒಟ್ಟುಗೂಡಿಸುವ ಇನ್ನೊಂದು ಯತ್ನವನ್ನು ಬೆಂಗಳೂರಿನ ನ್ಯಾಶನಲ್‌ ಸೆಂಟರ್‌ ಫಾರ್‌ ಬಯಾಲಾಜಿಕಲ್‌ ಸೈನ್ಸಸಿನ ವಿಜ್ಞಾನಿ ಶಶಿ ತುಟ್ಟುಪಳ್ಳಿ ಮಾಡುತ್ತಿದ್ದಾರೆ. ಹಾಸ್ಯಗಾರ ಬಿಸ್ವ ಕಲ್ಯಾಣ್‌ ಜತೆಗೂಡಿ ಹಾಸ್ಯಭರಿತ ವಿಜ್ಞಾನದ ಪಾಡ್‌ಕಾಸ್ಟನ್ನು ಬಿತ್ತರಿಸುತ್ತಿದ್ದಾರೆ. ಜಾಗತಿಕವಾಗಿ ಇಸ್ರೇಲಿನ ಟೆಲ್‌ ಅವಿವ್‌ ವಿಶ್ವವಿದ್ಯಾನಿಲಯದ ಓಡೆಡ್‌ ರೆಚಾವಿ ವಿಜ್ಞಾನದ ಜಗತ್ತಿನ ವಿಶಿಷ್ಟ ಸವಾಲುಗಳನ್ನು ಮೀಮ್‌ ಹಾಗೂ ವಿಡಂಬನಾತ್ಮಕ ಸಂದೇಶಗಳ ಮೂಲಕ ಹರಡುತ್ತಿದ್ದಾರೆ. ಈತನಿಗೆ ಒಂದೂವರೆ ಲಕ್ಷದಷ್ಟು ಬೆಂಬಲಿಗರು ಇದ್ದಾರೆ. ಸುಳ್ಳು ಸುದ್ದಿಗಳು ತಾಂಡವಾಡುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿ, ಹಾಸ್ಯ ಬೆರೆತಿದ್ದರೂ, ಈ ವಿಜ್ಞಾನಿಗಳ ಸಂದೇಶಗಳನ್ನು ವಿಶ್ವಾಸದಿಂದ ಕಾಣಲಾಗುತ್ತಿದೆ.

ಇಷ್ಟಾದರೂ, ಹಾಸ್ಯ ಎನ್ನುವುದು ಎರಡಲುಗಿನ ಕತ್ತಿಯಂತೆ ಎನ್ನುತ್ತಾರೆ ಈ ಸಂಶೋಧಕರು. ಒಂದೆಡೆ ವಿಜ್ಞಾನಿಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಅದು, ಇನ್ನೊಂದೆಡೆ ಪರಿಣತರಲ್ಲದವರು ಸುಳ್ಳುಸುದ್ದಿ ಹಾಗೂ ಕಪಟಮಾಹಿತಿಯನ್ನು ವಿತರಿಸಲೂ ನೆರವಾಗಬಲ್ಲುದು. ಆನ್‌ಲೈನಿನಲ್ಲಿ ಕಪಟವ್ಯಕ್ತಿಗಳು ಹಾಗೂ ಯಾಂತ್ರಿಕ ಸಂದೇಶಗಳು ಯಥೇಚ್ಛವಾಗಿರುವ ಈ ಕಾಲದಲ್ಲಿ ಗ್ರಾಹಕರು ಮಾಹಿತಿಯ ಮೂಲದ ವಿಶ್ವಾಸಾರ್ಹತೆ ಹಾಗೂ ಅದನ್ನು ವಿತರಿಸುತ್ತಿರುವ ವ್ಯಕ್ತಿಯ ಬಗ್ಗೆ ಎಚ್ಚರ ವಹಿಸಬೇಕು. ಜೊತೆಗೆ ಹಾಸ್ಯ ಎನ್ನುವುದು ಸಾರ್ವತ್ರಿಕವಲ್ಲ. ಒಬ್ಬರ ಹಾಸ್ಯ ಇನ್ನೊಬ್ಬರಿಗೆ ನೋವಾಗಬಹುದು. ಆದ್ದರಿಂದ ಅದನ್ನು ಬಳಸುವಾಗ ವಿಜ್ಞಾನಿಗಳ ಎಚ್ಚರದಿಂದ ನಡೆಯಬೇಕಾಗುತ್ತದೆ. ಏಕೆಂದರೆ ವಿವಾದಾಸ್ಪದವಾದ ಹಾಸ್ಯದ ಪರಿಣಾಮಗಳು ಗಂಭೀರವಾಗಿರುತ್ತವೆ ಎನ್ನುತ್ತಾರೆ ಸಂಶೋಧಕರು.

ಈ ಅಧ್ಯಯನವನ್ನು ಸ್ವಲ್ಪ ಎಚ್ಚರದಿಂದಲೇ ಒಪ್ಪಿಕೊಳ್ಳಬೇಕಿದೆ. ಏಕೆಂದರೆ ಅಮೆರಿಕದಲ್ಲಿ ನಡೆದಿರುವ ಅಧ್ಯಯನದಲ್ಲಿ ಬಳಸಿದ ಹಾಸ್ಯದ ಸಂದರ್ಭಗಳು ಅಮೆರಿಕಕ್ಕೆ ಒಗ್ಗುವಂಥವು. ಇವನ್ನು ಪ್ರಪಂಚದ ಇತರೆ ಭಾಗಗಳಿಗೆ ಬಹುಶಃ ಅನುವಾದಿಸಲು ಸಾಧ್ಯವಿಲ್ಲ. ಅಲ್ಲದೆ ಇದು ಹಾಸ್ಯವೇ ಜನರ ಮೆಚ್ಚುಗೆಗೆ ಕಾರಣವೆಂದು ಕಾರ್ಯ ಕಾರಣ ಸಂಬಂಧವನ್ನು ಸ್ಪಷ್ಟ ಪಡಿಸಿಲ್ಲ. ಇತರೆ ಅಂಶಗಳೂ ಅದರಲ್ಲಿ ಭಾಗಿಯಾಗಿರಬಹುವ ಸಾಧ್ಯತೆಗಳಿವೆ.

ತಂತ್ರಜ್ಞಾನ ದಾಪುಗಾಲಿಡುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಹರಿದಾಡುವುದನ್ನು ನಾವು ಕಾಣಲಿದ್ದೇವೆ. ಇವುಗಳಲ್ಲಿ ಕೆಲವಷ್ಟೆ ಸತ್ಯವಾಗಿದ್ದು, ಬಹುತೇಕ ಸುಳ್ಳಾಗಿರುತ್ತವೆ. ಜನಾಕರ್ಷಣೆಯ ಶೀರ್ಷಿಕೆಗಳು, ಬಿಸಿ, ಬಿಸಿ ವಾದವಿವಾದಗಳು, ಉತ್ಪ್ರೇಕ್ಷೆ, ಹಾಗೂ ಭಯಗೊಳಿಸುವ ಕಥೆಗಳಿಂದ ತುಂಬಿರುವ ಈ ಮಾಧ್ಯಮದಲ್ಲಿ ಜೋಕು ಹೇಳುವುದು ನಗೆಯುಕ್ಕಿಸುವುದರ ಬದಲಿಗೆ ಕಿಡಿ ಹಾರಿಸುವದೇ ಹೆಚ್ಚು. ಹಾಗಿದ್ದೂ, ಒಂದಿಷ್ಟು ಹಾಸ್ಯ ಗಾಂಭೀರ್ಯದ ತೆರೆಯನ್ನು ಹರಿದು, ಜನರನ್ನು ಆಕರ್ಷಿಸಿ, ಕುತೂಹಲವನ್ನು ಹೆಚ್ಚಿಸಿ, ನಂಬಿಕೆಯನ್ನು ಬೆಳೆಸುತ್ತದಾದರೆ, ಜಟಿಲವಾದ ವಿಷಯಗಳನ್ನು ಜನರಿಗೆ ತಲುಪಿಸಲು ಅದೊಂದು ಉತ್ತಮ ಸಾಧನವಾದೀತು. ಹೆಚ್ಚು ಕಲಿಸಲು, ಕಲಿಯಲು ನೆರವಾದೀತು. 


ರೀಸರ್ಚ್‌ ಮ್ಯಾಟರ್ಸ್‌ ಸಿದ್ಧಪಡಿಸಿದ ವರದಿಯನ್ನು  ಜಾಣಸುದ್ದಿ ಕನ್ನಡಿಸಿ, ಧ್ವನಿಮುದ್ರಿಸಿದೆ


Kannada