ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

ಗೌಳಿಗಳನ್ನು ಗುರುತಿಸುವುದರಲ್ಲಿ ಅನುವಂಶಿಕತೆಯ ಪಾತ್ರ.

Mumbai
6 Jan 2021
ಗೌಳಿಗಳನ್ನು ಗುರುತಿಸುವುದರಲ್ಲಿ ಅನುವಂಶಿಕತೆಯ ಪಾತ್ರ.

ಸ್ನೆಮಾಸ್ಪಿಸ್ ರಿಷಿವ್ಯಾಲಿಯೆನ್ಸಿಸ್ (ಫೋಟೋ:ಅಕ್ಷಯ್ ಖಾಂಡೇಕರ್)

2007 ರ ಬೇಸಿಗೆಯ ಒಂದು ಸಂಜೆ, ಸರೀಸೃಪ ವಿಜ್ಞಾನಿ ಡಾ. ಈಶಾನ್ ಅಗರ್ವಾಲ್ ಆಂಧ್ರಪ್ರದೇಶದ ರಿಷಿ ವ್ಯಾಲಿಯ ಗುಡ್ಡಗಳ ಶೋಧನೆ ನಡೆಸಿದ್ದರು. ತಮ್ಮ ಅಚ್ಚುಮೆಚ್ಚಿನ ಜೀವಿಗಳಾದ ಹಲ್ಲಿಗಳಿಗಾಗಿ ಅವರು ಕಲ್ಲುಬಂಡೆಗಳ ಕೆಳಗೆ, ಬಿರುಕುಗಳ ಮಧ್ಯೆ ಹಾಗೂ ಮುಳ್ಳಿನ ಪೊದೆಗಳಲ್ಲಿ ಹುಡುಕಾಡುತ್ತಿದ್ದರು. ಹಲವಾರು ಹಲ್ಲಿಗಳನ್ನು ಕಂಡ ಅವರು ಕೆಲವನ್ನು  ಆ ಹಿಂದೆಯೂ  ನೋಡಿದ್ದರು ಹಾಗೂ ಅವುಗಳ ಹೆಸರುಗಳೂ ನೆನಪಿದ್ದವು. ಆದರೆ ಅವರು ಗುರುತಿಸಲಾರದಂತಹ  ಎರಡು ಹಲ್ಲಿಗಳಿದ್ದವು; ಹಾಗಾಗಿ, ಅವುಗಳ ಬಗ್ಗೆ ಹೆಚ್ಚು ತಿಳಿಯಲು ಅವರು ತಮ್ಮ ಶೋಧನಾ ಕಾರ್ಯವನ್ನು  ಪ್ರಾರಂಭಿಸಿದರು. ಈ ವರ್ಷ, ಅಂದರೆ ಅವುಗಳನ್ನು ಕಂಡ ಹದಿಮೂರು ವರ್ಷಗಳ ನಂತರ ಅವರು ಮತ್ತು ಅವರ ಸಹೋದ್ಯೋಗಿಗಳು ಆ ಹಲ್ಲಿಗಳನ್ನು ವಿಜ್ಞಾನಕ್ಕೆ ಹೊಸತಾದ ಎರಡು ಜಾತಿ (ಸ್ಪೀಷೀಸ್ ) -  ರಿಷಿ ವ್ಯಾಲಿ ಡ್ವಾರ್ಫ್ ಗೆಕೋಗಳು  - (ಸ್ನೆಮಾಸ್ಪಿಸ್ ರಿಷಿವ್ಯಾಲಿಯೆನ್ಸಿಸ್ ಮತ್ತು ಹೆಮಿಡಾಕ್ಟ್ರೈಲಸ್ ರಿಶಿವ್ಯಾಲಿಯೆನ್ಸಿಸ್) - ಎಂದು ವಿವರಿಸಿದ್ದಾರೆ.

ಹಲ್ಲಿಗಳನ್ನು ಗುರುತಿಸುವುದು ಕಷ್ಟದ ಕೆಲಸ. ಹಲವೊಮ್ಮೆ ಎರಡು ಬೇರೆಬೇರೆ ಜಾತಿಯ ಹಲ್ಲಿಗಳನ್ನು ಗುರುತಿಸಲು, ಅವುಗಳ ದೇಹದ ಮೇಲಿನ ಹುರುಪೆಗಳ ಸಂಖ್ಯೆ ಅಥವಾ ಅವುಗಳ ಡಿಏನ್ಎ ನಲ್ಲಿ ಕಂಡುಬರುವ ಸಣ್ಣ ಸಣ್ಣ ವ್ಯತ್ಯಾಸಗಳು ನೆರವಾಗುತ್ತವೆ. ಅನುಭವವಿಲ್ಲದ ಕಣ್ಣುಗಳಿಗೆ  ಇವೆಲ್ಲ  ಕಾಣದೆಯೇ ಇರಬಹುದು!  ತಮ್ಮ ಶೋಧನೆಯ ಬಗ್ಗೆ ನೆನಪಿಸಿಕೊಳ್ಳುತ್ತಾ ಈಶಾನ್ ಅವರು, “ಹಲ್ಲಿಗಳ ದೇಹರಚನೆಯ ಸೂಕ್ಷ್ಮ ಪರಿಶೀಲನೆಯಿಂದ ಮತ್ತು ಅಣು ಸೂಚಕಗಳ ನೆರವಿನಿಂದ ಮಾತ್ರ ಇವುಗಳು ಎರಡು ಹೊಸ ಜಾತಿಗಳು ಎಂದು ಗ್ರಹಿಸಲು  ಸಾಧ್ಯವಾಯಿತು” ಎನ್ನುತ್ತಾರೆ. ನೈಸರ್ಗಿಕ ಪ್ರಪಂಚದ ಬಗ್ಗೆ ರಿಷಿ ಕಣಿವೆಯಲ್ಲಿಯೇ ಆಸಕ್ತಿ ಬೆಳೆಸಿಕೊಂಡ ಅವರಿಗೆ ಅದು ಅತ್ಯಂತ ಸಂತಸದ ಕ್ಷಣ.

ಕೆಲವು ವರ್ಷಗಳ ಹಿಂದೆ, ಈಶಾನ್ ಅವರು ತಮ್ಮ  ಪಿ ಎಚ್ ಡಿ ಯ ಸಲುವಾಗಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದ್ದಾಗ, ಕರ್ನಾಟಕದ ಒಂದು ಗಿರಿಧಾಮವಾದ ಸಕಲೇಶಪುರದ ರಸ್ತೆಬದಿಯ ಕಲ್ಲು-ಬಂಡೆಗಳ ನಡುವಿನಿಂದ ಕೆಲವು ಗೌಳಿಗಳನ್ನು ಸಂಗ್ರಹಿಸಿದ್ದರು. ಅವು ಹಿಂದೆ ನಿರೊಪಿಸಲಾಗಿದ್ದ - ಗುಂಡ್ ಡೇ ಗೆಕೋ (ಸ್ನೇಮಾಸ್ಪಿಸ್ ಹೆಟಿರೋಫೋಲಿಸ್) ಎಂಬ ಒಂದು ಜಾತಿಗೆ ಸೇರಿದವು ಎಂದು ಅವರು ಭಾವಿಸಿದ್ದರು. ಬಹಳ ದಿನಗಳ ನಂತರ ಅವರ ಸಹಯೋಗಿಗಳಲ್ಲಿ ಒಬ್ಬರಾದ, ‘ಥಾಕರೇ ವೈಲ್ಡ್ ಲೈಫ್ ಫೌಂಡೇಶನ್’ನ ಅಕ್ಷಯ್ ಖಾಂಡೇಕರ್ ಅವರು, ಆ ಗೌಳಿಗಳು ಪೂರ್ಣತಃ ಬೇರೆ ಜಾತಿಯೇ ಇರಬಹುದೆಂದು ಸೂಚಿಸಿದರು. ಹೌದು, ಅದು ಬೇರೆಯೇ ಆಗಿದ್ದವು! 

ಹೊಸ ಜಾತಿಗಳನ್ನು ಗುರುತಿಸುವುದು ಅಷ್ಟು ಕಷ್ಟವೇಕೆ? ಮೇಲ್ಕಂಡ ಸಂದರ್ಭದಲ್ಲಿ ವಿಜ್ಞಾನಿಗಳಿಗೆ ಸ್ನೇಮಾಸ್ಪಿಸ್ ಹೆಟಿರೋಫೋಲಿಸ್ ಬಗ್ಗೆ ತಿಳಿದಿರುವುದು ಒಂದೇ ಒಂದು ಹೆಣ್ಣು ಗೌಳಿ ಮಾದರಿಯ ಮೂಲಕ. ಸಕಲೇಶಪುರದ ಗಂಡುಗೌಳಿಗಳ ದೇಹರಚನೆ ಹಾಗೂ ಅನುವಂಶಿಕತೆಯ ಸಂಪೂರ್ಣ ಮಾಹಿತಿ ಪಡೆಯುವವರೆಗೂ ಅವು ಪೂರ್ಣತಃ ಬೇರೆ ಜಾತಿಯವು ಎಂಬುದನ್ನು ಧೃಡಪಡಿಸಲು, ಸಾಧ್ಯವಾಗಲಿಲ್ಲ. ಅದನ್ನು ಸ್ನೇಮಾಸ್ಪಿಸ್ ಮ್ಯಾಗ್ನಿಫಿಕ ಅಥವಾ ‘ಮ್ಯಾಗ್ನಿಫಿಸೆಂಟ್ ಡ್ವಾರ್ಫ್ ಗೆಕೋ’ ಎಂದು ವರ್ಣಿಸಿ ಹಾಗೂ ಈ ವರ್ಷ, ಸವಿಸ್ತಾರವಾದ ಒಂದು ಸಂಶೋಧನಾ ಲೇಖನದಲ್ಲಿ ಅದನ್ನು ವಿವರಿಸಿದರು.

“ಅನೇಕ ಬಾರಿ ಇದು ಆಗುವುದೇ ಹೀಗೆ.  ಸುಧೀರ್ಘ ಹಾಗೂ  ಕೂಲಂಕಷ  ಪ್ರಕ್ರಿಯೆಯ ನಂತರವೂ, ನೀವು ಕಂಡುಹಿಡಿದ ಹೊಸ ಜಾತಿಗೆ ಈ ಹಿಂದೆ ಅದಕ್ಕೆ ಯಾವುದೇ ಹೆಸರು ಕೊಟ್ಟಿಲ್ಲವೆಂದು ಅರಿವಾಗುತ್ತದೆ.” ಎಂದು ಈಶಾನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.


 ಮ್ಯಾಗ್ನಿಫಿಸೆಂಟ್ ಡ್ವಾರ್ಫ್ ಗೆಕೋ (ಸ್ನೇಮಾಸ್ಪಿಸ್ ಮ್ಯಾಗ್ನಿಫಿಕ) [ಚಿತ್ರ:ತೇಜಸ್ ಥ್ಯಾಕರೆ]

ಗೌಳಿಗಳು ಒಂದು ಬಗೆಯ ಹಲ್ಲಿಗಳು. ಅವುಗಳ ವೈಶಿಷ್ಟ್ಯವೆಂದರೆ ನೆಟ್ಟಗಿನ ಗೋಡೆ ಮತ್ತು ಬಂಡೆಗಳ ಮೇಲೆ ಹತ್ತಲು, ಮತ್ತು ತಲೆಕೆಳಗಾಗಿ ಕೂಡ ನಡೆದಾಡಲು ನೆರವಾಗುವ  ಅಂಟು ಬೆರಳುಗಳು. ನಿಮ್ಮ ಮನೆಯಲ್ಲಿ ಕಾಣಸಿಗುವ ಹಲ್ಲಿಗಳೂ ಗೌಳಿಗಳೇ. ಇದುವರೆಗಿನ ಗಣನೆಯ ಪ್ರಕಾರ ಭಾರತ ದೇಶವು ೩೨೦ ಜಾತಿಯ ಹಲ್ಲಿಗಳ ತವರು. ಈಶಾನ್ ಹಾಗೂ ಅವರ ಸಹಯೋಗಿಗಳು - ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಥ್ಯಾಕರೆ ವೈಲ್ಡ್ ಲೈಫ್ ಫೌಂಡೇಶನ್ ಮತ್ತು ಇತರ ಸಂಶೋಧನಾ ಸಂಸ್ಥೆಗಳ ಸಂಶೋಧಕರು - ಕಳೆದ ಹತ್ತು ವರ್ಷಗಳಲ್ಲಿ ೩೫ ಹೊಸ ಜಾತಿಯ ಗೌಳಿಗಳನ್ನು ಪತ್ತೆ ಮಾಡಿದ್ದಾರೆ. ಈ  ವರ್ಷದಲ್ಲೇ ಅವರು ಕಂಡುಹಿಡಿದು, ವರ್ಣಿಸಿರುವ  ಗೌಳಿಗಳ ಸಂಖ್ಯೆ ೧೩! 

ಗೌಳಿಗಳು ದೇಶದ ವಿವಿಧ ಆವಾಸಸ್ಥಾನಗಳಲ್ಲಿ - ಪಶ್ಚಿಮ ಘಟ್ಟದ ಮಳೆಗಾಡುಗಳಿಂದ ಹಿಡಿದು,  ಥಾರ್ ಮರುಭೂಮಿಯ ಶುಷ್ಕ / ಒಣ ಪ್ರದೇಶಗಳ ವರೆಗೂ ಕಂಡುಬರುತ್ತವೆ. ಕೆಲವು ಗೌಳಿಗಳು  ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿರುತ್ತವೆ. ಗೌಳಿಗಳ ಆವಾಸಸ್ಥಾನಗಳು  ವೈವಿಧ್ಯಮಯವಾದ್ದರಿಂದ ವಿಶೇಷವಾಗಿ ತಮಿಳುನಾಡಿನಲ್ಲಿ  ಅನೇಕ ಜಾತಿಗಳು ಕಂಡುಬರುತ್ತವೆ. ಈ ವರ್ಷ ನೀಲಗಿರಿ ಸ್ಲೆಂಡರ್ ಗೇಕೋ (ಹೆಮಿಫಿಲೋಡ್ಯಾಕ್ಟಾಯ್ಲಸ್ ನೀಲ್ಗಿರಿಯೆನ್ಸಿಸ್) ಎಂಬ ಗೌಳಿಯನ್ನು ನೀಲಗಿರಿಯ ಎಲೆ ಉದುರುವ ಕಾಡುಗಳಲ್ಲಿ ಪತ್ತೆಹಚ್ಚಲಾಯಿತು. ಕಾಲಕ್ಕಾಡ್-ಮುಂಡಂತುರೈ ಹುಲಿಮೀಸಲು ಪ್ರದೇಶದ ನಿತ್ಯಹಸಿರು ಕಾಡಿನಲ್ಲಿ ಅವಿತುಕೊಂಡಿದ್ದ ಕೆಟಿಎಂಅರ್ ಸ್ಲೆಂಡರ್ ಗೇಕೋ (ಹೆಮಿಡ್ಯಾಕ್ಟಾಯ್ಲಸ್ ಪೆನಿನ್ಸುಲಾರಿಸ್)ಎಂಬ ಗೌಳಿಯನ್ನು ಪತ್ತೆ ಮಾಡಲಾಯಿತು. ಬಹಳ ಅಪರೂಪದ ಸಿರುಮಲೈ ರಾಕ್ ಗೆಕೋವನ್ನು (ಹೆಮಿಡ್ಯಾಕ್ಟಾಯ್ಲಸ್ ಸಿರುಮಲೈಯೆನ್ಸಿಸ್) ಸಿರುಮಲೈ ಬೆಟ್ಟದ ಕುರುಚಲು ಕಾಡಿನಲ್ಲಿ  ಗುರುತಿಸಿದರು. ಇದು, ಕಳೆದ ೧೩೩ ವರ್ಷಗಳಲ್ಲಿ ಸಿರುಮಲೈ ಗುಡ್ಡದ ಕಾಡಿನಲ್ಲಿ ಕಂಡುಹಿಡಿಯಲಾದ ಮೊದಲ ಸ್ಥಳೀಯ ಜಾತಿ ಹಾಗೂ ಏಕೈಕ ಕಶೇರುಕ ಪ್ರಾಣಿ!

ಕೆಟಿಎಂಅರ್ ಸ್ಲೆಂಡರ್ ಗೇಕೋ (ಹೆಮಿಡ್ಯಾಕ್ಟಾಯ್ಲಸ್ ಪೆನಿನ್ಸುಲಾರಿಸ್)- ಚಿತ್ರ: ಸೌನಕ್ ಪಾಲ್ 

ಇದುವರೆಗೆ ಕಂಡುಹಿಡಿಯಲಾದ ಗೌಳಿ ಜಾತಿಗಳಲ್ಲಿ ಹೆಚ್ಚಿನವು ಚಿಕ್ಕ ಚಿಕ್ಕ ಭೌಗೋಳಿಕ ಪ್ರದೇಶಕ್ಕೆ ಸೀಮಿತ. ಈ ವರ್ಷ ಕಂಡುಹಿಡಿಯಲಾದ ಸ್ಟಾರ್ ಡಸ್ಟ್ ಡ್ವಾರ್ಫ್ ಗೆಕೋ (ಸ್ನೇಮಾಸ್ಪಿಸ್ ಸ್ಟೆಲ್ಲಾಪಲ್ವಿಸ್) ಕರ್ನಾಟಕದ ಎಡೆಯೂರಿನ ಬಳಿ ಇರುವ ಬೆಣಚುಕಲ್ಲಿನ ಒಂದು ಒಂಟಿ ಗುಡ್ಡದ ಮೇಲೆ ಮಾತ್ರ ಕಂಡುಬರುತ್ತದೆ. ಸಬಿನ್ಸ್ ನೆಲ್ಲೂರ್ ಡ್ವಾರ್ಫ್ ಗೆಕೋ (ಸ್ನೇಮಾಸ್ಪಿಸ್ ಅವಸಬಿನೇ) ಆಂಧ್ರಪ್ರದೇಶದ ನೆಲ್ಲೂರಿನ ಕಾಡಿನಲ್ಲಿ ನೀರಿನ ಹಳ್ಳವೊಂದರ ಬಳಿ ಪತ್ತೆ ಮಾಡಲಾಯಿತು. ಅರ್ಬನ್ ಬೆಂಟ್ ಟೋಡ್ ಗೆಕೋ ಗುವಾಹಟಿಯ ಬಳಿ ನಶಿಸಿಹೋದ  ಅರಣ್ಯದಲ್ಲಿ ಪತ್ತೆ ಮಾಡಲಾಯಿತು. ಮೈಸೂರು ಪ್ರಸ್ಥಭೂಮಿಯು, ಉಬ್ಬುತಗ್ಗುಗಳಿಂದ ಕೂಡಿದ, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ, ಹಾಗೂ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡುಗಳಲ್ಲಿ ಹರಡಿಕೊಂಡಿರುವ ಪ್ರದೇಶ. ಈ ವರ್ಷ ಇಲ್ಲಿ ಮೂರು ಹೊಸ ಜಾತಿಯ ಗೌಳಿಗಳನ್ನು - ಗ್ರಾನೈಟ್ ಡ್ವಾರ್ಫ್ ಗೆಕೋ( ಸ್ನೇಮಾಸ್ಪಿಸ್ ಗ್ರಾನೈಟಿಕೋಲ) ಗೋಲ್ಡನ್ ಬ್ಯಾಂಡೆಡ್  ಡ್ವಾರ್ಫ್ ಗೆಕೋ (ಸ್ನೇಮಾಸ್ಪಿಸ್ ಬಂಗಾರ) ಮತ್ತು ಎಲಗಿರಿ  ಡ್ವಾರ್ಫ್ ಗೆಕೋಗಳನ್ನು (ಸ್ನೇಮಾಸ್ಪಿಸ್ ಏಳಗಿರಿಯೆನ್ಸಿಸ್)- ಪತ್ತೆಹಚ್ಚಲಾಯಿತು.

 ಗೋಲ್ಡನ್ ಬ್ಯಾಂಡೆಡ್  ಡ್ವಾರ್ಫ್ ಗೆಕೋ (ಸ್ನೇಮಾಸ್ಪಿಸ್ ಬಂಗಾರ) (ಚಿತ್ರ: ತೇಜಸ್ ಥ್ಯಾಕರೆ)

ಅಷ್ಟೊಂದು ಹೊಸ ಜಾತಿಗಳು ಸಿಗುವುದು ಪವಾಡವಲ್ಲ. ನಮ್ಮ ಸುತ್ತಲೂ ಅನೇಕ ಜಾತಿಯ ಗೌಳಿಗಳಿವೆ, ಆದರೆ ನಾವು ಅವುಗಳನ್ನು ಅರ್ಥಮಾಡಿಕೊಳ್ಳಲು ಈಗ ಪ್ರಾರಂಭಿಸಿದ್ದೇವೆ ಎನ್ನುವುದು ತರ್ಕಬದ್ಧ ವಿಚಾರಣೆ. ಈಶಾನ್ ಅವರು, “ಭಾರತದ ಸರೀಸೃಪ ಸಂಕುಲವನ್ನು- ಮುಖ್ಯವಾಗಿ ಹಲ್ಲಿಗಳು ಮತ್ತು ಗೌಳಿಗಳನ್ನು ವಿಶಿಷ್ಟವಾಗಿ   ಅರ್ಥಮಾಡಿಕೊಳ್ಳುವುದರಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿರುವುದರಿಂದ  ಭಾರತದಲ್ಲಿ ಸರೀಸೃಪಗಳ ವರ್ಗೀಕರಣ ಆವಿಷ್ಕಾರದ ಎರಡನೇ ಹಂತವನ್ನು ಹಾದುಹೋಗುತ್ತಿದೆ. ಬಹುಶಃ ಭಾರತದಲ್ಲಿ ಸುಮಾರು ೧೦೦ ಅಥವಾ ಇನ್ನೂ ಹೆಚ್ಚಿನ  ಗೌಳಿಗಳಿಗೆ  ನಾಮಕರಣ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ, ದಕ್ಷಿಣ ಭಾರತದ ಬೆಟ್ಟಗಳು ಮತ್ತು ಪೂರ್ವ ಘಟ್ಟಗಳು ಬಹಳ ವೈವಿಧ್ಯಮಯ ಪ್ರದೇಶಗಳು. ಆದರೆ ಹೊಸ ಜಾತಿಗಳು ಎಲ್ಲೆಡೆಯೂ ಇರುತ್ತವೆ”

ಸರೀಸೃಪ ವಿಜ್ಞಾನಿಯ ಕೈಚಳಕ / ಮಂತ್ರದಂಡ

ಸರೀಸೃಪ ವಿಜ್ಞಾನಿಗಳಿಗೆ ಗೌಳಿಗಳ ಕುಲವನ್ನು ಗುರುತಿಸಲು ಒಂದು ಕ್ಷಣ ಸಾಕು. ಆದರೆ ಅಷ್ಟು ಪರಿಚಯವಿಲ್ಲದ ಯಾವುದಾದರೂ ಗೌಳಿ ಕಂಡುಬಂದರೆ, ತಮ್ಮಲ್ಲಿರುವ ಅನೇಕ ತಂತ್ರಗಳನ್ನು ಉಪಯೋಗಿಸುತ್ತಾರೆ. ಮೊದಲನೆಯದು ಆ ಹಲ್ಲಿಯ ವಿವಿಧ ಭಾಗಗಳನ್ನು ಅಳೆಯುವ ಒಂದು ಸಾಧನ. ಅದು ಹಲ್ಲಿಯ ಕೈಕಾಲುಗಳು, ಕಣ್ಣುಗಳು, ಬಾಲ, ಮೂಗಿನ ತುದಿಯಿಂದ ಬಾಲದ ಬುಡದವರೆಗಿನ ದೂರ, ದೇಹದ ಅಗಲ ಮುಂತಾದ ೩೦ ವಿಧದ  ಅಳತೆಗಳನ್ನು ಮಾಡುತ್ತದೆ! ಬಹಳಷ್ಟು ಗೌಳಿಗಳಿಗೆ ದೇಹದ ಬಣ್ಣ, ಹುರುಪೆಗಳ ಸಂಖ್ಯೆ, ಮತ್ತು ದೇಹದ ಬೇರೆ ಬೇರೆ ಭಾಗಗಳಲ್ಲಿರುವ ರಂಧ್ರಗಳು ಗುರುತಿಸಬಲ್ಲ ಸೂಚಕಗಳಾಗಿರುತ್ತವೆ. 

ಡಿ ಏನ್ ಎ ಅನುಕ್ರಮಣಿಕೆ ಬಂದ  ನಂತರ, ಜೀವಿಗಳ ಜಾತಿಯನ್ನು ಗುರುತಿಸುವುದು ಕೇವಲ ಆ ಮಾದರಿಯ ಹೊರಲಕ್ಷಣಗಳನ್ನು ಆಧರಿಸಿಲ್ಲ. “ಒಂದೇ ರೀತಿ ಕಾಣುವ ಎರಡು ಗೌಳಿಗಳು, ಎರಡು ಬಗೆಯ ವಿಕಸನ ವಂಶಾವಳಿಯನ್ನು ಪ್ರತಿನಿಧಿಸುತ್ತವೆ ಹಾಗೂ ಅವುಗಳಿಗೆ  ವಿಭಿನ್ನ ಇತಿಹಾಸ ಇರಬಹುದು ಎಂದು ಅರ್ಥಮಾಡಿಕೊಳ್ಳಲು ಡಿ ಏನ್ ಎ ಅನುಕ್ರಮದ ದತ್ತವು ನೆರವಾಗುತ್ತದೆ” ಎಂದು ಈಶಾನ್ ಅವರು ವಿವರಿಸುತ್ತಾರೆ. ಆದ್ದರಿಂದ  ಸರೀಸೃಪ ವಿಜ್ಞಾನಿಗಳು ತಾವು ಅಧ್ಯಯನ ಮಾಡುತ್ತಿರುವ ಗೌಳಿಯ ಅಂಗಾಂಶಗಳ  ಮಾದರಿಯನ್ನೂ  ಸಂಗ್ರಹಿಸುತ್ತಾರೆ.

ಗೌಳಿಗಳ ವರ್ಗೀಕರಣವನ್ನು ಅರ್ಥ ಮಾಡಿಕೊಳ್ಳಲು ಅವುಗಳ ವಿಕಸನದ ಇತಿಹಾಸವೂ ಸಹ ಕೆಲವು ಮುಖ್ಯ ಸುಳಿವುಗಳನ್ನು ನೀಡುತ್ತವೆ. ಉದಾಹರಣೆಗೆ, ಮೈಸೂರು ಪ್ರಸ್ಥಭೂಮಿಯ ಮೂರು ಗೌಳಿಗಳ ಡಿ ಏನ್ ಎ ವಿಶ್ಲೇಷಣೆಯು, ಅವು ೨೫ ಮಿಲಿಯನ್ ವರ್ಷಗಳ ಹಿಂದೆ ಹೆಚ್ಚು ಶೀತವಿರುವ ಮಳೆಗಾಡುಗಳಲ್ಲಿ ವಿಕಾಸನಗೊಂಡವು ಎಂಬುದನ್ನು ಸೂಚಿಸುತ್ತವೆ. ಇಂದು ಮೈಸೂರು ಪ್ರಸ್ಥಭೂಮಿ ಪ್ರಧಾನವಾಗಿ ಒಣ ಹಾಗೂ ಬೆಚ್ಚಗಿನ ಹವೆಯಿಂದ ಕೂಡಿದ್ದರೂ ಅಲ್ಲಲ್ಲಿ ತಣ್ಣನೆಯ ಚಿಕ್ಕ ಚಿಕ್ಕ ಗುಡ್ಡಗಳು, ಶಿಲಾಸ್ತರಗಳು ಕಂಡುಬರುತ್ತವೆ. ಆ  ರೀತಿಯ ಚಿಕ್ಕ ಆಶ್ರಯತಾಣಗಳಲ್ಲಿ ಈ ಗೌಳಿಗಳು ಇಂದಿಗೂ ಕಾಣಸಿಗುತ್ತವೆ. ಹವಾಮಾನ ಬದಲಾವಣೆಯ ಕಾರಣ, ಈ ಅಡಗುದಾಣಗಳೂ ಮರೆಯಾಗುತ್ತಿವೆ ಎಂಬುದೂ ಒಂದು ಸಮಸ್ಯೆ. 

ಈಶಾನ್ ಅವರು “ತಣ್ಣನೆಯ ಹವಾಮಾನಕ್ಕೆ ಒಗ್ಗಿಕೊಂಡಿರುವ ಅನೇಕ ಗೌಳಿ ಜಾತಿಗಳು ಈಗಾಗಲೇ ಬೆಟ್ಟಗಳ ಮೇಲೆ ವಾಸಿಸುತ್ತಿವೆ. ಭೂಮಿಯ ತಾಪಮಾನ ಹೆಚ್ಚುತ್ತಿರುವುದರಿಂದ ಅವುಗಳು ಹೋಗಲು ಬೇರೆ ತಣ್ಣನೆಯ ಸ್ಥಳಗಳೇ  ಇಲ್ಲದಂತಾಗಬಹುದು” ಎಂದು ವಿಷಾದಿಸುತ್ತಾರೆ. 

ಗೌಳಿಗಳ ಭವಿಷ್ಯ ಸಿಹಿ-ಕಹಿಗಳ ಮಿಶ್ರಣ. ಹೊಸ ಹೊಸ ಜಾತಿಗಳ ಅನ್ವೇಷಣೆ ಸರೀಸೃಪ ವಿಜ್ಞಾನಿಗಳನ್ನು ಪರವಶಗೊಳಿಸುತ್ತದೆ. ಇದು ಮಾತ್ರವಲ್ಲ, ಹವಾಮಾನ ಬದಲಾವಣೆಯಿಂದ, ಈ ಚಿಕ್ಕ ಚಿಕ್ಕ ಸರೀಸೃಪಗಳ ಮೇಲೆ ಆಗುತ್ತಿರುವ ಹಾನಿ ಅವರನ್ನು ಬಾಧಿಸುತ್ತಿದೆ. ಅನೇಕ ಪ್ರಭೇದದ ಗೌಳಿಗಳು ಮತ್ತು ಹಲ್ಲಿಗಳಿಗೆ ನಿಶ್ಚಿತವಾದ  ಚಿಕ್ಕ ಹಾಗೂ ಸೂಕ್ಷ್ಮ ಆವಾಸಸ್ಥಾನಗಳು  ಇರುತ್ತವೆ. ಇಂತಹ ಇರುನೆಲೆಗಳಿಗೆ  ಸ್ವಲ್ಪ  ವ್ಯತ್ಯಾಸವಾದರೂ, ಅವುಗಳಿಗೆ ಭಾರೀ ಹೊಡೆತ ಬೀಳುತ್ತದೆ. 

“ಇಂದು ಭಾರತ  ದೇಶದ ಗೌಳಿಗಳ ಆವಾಸಸ್ಥಾನಗಳ ತಾಪಮಾನ ಅವುಗಳಿಗೆ ಮಾರಕವಾದ ಅಥವಾ ಅದಕ್ಕಿಂತ ಸ್ವಲ್ಪ  ಹೆಚ್ಚಿನ  ಪರಿಮಿತಿಯನ್ನು ತಲಪುತ್ತಿದೆ. ಅದು ಇನ್ನೂ ಸ್ವಲ್ಪ ಹೆಚ್ಚಿದರೆ ಅವು ಅಳಿದು ಹೋಗಬಹುದು.” ಎಂದು ಈಶಾನ್ ಕಳವಳ ವ್ಯಕ್ತಪಡಿಸುತ್ತಾರೆ. 

ಈ ವರ್ಷದ ಪ್ರಾರಂಭದಲ್ಲಿ ಪ್ರಕಟಣೆಗೊಂಡ ಗಂಜಾಮ್ ಸ್ಲೆಂಡರ್ ಗೆಕೋ (ಹೆಮಿಫಿಲೋಡ್ಯಾಕ್ಟಾಯ್ಲಸ್ ಮಿನಿಮಸ್) ನ ವಿಷಯವು ಇಲ್ಲಿ ಪ್ರಸ್ತುತ. ಈ ಪುಟ್ಟ ಗೌಳಿ ಒಡಿಶಾದ ಒಂದು ಪವಿತ್ರ ತೋಪಿನ ಮಾವಿನಮರಗಳಲ್ಲಿ ವಾಸಿಸುತ್ತವೆ. ’ಪವಿತ್ರ ತೋಪು’ಗಳು ಸ್ಥಳೀಯ ಸಮುದಾಯಗಳಿಂದ ಸಂರಕ್ಷಿಸಲಾದ ಸಣ್ಣ ಕಾಡುಗಳು. ಸಂಸ್ಕೃತಿಗಳು ಬದಲಾದಂತೆ ಈ ತೋಪುಗಳು ತಮ್ಮ ಪವಿತ್ರ ಸ್ಥಾನವನ್ನು ಕಳೆದುಕೊಳ್ಳುತ್ತಿವೆ. ಅಂದರೆ ಈ ಗೌಳಿಗಳಿಗೆ ಅದು ಕೊನೆಯ ಯಾತ್ರೆಯೇ ಸರಿ.

ಗಂಜಾಮ್ ಸ್ಲೆಂಡರ್ ಗೆಕೋ (ಹೆಮಿಫಿಲೋಡ್ಯಾಕ್ಟಾಯ್ಲಸ್ ಮಿನಿಮಸ್) ( ಚಿತ್ರ: ಪ್ರತ್ಯುಶ್ ಪಿ. ಮಹಾಪಾತ್ರ)

ಜನಸಾಮಾನ್ಯರಲ್ಲಿ ಈ ಗೌಳಿಗಳ ರೋಮಾಂಚಕಾರಿ ಜೀವನದ ಬಗ್ಗೆ ಆಸಕ್ತಿ ಮೂಡಿಸಿದರೆ, ಅವುಗಳ ಸಂರಕ್ಷಣೆಗೆ ಅನುಕೂಲವಾಗಬಹುದು ಮತ್ತು ಸಮುದಾಯ ವಿಜ್ಞಾನ ಈ ಸಣ್ಣ ಸರೀಸೃಪಗಳನ್ನು ಪರಿವೀಕ್ಷಿಸಲು/ ಸರೀಸೃಪಗಳ ಮೇಲೆ ಲಕ್ಷ್ಯವಿಡಲು ಸಹಾಯ ಮಾಡಬಹುದು. ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ ಮುಂತಾದ ಆನ್ಲೈನ್ ವೇದಿಕೆಗಳು ಮತ್ತು ಹಲವು ಫೇಸ್ಬುಕ್ ಗುಂಪುಗಳು, ಗೌಳಿಗಳನ್ನು ಗುರುತಿಸಲು, ಸಮುದಾಯ ವಿಜ್ಞಾನಿಗಳನ್ನು, ಅವುಗಳ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಲು ಆಹ್ವಾನಿಸುತ್ತವೆ. “ಒಂದು ಹೊಸ ಜಾತಿಯನ್ನು ಹುಡುಕಲು ನೀವು ಹೊರಟರೆ ನಿಮ್ಮ ಸುತ್ತಮುತ್ತ ಏನಿದೆಯೋ ಅವುಗಳ ಛಾಯಾಚಿತ್ರಗಳನ್ನು ತೆಗೆಯುತ್ತಾ ಅಲ್ಲಿಂದ ಮುಂದೆ ಸಾಗಿ” ಎಂದು ಈಶಾನ್ ಸಲಹೆ ನೀಡುತ್ತಾರೆ. 

Kannada