Novel scheme by IIT Bombay researchers to control drones can enable complex formation flying using only camera data, without GPS or inter-drone communication.

ಹಾಲಿನ ಹಿಂದಡಗಿದ ವಿಜ್ಞಾನ

ಭಾರತವು ವಿಶ್ವದ ಅತಿದೊಡ್ಡ ಹಾಲಿನ ಉತ್ಪಾದಕ ರಾಷ್ಟ್ರವಾಗಿದ್ದು, ಕಳೆದ ಒಂದು ವರ್ಷದಲ್ಲೇ ೧೪೦ ದಶಲಕ್ಷ ಟನ್ ಹಾಲು ಉತ್ಪಾದಿಸಿದೆ. ಹಾಲನ್ನು ರಾಸುಗಳು (ಹಸುಗಳು, ಎಮ್ಮೆಗಳು) ಉತ್ಪಾದಿಸುತ್ತವೆ ಎಂದು ನಮಗೆ ತಿಳಿದಿದ್ದರೂ, ಇದು ಸಸ್ತನಿಗಳಲ್ಲಿ ಹೇಗೆ ಉತ್ಪತ್ತಿಯಾಗುತ್ತದೆ ಗೊತ್ತೇ?

ತಮ್ಮ ಮರಿಗಳನ್ನು ಬೆಳೆಸುವ ಸಲುವಾಗಿ, ಆಹಾರವನ್ನಾಗಿ ನೀಡಲು ಹಾಲನ್ನು ಸ್ರವಿಸುವ ಸಾಮರ್ಥ್ಯವನ್ನು ಎಲ್ಲಾ ಸಸ್ತನಿಗಳು ಹೊಂದಿವೆ. ಸಸ್ತನಿಗಳ ಡಿಎನ್ಎಯೊಳಗಿರುವ ನಿರ್ದಿಷ್ಟ ಜೀನ್ಗಳು ಹಾಲಿನ ಸಂಶ್ಲೇಷಣೆ, ಉತ್ಪಾದನೆ ಮತ್ತು ಬಿಡುಗಡೆಗೆ ಬೇಕಾದ ಸಂಕೇತವನ್ನು  ಹೊಂದಿರುತ್ತವೆ. ಈ ಗ್ರಂಥಿಗಳು ವಿವಿಧ ಜಾತಿಗಳ ಪ್ರಾಣಿಗಳಲ್ಲಿ (ಸ್ತನಗಳು, ಕೆಚ್ಚಲು ಇತ್ಯಾದಿ) ವಿಭಿನ್ನವಾಗಿ ಕಂಡುಬಂದರೂ, ಅವುಗಳು ಮೂಲಭೂತವಾಗಿ ವಿಭಿನ್ನ ಹಾಲೆಗಳಾಗಿ ವರ್ಗೀಕರಿಸಲ್ಪಟ್ಟ ಗೋಳಾಕಾರದ ಜೀವಕೋಶ ಜಾಲಗಳನ್ನು ಹೊಂದಿರುತ್ತದೆ. ಹೆಣ್ಣಲ್ಲಿ ಹೆಚ್ಚಿಗೆ ಇರುವ ಹಾರ್ಮೋನುಗಳಾದ 'ಈಸ್ಟ್ರೊಜೆನ್' ಮತ್ತು 'ಪ್ರೊಜೆಸ್ಟರಾನ್'ಗಳ ಪ್ರಭಾವದಡಿಯಲ್ಲಿ, ಈ ಸಸ್ತನಿ ಗ್ರಂಥಿಗಳು ಬೆಳೆಯುತ್ತವಾದ್ದರಿಂದ, ಅವು  ಪ್ರೌಡಾವಸ್ಥೆ ಮತ್ತು ಗರ್ಭಾವಸ್ಥೆಯಲ್ಲಿ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ. ಆದರೆ ಹಾಲು ಉತ್ಪಾದನೆಯಲ್ಲಿ ಈ ಹಾರ್ಮೋನುಗಳು ಸಹಾಯ ಮಾಡುವುದಿಲ್ಲ; ಹಾಲು ಉತ್ಪಾದನೆಯ ಪ್ರಕ್ರಿಯೆ 'ಲ್ಯಾಕ್ಟೋಜೆನೆಸಿಸ್'ನ ಮುಖ್ಯ ಜವಾಬ್ದಾರಿ ಹೊತ್ತಿರುವ ಹಾರ್ಮೋನಿನ ಹೆಸರು 'ಪ್ರೊಲ್ಯಾಕ್ಟಿನ್'.

ಆದರೆ, ಒಂದು ಸಸ್ತನಿಯು ಸಾರ್ವಕಾಲಿಕವಾಗಿ ಹಾಲು ಉತ್ಪಾದಿಸುವುದಿಲ್ಲ; ಏಕೆ ಗೊತ್ತೇ? 'ಈಸ್ಟ್ರೊಜೆನ್' ಮತ್ತು 'ಪ್ರೊಜೆಸ್ಟರಾನ್' ಹಾರ್ಮೋನುಗಳು ಸಕ್ರಿಯವಾಗಿದ್ದಾಗ 'ಪ್ರೋಲ್ಯಾಕ್ಟಿನ್' ಕಾರ್ಯನಿರ್ವಹಿಸುವುದಿಲ್ಲ; ಇಂತಹ ಉದಾಹರಣೆ ನಮಗೆ ಗರ್ಭಾವಸ್ಥೆಯಲ್ಲಿ ಕಂಡುಬರುತ್ತದೆ. ಗರ್ಭಾವಸ್ಥೆಯ ಕೊನೆಯಲ್ಲಿ, 'ಈಸ್ಟ್ರೊಜೆನ್' ಮತ್ತು 'ಪ್ರೊಜೆಸ್ಟರಾನ್'ನ ಪ್ರಮಾಣದಲ್ಲಿ ಇಳಿಮುಖವಾದಾಗ, 'ಪ್ರೋಲಾಕ್ಟಿನ್' ಹಾರ್ಮೋನು 'ಲ್ಯಾಕ್ಟೋಜೆನೆಸಿಸ್' ಅಂದರೆ ಹಾಲಿನ ಉತ್ಪಾದನೆಯನ್ನು ಪ್ರಚೋದಿಸುತ್ತದೆ; ಹಲವು ಅಮೈನೋ ಆಮ್ಲಗಳು ಮತ್ತಿತರ ಸಂಯುಕ್ತ ಅಣುಗಳು, ಹಾಲಿನಲ್ಲಿನ ಸಂಯುಕ್ತಗಳಿಗೆ ಪೂರ್ವಗಾಮಿಯಾಗಿ ಕಾರ್ಯನಿರ್ವಹಿಸಿ, ಈ ಹಾರ್ಮೋನಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ. ಈ ಅಣುಗಳು ರಕ್ತದೊಳಗೆ ಬೆರೆತು, ರಕ್ತನಾಳಗಳ ಮೂಲಕ ಸಸ್ತನಿ ಗ್ರಂಥಿ ವ್ಯವಸ್ಥೆಯನ್ನು ತಲುಪುತ್ತವೆ.

ಒಂದು ಲೀಟರ್ ಹಾಲಿನ ಆರಂಭಿಕ ತಯಾರಿಗೆ ಸುಮಾರು ೨೦೦ - ೫೦೦ ಲೀಟರ್ ರಕ್ತದ ಅವಶ್ಯಕತೆಯಿದೆ ಎಂದರೆ ಅಚ್ಚರಿಯಲ್ಲವೇ? ಹೀಗೆ ಉತ್ಪತ್ತಿಯಾಗುವ ಹಾಲನ್ನು, ದೊಡ್ಡದಾಗುತ್ತಾ ಸಾಗುವ ನಾಳಗಳ ಸರಣಿಯಲ್ಲಿ ಸಂಗ್ರಹಿಸಲಾಗುತ್ತದೆ. ಆ ನಾಳಗಳ ಸರಣಿಯ ಕೊನೆಯಲ್ಲಿರುವ ತೊಟ್ಟುಗಳನ್ನು ತಲುಪಿದ ಹಾಲು, ಬಿಡುಗಡೆಗೆ ಸಿದ್ಧವಾಗಿ ಸಂದೇಶಕ್ಕೆ ಕಾಯುತ್ತಿರುತ್ತದೆ. ಮಗುವಿನ ಜನನವಾದ ಕೂಡಲೇ ದೇಹವು 'ಆಕ್ಸಿಟೋಸಿನ್' ಎಂಬ ಮತ್ತೊಂದು ಹಾರ್ಮೋನಿನ ಮೂಲಕ ಸಂದೇಶ ರವಾನಿಸುತ್ತಲೇ, ನವಜಾತ ಶಿಶುವಿನ ಹಸಿವನ್ನು ನೀಗಿಸಲು ಹಾಲು ಹೊರಸ್ರವಿಸುತ್ತದೆ.

Search Research Matters