ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಭಾರತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತು: ಹಿಂದಿನ ಮತ್ತು ಪ್ರಸ್ತುತ ದಿನಗಳಿಂದ ಕಲಿಯಬೇಕಾದ ಪಾಠಗಳು

ಬೆಂಗಳೂರು
30 Apr 2020
ಭಾರತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತು: ಹಿಂದಿನ ಮತ್ತು ಪ್ರಸ್ತುತ ದಿನಗಳಿಂದ ಕಲಿಯಬೇಕಾದ ಪಾಠಗಳು

ಮೂಲ ಲೇಖನ ಬರೆದವರು: ಜ್ಯೋತಿ ಶರ್ಮಾ  ಮತ್ತು ಎಸ್.ಕೆ.ವರ್ಶ್ನಿ, ಹಿರಿಯ ವಿಜ್ಞಾನಿಗಳು  ಮತ್ತು ಮುಖ್ಯಸ್ಥರು, ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ     

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಕೊರೋನಾ ವೈರಸ್ ಕಾಯಿಲೆ 2019 (ಕೋವಿಡ್ -19) ಅನ್ನು ಜಾಗತಿಕ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ (2005) ಅಡಿಯಲ್ಲಿ) ಎಂದು ಜನವರಿ 30, 2020 ರಂದು ಘೋಷಿಸಿದೆ ಮತ್ತು ಮಾರ್ಚ್ 11, 2020 ರಂದು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಕೋವಿಡ್ -19 ರೋಗವು ತೀವ್ರ ಉಸಿರಾಟದ ಸಮಸ್ಯೆಗಳ ಕಂತೆ ಕೊರೋನಾ ವೈರಸ್ 2 [SARS-CoV-2] ಎಂಬ ವೈರಸ್ ನಿಂದ ಉಂಟಾಗಿದೆ ಮತ್ತು ಇದು ವಿಶ್ವದಾದ್ಯಂತ 196 ದೇಶಗಳು ಮತ್ತು ಪ್ರಾಂತ್ಯಗಳಿಗೆ ಹಾಗೂ ಒಂದು ಅಂತರರಾಷ್ಟ್ರೀಯ ಸಾಗಣೆ ಹಡಗಿಗೆ (ಜಪಾನ್‌ನ ಯೊಕೊಹಾಮಾದಲ್ಲಿ ಬೀಡು ಬಿಟ್ಟಿರುವ ಡೈಮಂಡ್ ಪ್ರಿನ್ಸೆಸ್ ಕ್ರೂಸ್) ಹರಡಿದೆ.

“‘ಸಾಂಕ್ರಾಮಿಕ’ ಅನ್ನುವ ಪದವನ್ನು ಲಘುವಾಗಿ ಅಥವಾ ಅಜಾಗರೂಕತೆಯಿಂದ ಬಳಸುವ ಹಾಗಿಲ್ಲ; ಈ ಪದವನ್ನು ಅಜಾಗರೂಕತೆಯಿಂದ ಬಳಸಿದರೆ ಅನಗತ್ಯ ಭಯ ಉಂಟಾಗುತ್ತದೆ ಅಥವಾ  ಅದರ ಮುಂದೆ ನಮ್ಮ ಶಕ್ತಿ ಸಾಲದು, ನಾವು ಸೋತೆವು, ಹೋರಾಟ ಮುಗಿದಿದೆ ಎಂಬಂತಹ ನ್ಯಾಯಸಮ್ಮತವಲ್ಲದ ಸೋಲಿನ ಸ್ವೀಕಾರಕ್ಕೆ ಕಾರಣವಾಗಬಹುದು, ಇದು ಅನಗತ್ಯ ಸಾವುನೋವಿಗೆ ಕಾರಣವಾಗಬಹುದು ”ಎಂದು ಕೋವಿಡ್ -19ನ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗ  ಡಬ್ಲ್ಯುಎಚ್‌ಒದ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ತಮ್ಮ ವಿವರಣೆಯನ್ನು ಪ್ರಾರಂಭಿಸಿದರು.

ರೋಗ ಹರಡುವುದನ್ನು ತಡೆಗಟ್ಟಲು ಜನರ ಚಲನೆಯನ್ನು ನಿರ್ಬಂಧಿಸುವುದು ಇಂದು-ನಿನ್ನೆಯದಲ್ಲ, ಶತಮಾನಗಳಷ್ಟು ಹಳೆಯ ತಂತ್ರವಾಗಿದೆ. ‘ಕ್ವಾರಂಟೈನ್’ ಎಂಬ ಪದವನ್ನು ಕ್ವಾರಂಟಾ ಜಿಯೋರ್ನಿ ಎಂಬ ಇಟಾಲಿಯನ್  ಪದಗಳಿಂದ ಪಡೆಯಲಾಗಿದೆ; ಇದರರ್ಥ ‘40 ದಿನಗಳು’. ಬೈಬಲ್ನಲ್ಲಿರುವ ಲೆವಿಟಿಕಸ್ ಪುಸ್ತಕವು ಕುಷ್ಠರೋಗಕ್ಕೆ ಇರುವ ನಿರ್ಬಂಧಗಳನ್ನು ಸೂಚಿಸುತ್ತದೆ ಮತ್ತು 14 ನೇ ಶತಮಾನದಲ್ಲಿ ಕಪ್ಪು ಸಾವಿನ ಹರಡುವಿಕೆಯನ್ನು ತಡೆಯಲು ಕ್ವಾರಂಟೈನ್ ಎಂಬ ಪದವನ್ನು ಬಳಸಲಾಗಿತ್ತು. ಕಾಲರಾ ಸೇರಿದಂತೆ ಇತರ ಸೋಂಕು ಹರಡುವುದನ್ನು ತಡೆಯಲು ಹಡಗುಗಳನ್ನು ವಾಡಿಕೆಯಂತೆ ನಿರ್ಬಂಧಿಸಲಾಗುತ್ತಿತ್ತು.

ಸಾಂಕ್ರಾಮಿಕ ರೋಗಗಳು ಸಾವಿನ ಭಯವನ್ನು ಉಂಟುಮಾಡಿ ನಮ್ಮನ್ನು ಬೆದರಿಸುತ್ತವೆ ಹಾಗೂ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ನಡವಳಿಕೆಗಳು ಮತ್ತು ನೀತಿ ನಿರ್ಧಾರಗಳನ್ನು ಹೆಚ್ಚಾಗಿ ಪ್ರಭಾವಿಸಿವೆ. ಪ್ರತಿ ನೂರು ವರ್ಷಗಳಿಗೊಮ್ಮೆ, 1720 ರಲ್ಲಿ ಪ್ಲೇಗ್, 1820 ರಲ್ಲಿ ಕಾಲರಾ ಮತ್ತು 1918 ರಲ್ಲಿ ಸ್ಪ್ಯಾನಿಷ್ ಜ್ವರ ಮುಂತಾದ ದೊಡ್ಡ ಸಾಂಕ್ರಾಮಿಕ ರೋಗಗಳು ಕಂಡುಬರುತ್ತಿದೆ.

1720 ರಲ್ಲಿ ಯೆರ್ಸೀನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾದ ದೊಡ್ಡ ಪ್ಲೇಗ್ ರೋಗವು ಫ್ರಾನ್ಸ್‌ನ ಮಾರ್ಸೆಲೆ ಎಂಬ ಸ್ಥಳಕ್ಕೆ ವ್ಯಾಪಾರಿ ಹಡಗು ‘ಗ್ರ್ಯಾಂಡ್-ಸೇಂಟ್-ಆಂಟೊಯಿನ್’ನ ಮೂಲಕ ಹರಡಿತು. ಸೋಂಕನ್ನು ತಡೆಯಲು ಹಡಗನ್ನು ನಿರ್ಬಂಧಿಸುವ ತಂತ್ರವು ಹಡಗಿನ ಮಾಲೀಕರಿಂದ ವಿಫಲವಾಯಿತು; ಅವರು ಮಾರ್ಸೆಲೆಯ ಉಪ ಮೇಯರ್ ಆಗಿದ್ದು, ಆ ಹಡಗಿನಿಂದ ಸರಕುಗಳನ್ನು ಇಳಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳನ್ನು ನಂಬಿಸಿದರು. ಪ್ಲೇಗ್ ರೋಗವನ್ನು ಹೊತ್ತೊಯ್ದು ಹರಡುವ ಇಲಿ ಚಿಗಟಗಳು ಆ ಸರಕಿನ ಮೇಲಿದ್ದವು ಮತ್ತು  ತ್ವರಿತವಾಗಿ ನಗರದಾದ್ಯಂತ ಹರಡಿ, ಸಾಂಕ್ರಾಮಿಕ ರೋಗವನ್ನು ಹುಟ್ಟುಹಾಕಿದವು. ಇದು ಸುಮಾರು 100,000 ಜನರ ಸಾವಿಗೆ ಕಾರಣವಾಯಿತು.

ಕ್ವಾರಂಟೈನ್ ಅಥವಾ ನಿರ್ಬಂಧದ ಅನುಪಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗವು ಹೇಗೆ ವೇಗವಾಗಿ ಹರಡುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯೆಂದರೆ, ಮೊದಲ ಕಾಲರಾ ಸಾಂಕ್ರಾಮಿಕ (1817–24). ಇದನ್ನು ಏಷಿಯಾಟಿಕ್ ಕಾಲರಾ ಎಂದೂ ಕರೆಯುತ್ತಾರೆ. ಇದು ಭಾರತದ ಕಲ್ಕತ್ತಾ ನಗರದ ಬಳಿ ಪ್ರಾರಂಭವಾಯಿತು ಮತ್ತು ಆಗ್ನೇಯ ಏಷ್ಯಾದಾದ್ಯಂತ, ಮಧ್ಯಪ್ರಾಚ್ಯ, ಪೂರ್ವ ಆಫ್ರಿಕಾ ಮತ್ತು ಮೆಡಿಟರೇನಿಯನ್ ಕರಾವಳಿಗೆ ಹರಡಿತು. ಬ್ರಿಟಿಷ್ ಸೈನ್ಯ, ನೌಕಾಪಡೆ ಮತ್ತು ವ್ಯಾಪಾರಿ ಹಡಗುಗಳ ಚಲನೆಯು ಈ ರೋಗವನ್ನು ನೇಪಾಳ, ಅಫ್ಘಾನಿಸ್ತಾನ ಮತ್ತು ಹಿಂದೂ ಮಹಾಸಾಗರದ ತೀರಗಳಿಗೆ, ಆಫ್ರಿಕಾದಿಂದ ಇಂಡೋನೇಷ್ಯಾಕ್ಕೆ ಮತ್ತು ಉತ್ತರದ ಚೀನಾ ಮತ್ತು ಜಪಾನ್‌ಗೆ ಸಾಗಿಸಿತು.

ಆಧುನಿಕ ಇತಿಹಾಸದಲ್ಲೇ ಅತ್ಯಂತ ಮಾರಕ ಮತ್ತು ತೀವ್ರವಾದ ಸಾಂಕ್ರಾಮಿಕ ರೋಗವಾದ 1918 ರ ಸ್ಪ್ಯಾನಿಷ್ ಜ್ವರವು, ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರನ್ನು ಸೋಂಕಿಗೆ ಒಳಪಡಿಸಿತ್ತು  ಮತ್ತು 675,000 ಅಮೆರಿಕನ್ನರೂ ಸೇರಿದಂತೆ ಸುಮಾರು 50 ದಶಲಕ್ಷ ಜನರನ್ನು ಕೊಂದಿತು. ಮೊದಲನೇ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಗಡಿಯುದ್ದಕ್ಕೂ ಸೈನ್ಯದ ತ್ವರಿತ ಚಲನೆಯು, ವ್ಯಕ್ತಿಯಿಂದ ವ್ಯಕ್ತಿಗೆ ಈ ಸೋಂಕು ಹರಡಲು ಕಾರಣವಾಯಿತು ಮತ್ತು ಈ ರೋಗಕಾರಕ ರೋಗಾಣುವಿನ ರೂಪಾಂತರಕ್ಕೂ ಕಾರಣವಾಗಿರಬಹುದು.

ಕಳೆದ 102 ವರ್ಷಗಳಲ್ಲಿ, ವಿಶ್ವದ ಜನಸಂಖ್ಯೆಯು ಸುಮಾರು ೧.೫ ಶತಕೋಟಿಯಿಂದ 7 ಶತಕೋಟಿಗಳಿಗೆ ಏರಿದೆ. ಸಾರ್ವಜನಿಕ ಆರೋಗ್ಯ ಹಾಗೂ ಜೀವಿತಾವಧಿಯಲ್ಲಿ ಬದಲಾವಣೆ ಕಂಡುಬಂದಿದೆ ಮತ್ತು ವಿಮಾನ ಪ್ರಯಾಣ ಹಾಗೂ ಜಾಗತಿಕ ಪೂರೈಕೆ ಸರಪಳಿಯು ಸಾಮಾನ್ಯದ ದಿನನಿತ್ಯದ ವಿಚಾರಗಳು ಎನಿಸಿವೆ. ಆದರೆ, ನಾವು ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕಿದೆ ಮತ್ತು ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಕ್ವಾರಂಟೈನ್‌ ಅಥವಾ ನಿರ್ಬಂಧದ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಇತ್ತೀಚಿನ ವರದಿಗಳ ಪ್ರಕಾರ, ಚೀನಾ ಮತ್ತು ದಕ್ಷಿಣ ಕೊರಿಯಾ ತಮ್ಮ ಹಿಂದಿನ ದಿನಗಳಿಂದ ಪಾಠ ಕಲಿತವು ಮತ್ತು ಕೋವಿಡ್ -19ನ ವಿರುದ್ಧ ಅದೇ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದವು ಎಂದು ತಿಳಿದುಬಂದಿದೆ. ಜನವರಿ 23 ರಿಂದ ಹುಬೈ ಪ್ರಾಂತ್ಯದ ವುಹಾನ್ ಮತ್ತು ಹತ್ತಿರದ ನಗರಗಳನ್ನು ಕಡ್ಡಾಯವಾಗಿ ಲಾಕ್ ಡೌನ್ ಮಾಡುವುದರ ಮೂಲಕ, ಸೋಂಕಿತ ವ್ಯಕ್ತಿಗಳು ದೇಶದ ಉಳಿದ ಭಾಗಗಳಿಗೆ ಪ್ರಯಾಣಿಸುವುದನ್ನು ಪರಿಣಾಮಕಾರಿಯಾಗಿ ತಡೆಯಿತು. ಚೀನಾದ ಮುಖ್ಯ ಪ್ರದೇಶಗಳಲ್ಲಿ, ಜನರು ಚುರುಕಾಗಿ ಮತ್ತು ಜವಾಬ್ದಾರಿಯಿಂದ ‘ಸಾಮಾಜಿಕ ಅಂತರ’ದ ಕ್ರಮಗಳನ್ನು ಅನುಸರಿಸಿದರು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಅವುಗಳ ಮೇಲ್ವಿಚಾರಣೆಯನ್ನು ಕಟ್ಟುನಿಟ್ಟಾಗಿ  ಮಾಡಿದರು. ಕ್ರೀಡೆ, ಸಿನೆಮಾ ಮತ್ತು ರಂಗಭೂಮಿಯಂತಹ ಎಲ್ಲಾ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರದ್ದುಗೊಳಿಸಲಾಯಿತು ಅಥವಾ ಮುಂದೂಡಲಾಯಿತು; ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಯಿತು ಮತ್ತು ವಸಂತದ ರಜಾದಿನಗಳನ್ನು ವಿಸ್ತರಿಸಲಾಯಿತು.

ಒಟ್ಟಾರೆ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರೂ ಸೋಂಕಿಗೆ ಒಳಪಡುವ ಪರಿಸ್ಥಿತಿಯಿರುವಾಗ, ಸೋಂಕಿತ ವ್ಯಕ್ತಿಯು ರೋಗವನ್ನು ದಾಟಿಸಬಹುದಾದ ಜನರ ಸರಾಸರಿ ಸಂಖ್ಯೆಯನ್ನು ಕಡಿಮೆ ಮಾಡಲು ವಿವಿಧ ಕ್ರಮಗಳು ಸಹಾಯ ಮಾಡುತ್ತವೆ; ಆರ್.ಒ ಎಂದು ಕರೆಯಲ್ಪಡುವ ಈ ಸಂಖ್ಯೆಯು, ಮೂರು ಅಂಶಗಳನ್ನು ಅವಲಂಬಿಸಿರುತ್ತದೆ.  ಕೋವಿಡ್ -19 ಹೊಂದಿರುವ ಜನರು ಎಷ್ಟು ಸಮಯದವರೆಗೆ ಸಾಂಕ್ರಾಮಿಕರಾಗಿರುತ್ತಾರೆ, ಸೋಂಕಿತ ವ್ಯಕ್ತಿ ಮತ್ತು ಸೋಂಕಿಗೆ ಒಳಗಾಗುವ ವ್ಯಕ್ತಿಗಳ ನಡುವಿನ ಪ್ರತಿಯೊಂದು ಸಂಪರ್ಕದಲ್ಲೂ ಸೋಂಕು ಹರಡುವ ಸಂಭವನೀಯತೆ ಎಷ್ಟಿದೆ ಮತ್ತು ಅಂತಹ ಸಂಪರ್ಕಗಳ ಸರಾಸರಿಯೇನು ಎಂಬುದೇ ಆ ಮೂರು ಅಂಶಗಳು. ಸಾಂಕ್ರಾಮಿಕದ ಹರಡುವಿಕೆಯ ಪ್ರಮಾಣವು ಆರ್.ಓ ಅನ್ನು ಅವಲಂಬಿಸಿರುತ್ತದೆ ಮತ್ತು ಪ್ರಸರಣ ಸರಪಳಿಯಲ್ಲಿ ಒಂದು ಪ್ರಕರಣ ಮತ್ತು ಇನ್ನೊಂದರ ನಡುವಿನ ಸಮಯದ ಅಂತರವನ್ನು ಅವಲಂಬಿಸಿರುತ್ತದೆ; ಇದನ್ನು ಸರಣಿ ಮಧ್ಯಂತರ ಎಂದು ಕರೆಯಲಾಗುತ್ತದೆ. ಗಣಿತದ ಮಾದರಿಗಳ ಲೆಕ್ಕಾಚಾರದ ಪ್ರಕಾರ, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ, ಒಟ್ಟಾರೆ ಪ್ರಕರಣಗಳ ಸಂಖ್ಯೆ 62% ರಷ್ಟು ಹಾಗೂ ಭಾರತದಲ್ಲಿ ಗರಿಷ್ಠ ಪ್ರಕರಣಗಳ ಸಂಖ್ಯೆ 89% ರಷ್ಟು ಕಡಿಮೆಯಾಗಬಹುದು ಮತ್ತು ಆಸ್ಟ್ರೇಲಿಯಾದಲ್ಲಿ 10 ರಲ್ಲಿ 8 ಮಂದಿ ಮನೆಯಲ್ಲಿದ್ದರೆ ಆಸ್ಟ್ರೇಲಿಯಾದಲ್ಲಿನ ಸೋಂಕಿನ ವಕ್ರರೇಖೆಯನ್ನು ಸಮತಟ್ಟಾಗಿಸಬಹುದು ಎಂದು ತಿಳಿದುಬಂದಿದೆ.

ಸಂಪರ್ಕ ನಿರ್ಬಂಧ ಮತ್ತು ಸಾಮಾಜಿಕ ಅಂತರದ ಸಾಮಾಜಿಕ ಪರಿಣಾಮವು, ಆರೋಗ್ಯ ಅಧಿಕಾರಿಗಳು ಮತ್ತು ನೀತಿನಿಯಮ ರೂಪಿಸುವವರ ಪುರಾವೆ ಆಧಾರಿತ ಮಧ್ಯಸ್ಥಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಒಂದು ವಾರದಲ್ಲಿ ಕೋವಿಡ್-19 ರೋಗಿಗಳಿಗೇ ಮೀಸಲಾದ 2600 ಹಾಸಿಗೆಗಳನ್ನು ಹೊಂದಿರುವ ಎರಡು ಆಸ್ಪತ್ರೆಗಳ ನಿರ್ಮಾಣ ಮತ್ತು 40,000 ಆರೋಗ್ಯ ಕಾರ್ಯಕರ್ತರನ್ನು ಚೀನಾದ ಮುಖ್ಯ ಭಾಗದಿಂದ ಕರೆತಂದು ವುಹಾನ್‌ನಲ್ಲಿ ಸಜ್ಜುಗೊಳಿಸುವುದರ ಮೂಲಕ ರೋಗವನ್ನು ನಿಭಾಯಿಸುವಲ್ಲಿ ಚೀನಾ ಸರ್ಕಾರದ ಬಲವಾದ ಬದ್ಧತೆಯು ನಿರೂಪಿತವಾಗಿದೆ.

"ಈ ಹಿಂದೆ ಕಂಡುಕೇಳಿಲ್ಲದ ಅಪರಿಚಿತ ವೈರಸ್ ನ ಎದುರು, ಚೀನಾ, ಬಹುಶಃ ಇತಿಹಾಸದಲ್ಲೇ ಮೊದಲೇನೋ ಎಂಬಂತೆ ರೋಗವನ್ನು ತಡೆಗಟ್ಟುವ ಅತ್ಯಂತ ಮಹತ್ವಾಕಾಂಕ್ಷೆಯ, ಚುರುಕುಬುದ್ಧಿಯ ಮತ್ತು ಆಕ್ರಮಣಕಾರಿ ಪ್ರಯತ್ನವನ್ನು ಮಾಡಿದೆ" ಎಂದು ಕೊರೋನಾ ವೈರಸ್ ರೋಗದ ನಿವಾರಣೆಗಾಗಿ ಇರುವ ಡಬ್ಲ್ಯುಎಚ್‌ಒ-ಚೀನಾ ಜಂಟಿ ಮಿಷನ್ ನ ವರದಿ ತಿಳಿಸುತ್ತದೆ.

ವರ್ಗ ಬಿ ಮತ್ತು ಗಡಿ ಆರೋಗ್ಯ ಕ್ವಾರಂಟೈನ್ ಸಾಂಕ್ರಾಮಿಕ ಕಾಯಿಲೆಗಳ ಶಾಸನಬದ್ಧ ವರದಿಯಲ್ಲಿ ಚೀನಾ ಕೋವಿಡ್-19 ಅನ್ನು ಸೇರಿಸಿತು ಮತ್ತು ಅದರ ರೋಗನಿರ್ಣಯ, ಮೇಲ್ವಿಚಾರಣೆ ಮತ್ತು ವರದಿಗೆ ಬೇಕಾದ್ದೆಲ್ಲವನ್ನೂ ಬಲಪಡಿಸಿತು. ವುಹಾನ್‌ ಒಂದರಲ್ಲೇ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ 1800 ಕ್ಕೂ ಹೆಚ್ಚು ತಂಡಗಳು ಬೀಡುಬಿಟ್ಟಿದ್ದು, ಪ್ರತಿ ತಂಡದಲ್ಲಿ ಕನಿಷ್ಠ 5 ಜನರಿದ್ದು, ಸಾವಿರಾರು ಸೋಂಕು ಸಂಪರ್ಕಗಳನ್ನು ಪತ್ತೆ ಮಾಡಿವೆ. ಅದೇ ರೀತಿ, ದಕ್ಷಿಣ ಕೊರಿಯಾವು ಡ್ರೈವ್-ಥ್ರೂ ಕೇಂದ್ರಗಳು ಮತ್ತು ಫೋನ್ ಬೂತ್‌ಗಳೂ ಸೇರಿದಂತೆ 633 ಸ್ಥಳಗಳಲ್ಲಿ ದಿನಕ್ಕೆ 20,000 ಜನರನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿತು ಮತ್ತು ಮಾರ್ಚ್ 17 ರವರೆಗೆ ಅಮೇರಿಕದ  60000 ಕ್ಕೆ ಹೋಲಿಸಿದರೆ 286000 ಜನರನ್ನು ಪರೀಕ್ಷಿಸಿತು.

ಬಲವಾದ ಸಾಂಕ್ರಾಮಿಕ ರೋಗಗಳ ತನಿಖೆಯಲ್ಲಿನ ಕೊರತೆಯು, ಈ ಹಿಂದಿನ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕಂಡುಬಂದ ಕೊರತೆಗಳಲ್ಲಿ ಒಂದು. ಆದರೆ, ಈ ಬಾರಿ, ಚೀನಾದಲ್ಲಿ ಸಾಮಾಜಿಕ ಅಂತರ ಮತ್ತು ನಿರ್ಬಂಧದ ಬಳಕೆಯ ಜೊತೆಗೆ, ವ್ಯಾಪಕವಾಗಿ ಬಳಸಲಾಗುವ ಎರಡು ಮೊಬೈಲ್ ಅಪ್ಲಿಕೇಶನ್‌ಗಳಾದ ಅಲಿಪೇ ಮತ್ತು ವೀಚಾಟ್ ಮೂಲಕ, ಕೃತಕ ಬುದ್ಧಿಮತ್ತೆ (ಎಐ), ಸಾಮಾಜಿಕ ಜಾಲತಾಣಗಳು, ಬಿಗ್ ಡೇಟಾದ ಮೂಲಕ, ಅದೇ ರೀತಿ, ದಕ್ಷಿಣ ಕೊರಿಯಾದಲ್ಲಿ ನಿರಂತರ ಡಿಜಿಟಲ್ ಉಸ್ತುವಾರಿಯ ಮೂಲಕ ನಿರ್ಬಂಧಗಳನ್ನು ಜಾರಿಗೊಳಿಸಲು ಮತ್ತು ಜನರ ಚಲನವಲನಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ.

ಚೀನಾದಲ್ಲೇ ಹುಟ್ಟಿದ ಮತ್ತೊಂದು ರೋಗವಾದ SARS ನಿಂದ ಚೀನಾಕ್ಕೆ ದೊರೆತ ಕಲಿಕೆಯು, ವೈದ್ಯಕೀಯ ಸಾಮಗ್ರಿಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು, ವೈಯಕ್ತಿಕ ಸಂರಕ್ಷಣಾ ಸಾಮಗ್ರಿಗಳನ್ನು ಒದಗಿಸಲು ಮತ್ತು ಈ ಸಮಸ್ಯೆಯಿಂದ ಪೀಡಿತ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಅನುವು ಮಾಡಿಕೊಟ್ಟಿತು.  ವೈದ್ಯಕೀಯ ಸಾಮಗ್ರಿಗಳ ಆಮದು ವಿಸ್ತರಿಸುವುದು, ರೋಗನಿರ್ಣಯದ ಕಿಟ್‌ಗಳ ಸ್ಥಳೀಯ ಸಾಮೂಹಿಕ ಉತ್ಪಾದನೆಯನ್ನು ಉತ್ತೇಜಿಸುವುದು, ಸ್ಥಳೀಯ ಉದ್ಯಮಗಳನ್ನು ಬೆಂಬಲಿಸುವುದು ಹಾಗೂ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಸರಬರಾಜುಗಳನ್ನು ಖಾತರಿಪಡಿಸಿಕೊಳ್ಳಲು ಗಡಿಯಾಚೆಗಿನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದರ ಜೊತೆಗೆ ಸರ್ಕಾರವು ಪ್ರಸ್ತುತ ಉತ್ಪಾದನಾ ಸಾಮರ್ಥ್ಯವನ್ನು ಮೀರಿ ಕಾರ್ಯನಿರ್ವಹಿಸಿತು. ಆದಾಗ್ಯೂ, ಅನೇಕ ಯುರೋಪಿಯನ್ ದೇಶಗಳಲ್ಲಿ ಆರೋಗ್ಯ ಸಿಬ್ಬಂದಿ, ಸಂಪನ್ಮೂಲಗಳು ಮತ್ತು ಸಲಕರಣೆಗಳ ಕೊರತೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ದೌರ್ಬಲ್ಯಗಳನ್ನು ತೋರಿಸಿದೆ. ಕೋವಿಡ್-19 ಸಾಂಕ್ರಾಮಿಕವು ಭವಿಷ್ಯದ ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಮರ್ಥ ಮತ್ತು ಸುಸಜ್ಜಿತ ಸಾರ್ವಜನಿಕ ವ್ಯವಸ್ಥೆಯ ಅಗತ್ಯವನ್ನು ಸಾರಿಹೇಳಿದೆ.

SARS ನಿಂದ ಕಲಿತ ಮತ್ತೊಂದು ದೊಡ್ಡ ಪಾಠವೆಂದರೆ, ಏಕಾಏಕಿ ಮುಂಚಿತವಾಗಿಯೇ ಆಸ್ಪತ್ರೆಗಳಿಗೆ ದಾಖಲಾಗುವ ಬದಲು, ಮನೆಯಲ್ಲಿಯೇ ರೋಗಿಗಳಿಗೆ ಸಾಧ್ಯವಾದಷ್ಟೂ ಚಿಕಿತ್ಸೆ ನೀಡುವುದು ಅವಶ್ಯಕ ಮತ್ತು ಅನುಕೂಲಕರ ಎಂಬುದು. ಚೀನಾದಲ್ಲಿ, ಸಮುದಾಯ ಸ್ವಯಂಸೇವಕರ ಸಹಾಯ ಪಡೆದು ಸ್ವಯಂ-ಪ್ರತ್ಯೇಕತೆಯನ್ನು ಬೆಂಬಲಿಸಲಾಯಿತು ಮತ್ತು ಮನೆಯಲ್ಲಿ ಪ್ರತ್ಯೇಕತೆಯಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರಾಯೋಗಿಕ ಆರೋಗ್ಯ ಮತ್ತು ಜೀವಿತದ ಇತರ ತೊಂದರೆಗಳನ್ನು ಪರಿಹರಿಸಲು ಪ್ರಯತ್ನಿಸಲಾಯಿತು.                                                                                                                                                                         

ಈ ಎಲ್ಲಾ ಕಠಿಣ ಕ್ರಮಗಳನ್ನು ಸಾಮಾಜಿಕ ಮತ್ತು ಆರ್ಥಿಕ ಬೆಲೆ ತೆತ್ತೇ ಜಾರಿಗೆ ತರಲಾಯಿತು, ಆದರೆ ಈ ಕ್ರಮಗಳು ಚೀನಾದಲ್ಲಿ ಯಶಸ್ವಿಯಾದವು. ಸಾಂಕ್ರಾಮಿಕದ ತಡೆಗಟ್ಟುವಿಕೆ ಮತ್ತು ಉತ್ಪಾದನೆಯ ಬಗೆಗಿನ ಚೀನಾದ ಕಾರ್ಯತಂತ್ರ, ಕೃತಕ ಬುದ್ಧಿಮತ್ತೆಯ ಸರಿಯಾದ ಬಳಕೆ, ಬಿಗ್ ಡೇಟಾ ಮತ್ತು ಇತರ ವೈಜ್ಞಾನಿಕ ಕ್ರಮಗಳ ಬಳಕೆ, ಪರಿಣಾಮಕಾರಿ ನೀತಿ ಅನುಷ್ಠಾನ ಮತ್ತು ಸಾಮೂಹಿಕ ಕಾರ್ಯನಿರ್ವಹಣೆಯ ಕಡೆಗೆ ಆಳವಾದ ಬದ್ಧತೆಯು ಹಿಂದಿನ ಅನುಭವದಿಂದ ಚೀನಾ ಪಾಠ ಕಲಿತಿರುವುದನ್ನು ಸೂಚಿಸುತ್ತದೆ ಮತ್ತು ಪ್ರಸ್ತುತ ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗೆಯನ್ನು ಜಗತ್ತಿಗೆ ಕಲಿಸಿದೆ. ಮತ್ತೊಂದೆಡೆ, ರೋಗ ಪರೀಕ್ಷೆಗೆ ಕಠಿಣ ಕ್ರಮಗಳು ಮತ್ತು ಸ್ಪಷ್ಟ ಸಾರ್ವಜನಿಕ ಮಾಹಿತಿಯೊಂದಿಗೆ ವಕ್ರರೇಖೆಯನ್ನು ಸಮತಟ್ಟಾಗಿಸುವ ದಕ್ಷಿಣ ಕೊರಿಯಾದ ತಂತ್ರವನ್ನೂಇತರ ದೇಶಗಳು ನಿರ್ಲಕ್ಷಿಸುವಂತಿಲ್ಲ. ಏಕಾಏಕಿ ಬಲವಂತದ ಕ್ರಮಗಳನ್ನು ಹೇರುವುದರಿಂದ ಅನುಮಾನ ಮತ್ತು ಅಸಮಾಧಾನ ಉಂಟಾಗಬಹುದು ಎಂಬುದನ್ನು ನೀತಿನಿಯಮಗಳನ್ನು ರೂಪಿಸುವವರು ನೆನಪಿನಲ್ಲಿಡಬೇಕು. ಮನವೊಲಿಸುವಿಕೆ, ತಿಳುವಳಿಕೆಯನ್ನು ಹಂಚಿಕೊಳ್ಳುವುದು ಮತ್ತು ಸಮಾನ ಮಾಲೀಕತ್ವದಿಂದ ಸ್ವಯಂಪ್ರೇರಿತ ಕ್ರಿಯೆಯನ್ನು ಉತ್ತೇಜಿಸಬೇಕು ಮತ್ತು ಬಲಪಡಿಸಬೇಕು.

ಈ ಸಾಂಕ್ರಾಮಿಕ ರೋಗವು, ಬಹುಪಾಲು ದೇಶಗಳಿಗೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮಗ್ರ ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ಮಾರ್ಗದರ್ಶನ, ದೃಢವಾದ ಆರೋಗ್ಯ ರಕ್ಷಣಾ ಸಾಮರ್ಥ್ಯ, ಸಾಕಷ್ಟು ನಕಾರಾತ್ಮಕ ಒತ್ತಡದ ಕೊಠಡಿಗಳು, ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಒಳಪಡುವ ಜನರ ದತ್ತಾಂಶಗಳ ಸಂಕಲನ, ತುರ್ತು ವಿಭಾಗಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕನಿಷ್ಠ ಸೌಲಭ್ಯದ ಮಾನದಂಡಗಳನ್ನು ಸಾಧಿಸಲು ಮತ್ತು ನವೀಕರಣವನ್ನು ಕಾರ್ಯಗತಗೊಳಿಸಲು ವಿಶೇಷ ತರಬೇತಿ ಕಾರ್ಯಕ್ರಮಗಳು ಮತ್ತು ಸಮರ್ಪಿತ ಸಿಬ್ಬಂದಿಗಳ ಅಗತ್ಯವಿದೆ ಎಂಬುದನ್ನು ಜ್ಞಾಪಿಸುತ್ತದೆ.                              

Kannada