ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಚುರುಕಾದ ನಗರವಾಸಿ ಹಲ್ಲಿಗಳು!

Read time: 1 min
ಬೆಂಗಳೂರು
7 Aug 2019
ಚುರುಕಾದ ನಗರವಾಸಿ ಹಲ್ಲಿಗಳು!

ಒಂದಾನೊಂದು ಕಾಲದಲ್ಲಿ “ಉದ್ಯಾನ ನಗರಿ” ಎಂದೇ  ಪ್ರಸಿದ್ಧಿ ಪಡೆದ ನಮ್ಮ ಬೆಂಗಳೂರಿನಲ್ಲಿ ಈಗ ಗಚ್ಚುಗಾರೆ ಅಥವಾ ಕಾಂಕ್ರೀಟಿನದ್ದೇ ಸಾಮ್ರಾಜ್ಯ. ಹಚ್ಚ ಹಸಿರಾಗಿದ್ದ ನಮ್ಮ ಬೆಂಗಳೂರಿನ ಬಣ್ಣ ನೋಡುನೋಡುತ್ತಿದ್ದಂತೆಯೇ ಬೂದು ಬಣ್ಣಕ್ಕೆ ತಿರುಗಿಬಿಟ್ಟಿದೆ. ಕೇವಲ ಮನುಷ್ಯರು ಮಾತ್ರವಲ್ಲ, ನಗರವಾಸಿ ಪ್ರಾಣಿ ಪಕ್ಷಿಗಳೂ ಇಂತಹ ಒಂದು ಬದಲಾವಣೆಗೆ ಬಲವಂತವಾಗಿ ಹೊಂದಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷಿಪ್ರಗತಿಯಲ್ಲಿ ನಿರ್ಮಾಣವಾಗುತ್ತಿರುವಂತಹ ಈ ಬದಲಾವಣೆಗೆ ಹೊಂದಿಕೊಳ್ಳುತ್ತಾ ನಾವು ಹೇಗೆ ಜೀವಿಸುತ್ತಿದ್ದೀವೋ, ನಗರವಾಸಿ ಪ್ರಾಣಿಪಕ್ಷಿಗಳಿಗೂ ಇದು ಉಳಿವು ಅಳಿವಿನ ಪ್ರಶ್ನೆ. ಇಂತಹ ಒಂದು ವೇಗದ, ನಗರಸಂಬಂಧಿ ನಿರಂತರ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ, ನಗರಗಳಲ್ಲಿ ಬದುಕುಳಿಯಲು, ನಗರವಾಸಿ ಹಲ್ಲಿಗಳು ತಮ್ಮ ಹಳ್ಳಿವಾಸಿ ಸಹೋದರರಿಗಿಂತ ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸುವತ್ತ ಸಫಲವಾಗಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಒಂದು ಸಂಶೋಧನಾ ತಂಡದ  ಸಂಶೋಧನಾ ಫಲಿತಾಂಶವು ಸೂಚಿಸುತ್ತದೆ.

ಈ ಹಲ್ಲಿಗಳು, ಆಹಾರ ಹುಡುಕಿಕೊಳ್ಳಲು, ವಿಶ್ರಾಂತಿ ಪಡೆದುಕೊಳ್ಳಲು ಅಥವಾ ಸಂಭಾವ್ಯ ಅಪಾಯವನ್ನು ಪತ್ತೆ ಮಾಡಲು ವಿಧವಿಧವಾದ ಕೌಶಲ್ಯಗಳನ್ನು ಉಪಯೋಗಿಸುತ್ತವೆ. ಇದನ್ನು ಮಾಡಲು ನೆಲಗುರುತುಗಳನ್ನು ಅಥವಾ ನೆಲಗಾಣ್ಕೆಗಳನ್ನು ನೆನಪಲ್ಲಿ ಇಟ್ಟುಕೊಳ್ಳುತ್ತವೆ. ಹಳ್ಳಿಗಳ ಕಡೆ ಇಂತಹ ಬದಲಾವಣೆಗಳು ಕ್ಷಿಪ್ರಗತಿಯಲ್ಲಿ ಆಗುವುದಿಲ್ಲ, ಆದರೆ, ನಗರಗಳಲ್ಲಿ ಅಥವಾ ಪಟ್ಟಣಗಳಲ್ಲಿ ಇಂತಹ ಬದಲಾವಣೆಗಳು ವೇಗವಾಗಿ ಆಗುತ್ತವೆ. ಹಾಗಾಗಿ, ಈ ಹಲ್ಲಿಗಳು ಇಂತಹ ವೇಗದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಬೇಕಾಗುತ್ತದೆ.

ಅಂತರರಾಷ್ಟ್ರೀಯ ಪತ್ರಿಕೆಯಾದ “ಬಯಾಲಜಿ ಲೆಟರ್ಸ್”ನಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಸಂಶೋಧಕರು ಹಲ್ಲಿಯ ಒಂದು ಪ್ರಭೇದವಾದ ಇಂಡಿಯನ್ ರಾಕ್ ಅಗಾಮ (ಸಾಮೋಫೈಲಸ್ ಡಾರ್ಸಾಲಿಸ್, Psammophilus dorsalis)ದ ಕಲಿಕಾ ಸಾಮರ್ಥ್ಯವನ್ನು ಅನ್ವೇಷಿಸಿಸಲು ಪ್ರಯತ್ನಿಸಿದ್ದಾರೆ. ಸಂಶೋಧಕರು ನಗರ ಹಾಗೂ ಉಪನಗರ ಪ್ರದೇಶಗಳಿಂದ ಕೆಲವು ವಯಸ್ಕ ಗಂಡು ಹಲ್ಲಿಗಳನ್ನು ಹಿಡಿದು, ಅಡ್ಡಕಂಬಿ ಇರುವ ಒಂದು ಚಿಕ್ಕ ಪಾಗಾರವನ್ನು ನಿರ್ಮಿಸಿ, ಅದರ ಅಂಚಿನಲ್ಲಿ ಪಿ.ವಿ.ಸಿ. ಪೈಪ್ಗಳನ್ನು ಉಪಯೋಗಿಸಿ ಎರಡು ಒಂದೇ ತರಹ ಕಾಣುವ ಆಶ್ರಯ ಸ್ಥಾನಗಳನ್ನು ಸೃಷ್ಟಿಸಿ, ಪಾಗಾರದ ದೂರದ ಮೂಲೆಯಲ್ಲಿ ಇರಿಸಿದರು. ಎರಡು ಪ್ರಯೋಗಗಳಲ್ಲಿ ಈ ಹಲ್ಲಿಗಳು ಎಷ್ಟು ಬೇಗ ಈ ಆಶ್ರಯಸ್ಥಾನಗಳನ್ನು ಗುರುತಿಸಬಲ್ಲವು ಎಂದು ಮೌಲ್ಯಮಾಪನ ಮಾಡಿದರು.

ಮೊದಲನೆಯ ಪ್ರಯೋಗದಲ್ಲಿ ಸಂಶೋಧಕರು ಒಂದು ಆಶ್ರಯ ಸ್ಥಾನವನ್ನು ಸುರಕ್ಷಿತವೆಂದು, ಕೆಂಪು ಚೌಕದೊಂದಿಗೆ ಗುರುತು ಮಾಡಿ, ಪರಭಕ್ಷಕ ಅಕ್ರಮಣದಂತೆ ನಕಲು ಮಾಡುತ್ತಾ, ಬೇರೆ ಯಾವುದಾದರೂ ಸುರಕ್ಷಿತ ಸ್ಥಳವನ್ನು ಆಯ್ಕೆಮಾಡಿಕೊಳ್ಳುವುದರ ಬಗ್ಗೆ ಪರೀಕ್ಷಿಸಲು, ಅದರ ಬಾಲಗಳ ಮೇಲೆ ಮೃದುವಾಗಿ ತಟ್ಟಿದರು. ಮೊದಲನೆಯ ಪ್ರಯತ್ನದಲ್ಲಿ ಹಲ್ಲಿಗಳು, ಸಂಶೋಧಕರು ಕೆಂಪು ಚೌಕದೊಂದಿಗೆ ಗುರುತಿಸಿದಂತಹ ಆಶ್ರಯ ಸ್ಥಾನವನ್ನು ಆಯ್ಕೆ ಮಾಡಿದವು. ಸಮಯದೊಂದಿಗೆ, ಇದನ್ನೇ ತಮ್ಮ ಆಶ್ರಯ ಸ್ಥಾನವೆಂದು ಆಯ್ಕೆ ಮಾಡಲು ಕಲಿತವು.

ಇನ್ನೊಂದು ಪ್ರಯೋಗದಲ್ಲಿ, ಮೊದಲನೆಯ ಪ್ರಯೋಗವನ್ನೇ ವ್ಯತಿರಿಕ್ತವಾಗಿಸಿ, ಕೆಂಪು ಚೌಕ ಇಲ್ಲದಿರುವ ಪಿ.ವಿ.ಸಿ ಪೈಪ್ಅನ್ನು ಸುರಕ್ಷಿತವೆಂದು ಪರಿಗಣಿಸಲಾಯಿತು. ಪುನಃ, ಪರಭಕ್ಷಕ ಆಕ್ರಮಣವನ್ನು ನಕಲು ಮಾಡಿ, ಹಲ್ಲಿಗಳ ಬಾಲಗಳ ಮೇಲೆ ತಟ್ಟಿದಾಗ, ಹಲ್ಲಿಗಳು ಹೇಗೆ ಹಳೆಯದನ್ನು ಮರೆತು, ಹೊಸ, ಸುರಕ್ಷಿತ ಆಶ್ರಯ ಸ್ಥಾನಗಳನ್ನು ಗುರುತು ಹಿಡಿಯುವ ಪ್ರಯತ್ನ ಮಾಡಿದವು ಎನ್ನುವುದರ ಬಗ್ಗೆ ಸಂಶೋಧಕರು ದಾಖಲಿಸಿದರು.

ನಗರ-ಉಪನಗರ ಹಲ್ಲಿಗಳು ಮತ್ತು ಹಳ್ಳಿಗಳ ಕಡೆ ಇರುವ ಹಲ್ಲಿಗಳ ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು. ನಗರವಾಸಿ ಹಲ್ಲಿಗಳು 7 ಪ್ರಯತ್ನಗಳಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಆಶ್ರಯಗಳನ್ನು ಗುರುತಿಸಿದರೆ, ಹಳ್ಳಿಗಳ ಕಡೆ ಇರುವ ಹಲ್ಲಿಗಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಆಶ್ರಯಗಳನ್ನು ಗುರುತಿ ಸುಮಾರು 14 ಪ್ರಯತ್ನಗಳ ಅವಶ್ಯಕತೆ ಕಂಡುಬಂದಿತು. ಹಳೆಯದನ್ನು ವೇಗವಾಗಿ ಮರೆತು, ಹೊಸತನ್ನು ಕಲಿಯುವ ಈ ವೀಕ್ಷಣೆ ಹಲ್ಲಿಗಳ ಅರಿವಿನ ನಮ್ಯತೆಯನ್ನು ಸೂಚಿಸುತ್ತದೆ.

ಆದರೆ, ಇನ್ನೊಂದು ಉದ್ಯಾನವನ ಹಲ್ಲಿಯ ಪ್ರಭೇದವಾದ ಲಾಂಪ್ರೋಫೊಲಿಸ್ ಡೆಲಿಕೇಟ - ನಗರವಾಸಿಗಳಾಗಲಿ, ಹಳ್ಳಿವಾಸಿಗಳಾಗಲಿ ಇಂತಹ ಒಂದು ಸಾಮರ್ಥ್ಯವನ್ನು ಪ್ರದರ್ಶಿಸಲಿಲ್ಲ. ಈ ಎರಡೂ ಪ್ರಭೇದಗಳ ಕಲಿಕಾ ವ್ಯತ್ಯಾಸಗಳನ್ನು ನಗರ ಪರಿಸರಗಳಲ್ಲಿ ವಿಭಿನ್ನವಾದ ಆಯ್ಕೆಯ ಒತ್ತಡಗಳ ಗುಣಲಕ್ಷಣಗಳೆಂದು ಸಂಶೋಧಕರು ಅಂದಾಜಿಸುತ್ತಾರೆ.

ಅರಿವಿನ ಅಭಿವೃದ್ಧಿ  ನಗರವಾಸಿ ಸಾಮೋಫೈಲಸ್ ಡಾರ್ಸಾಲಿಸ್ ನ ಜೀವನಚಕ್ರದಲ್ಲಿ ಒಂದು ಮಹತ್ತರವಾದ ಹಂತ. ಹಲ್ಲಿಯ ಇಂತಹ ಅರಿವಿನ ಸಾಮರ್ಥ್ಯ, ನಗರ ಹಾಗೂ ಹಳ್ಳಿಗಳಲ್ಲಿ ಬೆಳೆದ  ನಡುವಿನ ವಿಕಸನ ವ್ಯತ್ಯಾಸಗಳಿರಬಹುದು, ಅಥವಾ ಒಂದು ಹಲ್ಲಿಯ ಜೀವಮಾನದಲ್ಲಿ ಆಗುವಂತಹ ಅನುಭವಗಳಿರಬಹುದು, ಅಥವಾ ಈ ಎರಡರ ಸಂಯೋಗವಿರಬಹುದು ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಈ ಸಂಶೋಧನೆಯ ಫಲಿತಾಂಶಗಳು ನಗರವಾಸಿ ಪ್ರಾಣಿಪಕ್ಷಿಗಳ ನಗರ ಪರಿಸರ ಹೊಂದಾಣಿಕೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿ ಪಕ್ಷಿಗಳೂ ಸಹ ನಗರೀಕರಣಕ್ಕೆ ಹೊಂದಿಕೊಳ್ಳಬೇಕಲ್ಲವೇ?