ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಪರಾಗಸ್ಪರ್ಶಕ ಕೀಟಗಳ ಮೇಲೆ ಗಾಳಿಯಲ್ಲಿರುವ ವಿಷಕಾರಿ ಮಾಲಿನ್ಯಕಾರಕಗಳ ಪರಿಣಾಮ

ಬೆಂಗಳೂರು
13 Aug 2020
ಪರಾಗಸ್ಪರ್ಶಕ ಕೀಟಗಳ ಮೇಲೆ ಗಾಳಿಯಲ್ಲಿರುವ ವಿಷಕಾರಿ ಮಾಲಿನ್ಯಕಾರಕಗಳ ಪರಿಣಾಮ

ಬೆಂಗಳೂರಿನ ಜೈಂಟ್ ಏಷ್ಯನ್ ಹನಿ ಬೀ (ಏಪಿಸ್ ಡೋರ್ಸಾಟಾ) ವಸಾಹತು [ಚಿತ್ರ ಕೃಪೆ: ಎಲಿಫೆಂಟ್ ಕಾರಿಡಾರ್ ಫಿಲ್ಮ್ಸ್]

ವಾಯುಮಾಲಿನ್ಯವು ಬೆಂಗಳೂರಿನಲ್ಲಿ ಜೇನುನೊಣಗಳ ಉಳಿವು, ಆರೋಗ್ಯ ಮತ್ತು ವಂಶವಾಹಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೊಸ ಸಂಶೋಧನೆಗಳು ತೋರಿಸುತ್ತಿವೆ..

ಜೇನೇ! ಜೇನು ನೊಣಗಳು ಎಲ್ಲಿವೆ?
ಮರಗಳಿಂದ ದೂರ, ಬಹುದೂರ ಹೋಗಿವೆ!
ನಗರಗಳ ಗಾಳಿಯ ಸ್ಥಿತಿ  ಕೆಟ್ಟಿದೆ,
ಎಲ್ಲರನ್ನೂ ಉಸಿರುಗಟ್ಟಿಸಿ ಅದು ಕೊಂದಿದೆ!

ಇದು ಕೇವಲ ಜೇನುನೊಣಗಳಿಗೆ ಒದಗಿದ ಸಂಕಷ್ಟವಲ್ಲ; ವಾಸ್ತವದಲ್ಲಿ, ಬಹುಪಾಲು ಎಲ್ಲಾ ಜಾತಿಯ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೆಂದೂ ಕಂಡಿರದ ವೇಗದಲ್ಲಿ ಸಾಯುತ್ತಿವೆ ಮತ್ತು ಜಗತ್ತು ಕೀಟಗಳ ಸಂಪೂರ್ಣ ವಿನಾಶದ (ಅಪೋಕ್ಯಾಲಿಪ್ಸ್)  ಕಡೆಗೆ ಸಾಗುತ್ತಿದೆ! ಕಳೆದ ಮೂರು ದಶಕಗಳಲ್ಲಿ ಜಗತ್ತಿನಾದ್ಯಂತ ಕೀಟಗಳ ಜನಸಂಖ್ಯೆಯು, ಸದ್ದಿಲ್ಲದೇ ಖಂಡಿತವಾಗಿಯೂ ಕಾಲು ಭಾಗದಷ್ಟು ಕಡಿಮೆಯಾಗಿದೆ. ಅಮೆರಿಕದ ಕಾನ್ಸಾಸ್‌ನಲ್ಲಿ ಮಿಡತೆಗಳ ಜನಸಂಖ್ಯೆಯು 30% ರಷ್ಟು ಕುಸಿದಿದೆ ಮತ್ತು ಜರ್ಮನಿಯಲ್ಲಿ ಒಟ್ಟಾರೆ ಕೀಟಗಳ ಜನಸಂಖ್ಯೆಯು ಆಘಾತಕರ ಪ್ರಮಾಣದಲ್ಲಿ ಅಂದರೆ 75% ರಷ್ಟು ಕುಸಿದಿರುವುದು ಕಂಡುಬಂದಿದೆ.  ನಮ್ಮ ದೇಶದ ಉದಾಹರಣೆಯನ್ನೇ ನೋಡಿ:  ಒಡಿಸ್ಸಾದ ರೈತರು ತಮ್ಮ ಹೊಲಗಳಲ್ಲಿ, ತಮ್ಮ ಅನೇಕ ಬೆಳೆಗಳ ಪ್ರಾಥಮಿಕ ಪರಾಗಸ್ಪರ್ಶಕಗಳಾದ ಜೇನುನೊಣಗಳ ಸಂಖ್ಯೆಯಲ್ಲಿ, 80% ನಷ್ಟು ಕುಸಿತವನ್ನು ಗಮನಿಸಿದ್ದಾರೆ!   

ಹಲವಾರು ವರ್ಷಗಳಿಂದ, ಕೀಟಗಳ ಸಾಮೂಹಿಕ ಸಾವಿಗೆ ಕೀಟನಾಶಕಗಳಲ್ಲಿನ ರಾಸಾಯನಿಕಗಳೇ ಕಾರಣ ಎಂದು ಭಾವಿಸಲಾಗಿತ್ತು; ಆದರೆ ಈ ಹೊಸ ಅಧ್ಯಯನವು, ಗಾಳಿಯಲ್ಲಿನ ವಿಷಕಾರಿ ಮಾಲಿನ್ಯಕಾರಕಗಳು ಈ ಕೀಟಗಳ ಸಾಮೂಹಿಕ ನಾಶಕ್ಕೆ ಕೀಟನಾಶಕಗಳಿಗೆ ಸಮಾನವಾಗಿ ಕಾರಣವೆಂದು ಕಂಡುಹಿಡಿದಿದೆ. ಗಾಳಿಯಲ್ಲಿರುವ ವಿಷಕಾರಿ ಮಾಲಿನ್ಯಕಾರಕಗಳು ಮನುಷ್ಯರ ಮೇಲೆ ಪರಿಣಾಮ ಬೀರಿದಂತೆಯೇ,  ಜೇನುಹುಳುಗಳೂ ಸೇರಿದಂತೆ ಪರಾಗಸ್ಪರ್ಶಕ ಕೀಟಗಳ ಉಳಿವು, ನಡವಳಿಕೆ, ಆರೋಗ್ಯ ಮತ್ತು ವಂಶವಾಹಿಗಳ ಮೇಲೂ ಪರಿಣಾಮ ಬೀರುತ್ತಿವೆ.

“ಬೆಂಗಳೂರಿನಲ್ಲಿ ನಡೆಸಲಾದ ಕೆಲವು ಸ್ಥಳೀಯ ಅವಲೋಕನಗಳ ನಂತರ ಗಮನಕ್ಕೆ ಬಂದ ಸಂಗತಿಯೆಂದರೆ, ನಗರದ ಕೇಂದ್ರ ಭಾಗಗಳಲ್ಲಿ ಪರಾಗಸ್ಪರ್ಶಕ ಕೀಟಗಳ ಸಂಖ್ಯೆಯಲ್ಲಾಗಿರುವ ಇಳಿಕೆ. ಕೀಟನಾಶಕಗಳ ಬಳಕೆಯೇ ಇದಕ್ಕೆ ಕಾರಣವಾಗಿದೆಯೇ ಅಥವಾ ನೀರು ಅಥವಾ ನೆರಳಿನ ಕೊರತೆಯೇ? ನಮ್ಮಲ್ಲಿ ಮೂಡಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಬಯಸಿದ್ದೇವೆ ” ಎಂದು ಈ ಅಧ್ಯಯನದ ಹಿಂದಿನ ಪ್ರೇರಣೆಯ ಬಗ್ಗೆ ಡಾ.ಶಾನನ್ ಓಲ್ಸನ್ ತಿಳಿಸಿಕೊಡುತ್ತಾರೆ.

ಇವರು ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದಲ್ಲಿ (ಎನ್‌ಸಿಬಿಎಸ್) ಪ್ರಾಧ್ಯಾಪಕರಾಗಿದ್ದಾರೆ. NICE Lab (ನೈಸ್ ಲ್ಯಾಬ್) ಎಂದು ಕರೆಯಲ್ಪಡುವ ಇವರ ಪ್ರಯೋಗಾಲಯದಲ್ಲಿ ಕೀಟಗಳ ಮೇಲೆ ಅಧ್ಯಯನ ನಡೆಯುತ್ತದೆ; ಅದರಲ್ಲೂ ವಿಶೇಷವಾಗಿ,  ಪರಾಗಸ್ಪರ್ಶಕ ಕೀಟಗಳ ರಾಸಾಯನಿಕ ಪರಿಸರ ವಿಜ್ಞಾನದ ಮೇಲೆ ಸಂಶೋಧನೆಗಳು ನಡೆಯುತ್ತಿವೆ.

ಅಮೇರಿಕಾದ ಸಹಯೋಗಿಗಳೊಂದಿಗೆ ಎನ್‌ಸಿಬಿಎಸ್ ನ ಸಂಶೋಧಕರು ನಡೆಸಿದ ಈ ಅಧ್ಯಯನವನ್ನು ‘ಪ್ರೊಸೀಡಿಂಗ್ಸ್  ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ (ಪಿಎನ್‌ಎಎಸ್) ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಬೇಕಾದ ಭಾಗಶಃ ಹಣದ ನೆರವನ್ನು ಟಾಟಾ ಶಿಕ್ಷಣ ಟ್ರಸ್ಟ್, ಪರಮಾಣು ಶಕ್ತಿ ಇಲಾಖೆ (ಡಿಎಇ) ಹಾಗೂ ವಿಜ್ಞಾನ ಮತ್ತು ಅಭಿಯಂತರ ಸಂಶೋಧನಾ ಮಂಡಳಿಗಳು (ಎಸ್‌ಇಆರ್‌ಬಿ) ನೀಡಿವೆ.

ನಾಲ್ಕು ವರ್ಷಗಳ ಕಾಲ, ಈ ಅಧ್ಯಯನದ ಪ್ರಮುಖ ಲೇಖಕಿ ಗೀತಾ ತಿಮ್ಮೆಗೌಡ ಅವರು, ಜೈಂಟ್ ಏಷ್ಯನ್ ಜೇನುನೊಣಗಳನ್ನು (ಏಪಿಸ್ ಡೋರ್ಸಾಟಾ) ವೀಕ್ಷಿಸಿ ಅವಲೋಕಿಸಲು ಮತ್ತು ಸಂಗ್ರಹಿಸಲು ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

"ಜೈಂಟ್ ಏಷ್ಯನ್ ಜೇನುಹುಳುಗಳು (ಹೆಜ್ಜೇನಿನ ಒಂದು ಪ್ರಭೇದ) ಭಾರತೀಯ ನಗರಗಳ ಸಾಮಾನ್ಯ ನಿವಾಸಿಗಳು ಮಾತ್ರವಲ್ಲ, ಭಾರತದ ಆಹಾರ ಸುರಕ್ಷತೆ ಮತ್ತು ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಕೊಡುಗೆ ನೀಡುವ ಸದಸ್ಯರೂ ಆಗಿವೆ; ಈ ಪ್ರಭೇದದ ಜೇನುನೊಣಗಳು ದೇಶದ 80% ನಷ್ಟು ಜೇನುತುಪ್ಪವನ್ನು ಉತ್ಪಾದಿಸುತ್ತವೆ ಮತ್ತು ಕರ್ನಾಟಕವೊಂದರಲ್ಲೇ  687 ಸಸ್ಯಗಳನ್ನು ಪರಾಗಸ್ಪರ್ಶ ಮಾಡುತ್ತವೆ! ಹಾಗಾಗಿ, ನಮ್ಮ ಪರಿಸರ ವ್ಯವಸ್ಥೆಯ ಸೇವೆಗಳ ಮೇಲೆ ನಗರೀಕರಣದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಇದು ಅತ್ಯುತ್ತಮ ವ್ಯವಸ್ಥೆಯಾಗಿದೆ ”ಎಂದು ಡಾ ಓಲ್ಸನ್ ಈ ನಿರ್ದಿಷ್ಟ ಜೇನುನೊಣವನ್ನೇ ಅಧ್ಯಯನ ಮಾಡಲು ಏಕೆ ಆರಿಸಿಕೊಂಡರು ಎಂಬುದರ ಕುರಿತು ಮಾತನಾಡುತ್ತಾ ವಿವರಿಸುತ್ತಾರೆ.           

ನಗರದಾದ್ಯಂತದ ಪ್ರತಿಯೊಂದು ಮಾದರಿ ಸಂಗ್ರಹಣಾ ಸ್ಥಳದಲ್ಲಿಯೂ, ಹಳದಿ ಹೂವುಳ್ಳ ಕಹಳೆ ಪೊದೆ (ಟೆಕೋಮಾ ಸ್ಟ್ಯಾನ್ಸ್) ಗೆ ಭೇಟಿ ನೀಡುವ ಜೈಂಟ್ ಏಷ್ಯನ್ ಜೇನುನೊಣಗಳ ಸಂಖ್ಯೆಯನ್ನು ಸಂಶೋಧಕರು ಗಮನಿಸಿದರು. ಅವರು ಆ ವಿವಿಧ ಸ್ಥಳಗಳಿಂದ 1,820 ಜೇನುನೊಣಗಳನ್ನು ಸಂಗ್ರಹಿಸಿದರು ಮತ್ತು ಈ ಜೇನುನೊಣಗಳ ಮೇಲೆ ವಾಯುಮಾಲಿನ್ಯಕಾರಕಗಳಿಂದ ಉಂಟಾದ ಹಾನಿಯನ್ನು ವಿವರವಾಗಿ ವಿಶ್ಲೇಷಿಸಿದರು. ಆ ಜೇನುನೊಣಗಳ ಬದುಕುಳಿಯುವಿಕೆ, ಹೃದಯದ ಗುಣಮಟ್ಟ, ಉಸಿರಾಟದ ಪ್ರಮಾಣ, ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆ, ರಕ್ತ ಕಣಗಳ ಸಂಖ್ಯೆ, ಒತ್ತಡ, ವಿಕಿರಣ ಹಾಗೂ ರೋಗನಿರೋಧಕ ಶಕ್ತಿಗಾಗಿ ಜೀನ್‌ಗಳ ಅಭಿವ್ಯಕ್ತಿ ಮತ್ತು ದೇಹದ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿರುವ ಸಣ್ಣಸಣ್ಣ ಮಾಲಿನ್ಯಕಾರಕ ಕಣಗಳ ಪ್ರಮಾಣವನ್ನು ಅಧ್ಯಯನ ಮಾಡಿದರು.

ಮಾಲಿನ್ಯಕಾರಕಗಳಿಂದ ಜೇನುನೊಣಗಳಿಗೆ ಅಪಾರ ಹಾನಿ!                                             

ವಾಯು ಮಾಲಿನ್ಯಕಾರಕಗಳ ಸಣ್ಣ ಸಣ್ಣ ಕಣಗಳು (ಪಾರ್ಟಿಕ್ಯುಲೇಟ್ ಮ್ಯಾಟರ್ ಪಿಎಂ 10 ಮತ್ತು ಪಿಎಂ 2.5), ನಮ್ಮ ಶ್ವಾಸಕೋಶವನ್ನು ಉಸಿರುಗಟ್ಟಿಸುತ್ತವೆ ಮತ್ತು ನಮ್ಮಲ್ಲಿ ತೀವ್ರವಾದ ಉಸಿರಾಟದ ಸಮಸ್ಯೆ, ಹೃದಯರಕ್ತನಾಳದ ಸಮಸ್ಯೆ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತವೆ. ಜೇನುನೊಣಗಳಲ್ಲಿ, ಈ ಕಣಗಳು ಇದಕ್ಕಿಂತಲೂ ಹೆಚ್ಚು ಹಾನಿ ಮಾಡುತ್ತವೆ  ಮತ್ತು ಅವುಗಳಲ್ಲಿ 80% ನಷ್ಟು ಹುಳುಗಳನ್ನು ಕೊಲ್ಲುತ್ತವೆ ಎಂದು ಕಂಡುಬಂದಿದೆ.

ಸಂಗ್ರಹಿಸಿದ ಜೇನುನೊಣಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಡಿಯಲ್ಲಿ ಗಮನಿಸಿದಾಗ, ಜೇನುನೊಣಗಳ ಹಿಂಗಾಲುಗಳು, ಆಂಟೆನಾಗಳು ಮತ್ತು ರೆಕ್ಕೆಗಳು ಸಣ್ಣ ಸಣ್ಣ ಮಾಲಿನ್ಯಕಾರಕ ಕಣಗಳಿಂದ ತುಂಬಿರುವುದನ್ನು ಸಂಶೋಧಕರು ಗಮನಿಸಿದರು. ಅಲ್ಲದೇ, ಜೇನುನೊಣಗಳ ಮೇಲೆ ಆರ್ಸೆನಿಕ್, ಸೀಸ, ಟಂಗ್ಸ್ಟನ್ ಮತ್ತು ಅಲ್ಯೂಮಿನಿಯಂನಂತಹ ವಿಷಕಾರಿ ಲೋಹಗಳು ಸಹ ಕಂಡುಬಂದಿವೆ. ವಾಯುಮಾಲಿನ್ಯದ ಮಟ್ಟವು ಹೆಚ್ಚಿಗೆ ಇರುವ ತಾಣಗಳಲ್ಲಿ, ಹೀಗೆ ಜೇನುನೊಣಗಳ ಮೇಲೆ ಅಂಟಿಕೊಂಡಿರುವ  ಕಣಗಳ ಮತ್ತು ಲೋಹಗಳ ಪ್ರಮಾಣವೂ ಅಧಿಕವಾಗಿತ್ತು.
                                                                                                                                   

ಭಾರತದ ಬೆಂಗಳೂರಿನಲ್ಲಿ 98.6 µg / m3 ರಷ್ಟು PM10 ಸಾಂದ್ರತೆಯೊಂದಿಗೆ ಹೆಚ್ಚು ಮಲಿನಗೊಂಡ ಸ್ಥಳದಿಂದ ಸಂಗ್ರಹಿಸಲಾದ ದೈತ್ಯ ಏಷ್ಯನ್ ಜೇನುನೊಣದ ಕಾಲಿನ ಚಿತ್ರ - ಲೇಪನ ರಹಿತ ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೊಗ್ರಾಫ್.

[ಚಿತ್ರ ಕೃಪೆ: 540X ವರ್ಧನೆಯಲ್ಲಿ ಝೀಸ್ ಸೂಕ್ಷ್ಮದರ್ಶಕದೊಂದಿಗೆ ಗೀತಾ ತಿಮ್ಮೆಗೌಡ]                                     

ಸಂಶೋಧಕರು, ಜೇನುನೊಣಗಳ ಹೃದಯ ಬಡಿತದಲ್ಲಿ ವೈಪರೀತ್ಯಗಳನ್ನು ಗಮನಿಸಿದರು ಮತ್ತು ಅದು ಮಾಲಿನ್ಯ ಹೆಚ್ಚಿದಂತೆ ಹೆಚ್ಚಾಗುವುದನ್ನು ಕಂಡುಕೊಂಡರು. ಮಾಲಿನ್ಯಕಾರಕಗಳಿಗೆ ಒಡ್ಡಿಕೊಂಡ ನಗರದ ಜೇನುನೊಣಗಳಲ್ಲಿನ ರಕ್ತ ಕಣಗಳ ಸಂಖ್ಯೆಯು (ಹಿಮೋಸೈಟ್ಗಳು) ಗ್ರಾಮೀಣ ಪ್ರದೇಶಗಳಿಂದ ಸಂಗ್ರಹಿಸಿದ ಜೇನುನೊಣಗಳಲ್ಲಿನ ರಕ್ತ ಕಣಗಳ ಪ್ರಮಾಣಕ್ಕಿಂತ ಕಡಿಮೆಯಿತ್ತು; ಈ ಅಂಶವು ಜೇನುನೊಣಗಳ ಶರೀರವಿಜ್ಞಾನದ ಮೇಲೆ ವಾಯುಮಾಲಿನ್ಯದ ಪರಿಣಾಮವನ್ನು ಸೂಚಿಸುತ್ತದೆ.

ಈ ಜೇನುನೊಣಗಳ ವಂಶವಾಹಿಗಳನ್ನು ವಿಶ್ಲೇಷಿಸಿದಾಗ, ಕಲುಷಿತ ಸ್ಥಳಗಳಿಂದ ಸಂಗ್ರಹಿಸಿದ ಜೇನುನೊಣಗಳಲ್ಲಿ ಒತ್ತಡದ ಪರಿಸ್ಥಿತಿಗೆ ನೀಡುವ ಪ್ರತಿಕ್ರಿಯೆ, ರೋಗನಿರೋಧಕ ಶಕ್ತಿ, ಜೀವರಾಸಾಯನಿಕ ಸಮತೋಲನ (ಹೋಮಿಯೋಸ್ಟಾಸಿಸ್) ಮತ್ತು ಚಯಾಪಚಯ ಕ್ರಿಯೆಗೆ ಕಾರಣವಾದ ಜೀನ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಲಾಗುತ್ತದೆ ಎಂದು ಈ ಅಧ್ಯಯನವು ಕಂಡುಹಿಡಿದಿದೆ; ಅಂದರೆ, ಈ ವಿವಿಧ ಬಹುಮುಖ್ಯ ಕಾರ್ಯಗಳಲ್ಲಿ ಅವಶ್ಯಕವಾದ ಪ್ರೋಟೀನ್‌ಗಳು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಉತ್ಪತ್ತಿಯಾಗುವಂತೆ ಈ ವಂಶವಾಹಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುವ ಉತ್ಕರ್ಷಣ ನಿರೋಧಕ ವಿಟೆಲ್ಲೋಜೆನಿನ್ ನಂತಹ ಕೆಲವು ಪ್ರೋಟೀನ್ಗಳು ಮಾತ್ರ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರುವುದು ಕೂಡ ಕಂಡುಬಂದಿದೆ!                                                                                                                         

ಇದರ ನಂತರ ಸಂಶೋಧಕರು ಪ್ರಯೋಗಾಲಯದಲ್ಲಿ ಬೆಳೆದ ನುಸಿಯನ್ನು (ಹಣ್ಣಿನ ನೊಣಗಳು - ಡ್ರೊಸೊಫಿಲಾ ಮೆಲನೊಗ್ಯಾಸ್ಟರ್) ಕಲುಷಿತ ಸ್ಥಳಗಳಲ್ಲಿ ಗಾಳಿಗೆ ಒಡ್ಡಿದರು ಮತ್ತು ಈ ಕೀಟಗಳ ಮೇಲೆ ಮಾಲಿನ್ಯದ ಪರಿಣಾಮವೇನಾದರೂ ಭಿನ್ನವಾಗಿದೆಯೇ ಎಂದು ಅರಿಯಲು ಅವುಗಳನ್ನು ಅಧ್ಯಯನ ಮಾಡಿದರು. ಜೇನುನೊಣಗಳಂತೆಯೇ, ಹಣ್ಣಿನ ನೊಣಗಳ ದೇಹದಲ್ಲಿ ಸಂಗ್ರಹವಾಗಿರುವ ಸಣ್ಣ ಸಣ್ಣ ಮಾಲಿನ್ಯಕಾರಕ ಕಣಗಳು, ಹೃದಯದಬಡಿತ ಹಾಗೂ ಉಸಿರಾಟದ ಪ್ರಮಾಣದಲ್ಲಿನ ಏರುಪೇರು ಮತ್ತು ವಂಶವಾಹಿಗಳ ಚಟುವಟಿಕೆಗಳಲ್ಲಿನ ಅಸಮಾನತೆಗಳನ್ನು ಉಂಟುಮಾಡಿದ್ದನ್ನು ಗಮನಿಸಿದರು.

ವಾಯುಮಾಲಿನ್ಯವು ಇತರ ಪರಾಗಸ್ಪರ್ಶಕ ಕೀಟಗಳ ಮೇಲೂ ಹೀಗೇ ಪರಿಣಾಮ ಬೀರಬಹುದೇ?

“ಪರಾಗಸ್ಪರ್ಶಕಗಳಾಗಿ ಕಾರ್ಯನಿರ್ವಹಿಸುವ ವಿವಿಧ ಬಗೆಯ ಕೀಟಗಳು (ನೊಣಗಳು, ಪತಂಗಗಳು, ಚಿಟ್ಟೆಗಳು, ಜೀರುಂಡೆಗಳು, ಇರುವೆಗಳು ಇತ್ಯಾದಿ) ಮೇಲೆ ಇದೇ ನಿಟ್ಟಿನಲ್ಲಿ ಸಂಶೋಧನೆ ನಡೆಸಿದರೆ  ಫಲಿತಾಂಶಗಳು ಒಂದೇ ರೀತಿಯದ್ದಾಗಿರುತ್ತವೆ ಎಂದು ಹೇಳುವುದು ಕಷ್ಟವೇ. ಆದರೂ, ನಮ್ಮ ಫಲಿತಾಂಶಗಳು ಒಂದೇ ಪ್ರಭೇದಕ್ಕೆ ಸೀಮಿತವಾಗಿಲ್ಲವೆಂದು ನಮ್ಮ ಅಧ್ಯಯನವು ತೋರಿಸುತ್ತದೆ" ಎಂದು ಡಾ ಓಲ್ಸನ್ ತಮ್ಮ ಸಂಶೋಧನೆಗಳ ವಿವರಗಳನ್ನ ಬಿಡಿಸಿಡುತ್ತಾರೆ.

 ಇದೀಗ ವಾಯುಮಾಲಿನ್ಯ ಮಾರ್ಗಸೂಚಿಗಳನ್ನು ಮರುಪರಿಶೀಲಿಸುವ ಸಮಯ!

  ಇಲ್ಲಿಯವರೆಗೂ, ಅನೇಕ ಅಧ್ಯಯನಗಳು, ಈ ಗ್ರಹವನ್ನು ಮನೆ ಎಂದು ಕರೆಯುವ ಲಕ್ಷಾಂತರ ಪ್ರಭೇದಗಳಲ್ಲಿ ಒಂದು ಪ್ರಭೇದವಾದ ಮಾನವನ ಮೇಲೆ ವಾಯು ಮಾಲಿನ್ಯಕಾರಕಗಳ ಅಪಾರ ಹಾನಿಕಾರಕ ಪರಿಣಾಮಗಳನ್ನು ಅನ್ವೇಷಿಸಿವೆ; ಪ್ರಸ್ತುತ ಅಧ್ಯಯನವು, ನಮ್ಮ ಜೊತೆಗೆ ಬದುಕುವ ಇನ್ನಿತರ ಪ್ರಭೇದಗಳ ಮೇಲೆ ವಾಯುಮಾಲಿನ್ಯವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದೆ.

"ನಮ್ಮ ಈ ಅಧ್ಯಯನವು ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ವಾಯುಮಾಲಿನ್ಯದ ಶಾರೀರಿಕ ಮತ್ತು ಆಣ್ವಿಕ ಪರಿಣಾಮಗಳನ್ನು ಕಂಡುಕೊಳ್ಳುವ ಕೆಲವೇ ಅಧ್ಯಯನಗಳಲ್ಲಿ ಒಂದಾಗಿದೆ" ಎಂದು ಡಾ ಓಲ್ಸನ್ ಈ ಸಂಶೋಧನೆಯ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುತ್ತಾರೆ.

ಭಾರತದ ಮೆಗಾಸಿಟಿಯಾದ ಬೆಂಗಳೂರು ಇತರ ನಗರಗಳಂತೆ ಕಲುಷಿತಗೊಂಡಿಲ್ಲ ಮತ್ತು ಪಿಎಂ 10 ರ ಸುಮಾರು 50μg/m3 ಸಾಂದ್ರತೆಯನ್ನು ಹೊಂದಿದೆ ಎಂಬುದೇನೋ ನಿಜ. ಆದರೆ, ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡಗಳ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ 100μg/m3 ನ ಮೇಲಿನ ಮಿತಿಯಿರಬಹುದಾಗಿದೆ. ಅಂದರೆ, ನಮ್ಮ ಈ  ಅಧ್ಯಯನದ ಫಲಿತಾಂಶಗಳು ತೋರಿಸಿದಂತೆ, ಈ ಮಾನದಂಡಗಳ ಪ್ರಕಾರ ಅಷ್ಟೇನೂ ಕಲುಷಿತವಲ್ಲದ ಬೆಂಗಳೂರಿನಲ್ಲಿಯೇ ಮಾಲಿನ್ಯದ ಇಷ್ಟೊಂದು ದುಷ್ಪರಿಣಾಮ ಕಂಡುಬಂದಿರುವಾಗ, ಮತ್ತಷ್ಟು ಮಾಲಿನ್ಯವಿರುವ ಸ್ಥಳಗಳಲ್ಲಿ ಪರಿಸರದ ಪ್ರಮುಖ ವ್ಯವಸ್ಥೆಗಳ ಮೇಲೆ ಮತ್ತೆಷ್ಟು ಪ್ರಮಾಣದಲ್ಲಿ ಮಾಲಿನ್ಯದ ದುಷ್ಪರಿಣಾಮ ಇರಬಹುದೆಂದು ಊಹಿಸಬಹುದೇನೋ. ಹಾಗಾಗಿ, ಮಾನವನನ್ನು ಹೊರತುಪಡಿಸಿ, ಕೇವಲ ಇತರ ದುರ್ಬಲ ಪ್ರಭೇದಗಳ ಮೇಲೆ ವಾಯುಮಾಲಿನ್ಯದ ಪರಿಣಾಮವನ್ನು ಗಣನೆಗೆ ತೆಗೆದುಕೊಂಡಾದರೂ ಈ ಮಾನದಂಡಗಳನ್ನು ಮರುಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ ಎಂದು ಈ ಅಧ್ಯಯದ ಫಲಿತಾಂಶಗಳು ಪ್ರತಿಪಾದಿಸುತ್ತವೆ. ವಿಶ್ವದಲ್ಲೇ ಹಣ್ಣುಗಳು ಮತ್ತು ತರಕಾರಿಗಳ ಪ್ರಮುಖ ಉತ್ಪಾದಕ ದೇಶಗಳಲ್ಲಿ ಒಂದಾಗಿರುವ ಭಾರತದ ಆರ್ಥಿಕತೆಯ ಮೇಲೂ ಈ ದುಷ್ಪರಿಣಾಮಗಳು ಪ್ರಭಾವ ಬೀರುತ್ತದೆ; ಏಕೆಂದರೆ ಭಾರತವು ಹಣ್ಣುಗಳು ಮತ್ತು ತರಕಾರಿಗಳ ಪ್ರಮುಖ ಉತ್ಪಾದಕ ದೇಶಗಳಲ್ಲಿಒಂದು ಎಂದು ಗುರುತಿಸಿಕೊಳ್ಳುವಲ್ಲಿ ಜೇನುನೊಣಗಳಂತಹ  ಪರಾಗಸ್ಪರ್ಶಕ ಕೀಟಗಳ ಕಠಿಣ ಪರಿಶ್ರಮವಿದೆ ಎಂಬುದನ್ನು ಮರೆಯುವಂತಿಲ್ಲ.         

"ಈ ಅಧ್ಯಯನವು, ಭಾರತದಲ್ಲಿ ಕೃಷಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಪರಾಗಸ್ಪರ್ಶಕಗಳ ಮೇಲೆ ವಾಯುಮಾಲಿನ್ಯದ ಪ್ರಭಾವವನ್ನು ಪರಿಶೀಲಿಸುವ ಮೂಲಕ, ಪ್ರಮುಖ ಹಾಗೂ ಹೊಸ ನೆಲೆಗಟ್ಟಿನ ಅನಾವರಣ ಮಾಡಿದೆ" ಎನ್ನುತ್ತಾರೆ ಅರುಣಭ ಘೋಷ್. ಇವರು ‘ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ವಾಟರ್’ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. "ವಿವಿಧ ಕೃಷಿ-ಪರಿಸರ ವಲಯಗಳಿಗೆ ಇದೇ ರೀತಿಯ ಅಧ್ಯಯನಗಳನ್ನು ವಿಸ್ತರಿಸಬೇಕು; ಆಗ ಅದರ ಮೂಲಕ, ಗಾಳಿಯ ಗುಣಮಟ್ಟವು ವಿವಿಧ ಪ್ರದೇಶಗಳಲ್ಲಿನ ಪರಾಗಸ್ಪರ್ಶಕಗಳು ಮತ್ತು ಸಸ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಲಭಿಸುತ್ತದೆ" ಎಂದು ಅವರು ಈ ಅಧ್ಯಯನದ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.

ನೈಸರ್ಗಿಕ ವ್ಯವಸ್ಥೆಗಳ ಮೇಲೆ ವಾಯುಮಾಲಿನ್ಯದ ನಿರ್ದಿಷ್ಟ ಪರಿಣಾಮಗಳನ್ನು ಈ ಅಧ್ಯಯನವು ತೋರ್ಪಡಿಸುತ್ತದೆ ಮತ್ತು ಅವುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಗಾಳಿಯ ಗುಣಮಟ್ಟದ ಮಾನದಂಡಗಳು ಹೇಗಿರಬೇಕು ಎಂಬುದನ್ನೂ ವಿಶದಪಡಿಸುತ್ತದೆ.

"ವಾಯುಮಾಲಿನ್ಯವು ನಮ್ಮ ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇತರ ವ್ಯವಸ್ಥೆಗಳಲ್ಲಿ ಇಂತಹ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ನಮ್ಮ ಭೂಪ್ರದೇಶಗಳು, ಜೀವನೋಪಾಯ ಮತ್ತು ಆಹಾರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಈ ನಿರ್ಣಾಯಕ ಸಮಸ್ಯೆಯನ್ನು ನಿಭಾಯಿಸಲು ಈ ಅಧ್ಯಯನವು ಇತರ ಸಂಶೋಧಕರಿಗೆ ಪ್ರೇರಣೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ ” ಎನ್ನುತ್ತಾ ತಮ್ಮ ಭರವಸೆ ವ್ಯಕ್ತಪಡಿಸುತ್ತಾರೆ ಡಾ ಓಲ್ಸನ್.

ಅತಿಬುದ್ಧಿವಂತನೆನಿಸಿಕೊಂಡಿರುವ ಮನುಷ್ಯಪ್ರಾಣಿಯ ಎಗ್ಗುಸಿಗ್ಗಿಲ್ಲದ ಚಟುವಟಿಕೆಯಿಂದ ಏರುತ್ತಿರುವ ವಾಯುಮಾಲಿನ್ಯ, ಮತ್ತು ಅದರ ಪರಿಣಾಮವಾಗಿ ಏರುತ್ತಿರುವ ಇಂತಹ ಸಮಸ್ಯೆಗಳ ಮೂಲವನ್ನೇ ಸರಿದಾರಿಗೆ ತರದಿದ್ದರೆ ಸಂಕಷ್ಟದ ಸರಮಾಲೆ ಕಟ್ಟಿಟ್ಟಬುತ್ತಿ; ಇದನ್ನು ಬಗೆಹರಿಸುವಲ್ಲಿ ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಕೊಡುಗೆ ಅಪಾರ; ಜೀವನಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಭೂಮಿತಾಯಿಗೆ ನಿಜಾರ್ಥದಲ್ಲಿ ಹತ್ತಿರವಾಗಿ, ನಮಗಾಗಿ ತಮ್ಮ ಜ್ಞಾನ ಹಾಗೂ ಶಕ್ತಿಯನ್ನು ಧಾರೆಯೆರೆಯುತ್ತಿರುವ ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಬೆನ್ನೆಲುಬಾಗಿ ನಿಲ್ಲುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದನ್ನು ಆದಷ್ಟು ಬೇಗ ಮನಗಂಡಷ್ಟೂ, ಸಮಸ್ಯೆಯ ಸುಳಿಗಿರುವ ಸೆಳವು ಕಡಿಮೆಯಾಗುತ್ತದೆ ಎಂಬುದೇ ಭರವಸೆಯ ಬೆಳಕು.