ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

'ಸೂಪರ್ ಬಗ್'ಗಳಿಗೆ ಪ್ರತಿಜೀವಕ ಮಾತ್ರೆಗಳು ಹಬ್ಬದೂಟವೇ?

ಬೆಂಗಳೂರು
8 Jun 2018

ಈ ಲೇಖನ ಸರಣಿಯಲ್ಲಿ, 'ದುರುಪಯೋಗಪಡಿಸಿಕೊಳ್ಳಲಾದ' ಪ್ರತಿಜೀವಕಗಳು 'ಸೂಪರ್ ಬಗ್'ಗಳಿಗೆ ಹೇಗೆ ಸಹಾಯ ಮಾಡುತ್ತಿವೆ ಮತ್ತು ನಾವೇಕೆ ಪ್ರತಿಜೀವಕಗಳನ್ನು ದುರುಪಯೋಗ ಪಡಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ವಿವರಗಳನ್ನು ನೀಡುತ್ತೇವೆ.

"೭೫%ರಷ್ಟು ರೋಗಿಗಳಿಗೆ ನಾವು ಪ್ರತಿಜೀವಕಗಳನ್ನು ನೀಡುತ್ತಿದ್ದೇವೆ. ಸಾಮಾನ್ಯ ಶೀತ ನೆಗಡಿಗೂ ನಾವು 'ಸೆಪ್ಟ್ರಾನ್'ನ (ಕೋ-ಟ್ರೈಮೋಕ್ಸಝೋಲ್) ಎರಡು ಮಾತ್ರೆಗಳನ್ನು ಸೂಚಿಸುತ್ತೇವೆ". ಇದು ವೈದ್ಯರ ಅಥವಾ ಶಸ್ತ್ರಚಿಕಿತ್ಸಕನ ತಪ್ಪೊಪ್ಪಿಗೆ ಹೇಳಿಕೆಯಲ್ಲ; ಸ್ವಯಂ-ಕಲಿಕೆಯ ಮೂಲಕ ಜನರ ಆರೋಗ್ಯ ಸಮಸ್ಯೆಗೆ ಉತ್ತರ ಕೊಡುವ ಗ್ರಾಮೀಣ ಔಷಧಿಕಾರನದ್ದು! ಅನಾರೋಗ್ಯವನ್ನು ಗುಣಪಡಿಸುವ ಅವರ ಉದ್ದೇಶ ಉತ್ತಮವೇ ಆಗಿದ್ದರೂ, ಅವರು ಹೀಗೆ ಸುಮ್ಮನೆ ನೀಡುತ್ತಿರುವ ಪ್ರತಿಜೀವಕದಿಂದ ಆಗಬಹುದಾದ ಸಮಸ್ಯೆಯ ಬಗ್ಗೆ ಅವರಿಗೆ ತಿಳಿದಿದೆಯೇ? ಖಂಡಿತಾ ಇಲ್ಲ!

ಪ್ರತಿಜೀವಕಗಳ ಆವಿಷ್ಕಾರ, ಅವುಗಳ ಸರ್ವತ್ರತ್ವ, ಮತ್ತು ಸುಲಭ ಲಭ್ಯತೆಯು ಆರೋಗ್ಯ ಸೇವೆಯ ದಿಕ್ಕನ್ನೇ ಬದಲಾಯಿಸಿದೆ. ನ್ಯುಮೋನಿಯಾ ಮತ್ತು ಟೈಫಾಯಿಡ್ನಂತಹ ಮಾರಕ ರೋಗಗಳನ್ನು ಈಗ ಗುಣಪಡಿಸಬಹುದಾಗಿದ್ದು, ಯಾವುದೇ ಸೋಂಕುಗಳ ಅಪಾಯವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು ಕೂಡ. ಈ ರೂಪಾಂತರದ ಅಧಿಕೇಂದ್ರವು ಆರೋಗ್ಯ ಸೇವಾ ಕ್ಷೇತ್ರವಾಗಿದೆ. ಔಷಧೀಯ ಕಂಪನಿಗಳು ಆಂಟಿಬಯೋಟಿಕ್ಸ್ ಅಥವಾ ಪ್ರತಿಜೀವಕಗಳು ಎಂಬ ಮ್ಯಾಜಿಕ್ ಮಾತ್ರೆಗಳ ನಿರ್ಮಾಪಕರಾಗಿದ್ದು, ಜ್ಞಾನ ಮತ್ತು ಪರಿಣತಿಯ ದೀವಿಗೆ ಹಿಡಿದ ವೈದ್ಯರು ಇವುಗಳ ಪೋಷಕರು ಮತ್ತು ಔಷಧಿಕಾರರು ಸಹಾಯಕರು; ನಾವು, ಆರೋಗ್ಯ ವ್ಯವಸ್ಥೆಯಲ್ಲಿನ ನಮ್ಮ ವಿಶ್ವಾಸದಿಂದಾಗಿ, ಹೆಮ್ಮೆಯ ಗ್ರಾಹಕರಾಗಿದ್ದೇವೆ.

ಆದರೆ ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಪಾತ್ರಗಳು ಕಲಮಲಗೊಂಡಿದ್ದು, ಈ ವಿದ್ಯಮಾನವು 'ಸೂಪರ್ ಬಗ್'ಗಳ ಪರವಾಗಿ ಕೆಲಸ ಮಾಡಿದೆ.

'ಸೂಪರ್ ಬಗ್'ಗಳೆಂದರೆ ಪ್ರತಿಜೀವಕ ನಿರೋಧಕ ಸೂಕ್ಷ್ಮಾಣು ಜೀವಿಗಳು; ಇವು ಪ್ರತಿಜೀವಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡು, ಈಗ ನಮ್ಮ ಅಸ್ತಿತ್ವಕ್ಕೇ ಕುತ್ತು ತರುತ್ತಿವೆ. ಈಗಾಗಲೇ ಕ್ಷಯರೋಗ, ಇನ್ಫ್ಲುಯೆನ್ಸ ಮತ್ತಿತರ ಕೆಲವು ಕಾಯಿಲೆಗಳನ್ನು ನಿವಾರಿಸುವ ಪ್ರತಿಜೀವಕಗಳಿಗೆ ನಿರೋಧಕವಾಗಿರುವ 'ಸೂಪರ್ ಬಗ್'ಗಳು ತಲೆಯೆತ್ತಿವೆ. ಈ ಸಮಸ್ಯೆಯು ಎಷ್ಟು ತೀವ್ರವಾಗಿದೆಯೆಂದರೆ, 'ವಿಶ್ವ ಆರೋಗ್ಯ ಸಂಸ್ಥೆ'ಯು 'ಸೂಪರ್ ಬಗ್'ಗಳ ಪಟ್ಟಿಯನ್ನು ಹೊರತಂದಿದೆ, ಈ ಅಪಾಯಕಾರಿ 'ಸೂಪರ್ ಬಗ್'ಗಳ ವಿರುದ್ಧ ಬಳಸಲು ಸಾಧ್ಯವಾಗುವಂತಹ ಉತ್ತಮ ಪ್ರತಿಜೀವಕಗಳನ್ನು ಅನ್ವೇಷಿಸಲು ಸಂಶೋಧಕರನ್ನು ಒತ್ತಾಯಿಸಿದೆ.

"ಸರಿಯಾದ ಅವಧಿಗೆ ಸರಿಯಾದ ಔಷಧಿಗಳನ್ನು ಪಡೆಯದಿರುವುದು ಸೂಕ್ಷ್ಮಜೀವಿಯ ಪ್ರತಿಜೀವಕ ನಿರೋಧಕತ್ವಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು. ವೈದ್ಯರ / ನಕಲಿ ವೈದ್ಯರ ಜ್ಞಾನದ ಕೊರತೆಯಿಂದಾಗಿ ನೀಡುವ ತಪ್ಪು ಪ್ರಿಸ್ಕ್ರಿಪ್ಷನ್ ಇದಕ್ಕೆ ಕಾರಣ" ಎಂದು ವೆಲ್ಲೂರ್ ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಜಾಯ್ ಸರೋಜಿನಿ ಮೈಕೇಲ್ ಹೇಳುತ್ತಾರೆ.

ವೈದ್ಯರ ಸೂಚನೆಯೇ ಪ್ರಶ್ನಾರ್ಹವಾದುದಾದರೆ, ನಾವು ಔಷಧಿ ಅಂಗಡಿಗಳ ಔಷಧಿಕಾರರು ಕೊಡುವ ಪ್ರಿಸ್ಕ್ರಿಪ್ಷನನ್ನು ನಿಜವಾಗಿಯೂ ನಂಬಬಹುದೇ? ಅಥವಾ ಸ್ವ-ಔಷಧೋಪಚಾರ ಸರಿಯೇ?

ಗ್ರಹಿಕೆ - ಅನಿಸಿಕೆಗಳ ಆಟದಲ್ಲಿ ಪ್ರತಿಜೀವಕಗಳು

ಔಷಧಿಕಾರರೇ ವೈದ್ಯರಂತೆ ವರ್ತಿಸಿ, ಸಾಮಾನ್ಯ ಶೀತದಂತಹ ಆರೋಗ್ಯ ಸಮಸ್ಯೆಗಳಿಗೆ ಪ್ರತಿಜೀವಕಗಳನ್ನು ಶಿಫಾರಸು ಮಾಡುತ್ತಾರೆ ಎಂಬ ಅಂಶವು ಹಲವಾರು ಕಾರಣಗಳಿಂದಾಗಿ ಆತಂಕಕಾರಿ. ಮೊದಲಿಗೆ, ರೋಗಿಗಳಿಗೆ ಪ್ರತಿಜೀವಕಗಳನ್ನು ಅಥವಾ ಯಾವುದೇ ಔಷಧಿಗಳನ್ನು ಸೂಚಿಸಲು ಅವರಿಗೆ ಅರ್ಹತೆ ಇಲ್ಲ.  ಎರಡನೆಯದಾಗಿ, ಪ್ರತಿಜೀವಕಗಳು ಸಾಮಾನ್ಯ ಶೀತವನ್ನು ಗುಣಪಡಿಸುವುದಿಲ್ಲ; ಏಕೆಂದರೆ, ಇದು ವೈರಸ್ನಿಂದ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದ್ದು, ಆಂಟಿವೈರಲ್ಗಳಿಂದ ಚಿಕಿತ್ಸೆ ಪಡೆಯಬೇಕೇ ಹೊರತು ಪ್ರತಿಜೀವಕಗಳಿಂದಲ್ಲ. ಮೂರನೆಯದಾಗಿ, ಅವರಿಗೆ ಸೋಂಕಿಗೊಳಗಾದ ವ್ಯಕ್ತಿಯ ವೈದ್ಯಕೀಯ ಇತಿಹಾಸದ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ; ಹಾಗಾಗಿ, ಆ ವ್ಯಕ್ತಿಗೆ ಅಲರ್ಜಿಯುಂಟುಮಾಡುವ ಪ್ರತಿಜೀವಕವನ್ನೇ ಇವರು ಸೂಚಿಸಿದ್ದು, ಮಾರಣಾಂತಿಕ ಸಮಸ್ಯೆ ಎದುರಾಗಬಹುದು. ಹಾಗಾದರೆ, ಜನರು ಹೇಗೆ ಇಂತಹ ಔಷಧಿಕಾರರನ್ನು ನಂಬಿಕೆಗೆ ಅರ್ಹರು ಎಂದು ಭಾವಿಸುತ್ತಾರೆ?

ಭಾರತದಲ್ಲಿನ 'ಸೂಪರ್ ಬಗ್'ಗಳ ಹೆಚ್ಚಳದ ಹಿಂದೆ ಆರೋಗ್ಯ ಕ್ಷೇತ್ರದಲ್ಲಿರುವವರು -- ಅಂದರೆ, ವೈದ್ಯರು, ರೋಗಿಗಳು ಮತ್ತು ಔಷಧಿಕಾರರ ತಪ್ಪು ಗ್ರಹಿಕೆ.

ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಸಂಶೋಧಕರು ವೆಲ್ಲೂರು ಪ್ರದೇಶದಲ್ಲಿ ಜನರು, ಔಷಧಿಕಾರರು ಮತ್ತು ವೈದ್ಯರ ಗ್ರಹಿಕೆಗಳನ್ನು ಅಧ್ಯಯನ ಮಾಡಿ, ಪ್ರತಿಜೀವಕಗಳ ದುರುಪಯೋಗದ ಹಿಂದಿನ ಕಾರಣಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ೨೦೧೩ರಲ್ಲಿ ನಡೆಸಲಾದ ಸಮೂಹ ಚರ್ಚೆ ಆಧಾರಿತ ಗುಣಾತ್ಮಕ ಅಧ್ಯಯನವಾಗಿದೆ. ಜನರ ಆರ್ಥಿಕ ಸ್ಥಿತಿ ಮತ್ತು ವೈದ್ಯರ ಲಭ್ಯತೆಯು, ವೈದ್ಯರನ್ನು ಎಷ್ಟು ಜನ ಭೇಟಿ ಮಾಡುತ್ತಾರೆ ಎಂಬುದರ ಪ್ರಮುಖ ನಿರ್ಣಾಯಕ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. "ವೈದ್ಯರನ್ನು ಕಾಣಲು ನಾವು ಕೆಲಸದಿಂದ ರಜೆ ಪಡೆಯಬೇಕು ಮತ್ತು ಸರತಿ ಸಾಲಲ್ಲಿ ನಿಲ್ಲಬೇಕು. ಅಷ್ಟೇ ಅಲ್ಲದೇ, ಬಹುಶಃ ಔಷಧಿಕಾರರು ಸೂಚಿಸುವ ಔಷಧವನ್ನೇ ವೈದ್ಯರೂ ಸೂಚಿಸುತ್ತಾರೆ. ಹಾಗಾಗಿ, ನಾವು ಅದನ್ನು ತ್ವರಿತವಾಗಿ ಪಡೆಯುವ ಸುಲಭ ವಿಧಾನವನ್ನು ಅನುಸರಿಸಿ, ನೇರವಾಗಿ ಔಷಧಿ ಅಂಗಡಿಗೇ ಹೋಗುತ್ತೇವೆ" ಎಂದು ಸಂಶೋಧನೆಯ ಚರ್ಚೆಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬರು ವಿವರಿಸುತ್ತಾರೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲೂ ಇದಕ್ಕಿಂತಾ ಭಿನ್ನ ಸ್ಥಿತಿಯೇನಿಲ್ಲ; ಈಗಾಗಲೇ ನಿರಾಶಾದಾಯಕ ಸ್ಥಿತಿಯಲ್ಲಿರುವ ಆರೋಗ್ಯ ಸೇವೆಗಳೊಂದಿಗೆ, ಜನರ ಮನಸ್ಥಿತಿಯೂ ಸ್ವ-ಔಷಧೋಪಚಾರವನ್ನೇ ಉತ್ತಮ ಎಂದು ಭಾವಿಸಿದಂತಿದೆ." ಸಾಮಾನ್ಯ ಭೇದಿಗೆ ವಿಶೇಷ ಸ್ಥಳೀಯ ಚಿಕಿತ್ಸೆ ಲಭ್ಯವಿದ್ದು, ನಾವು ಅದನ್ನೇ ನಂಬುತ್ತೇವೆ; ಅಲೋಪಥಿಕ್ ಔಷಧಿಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ" ಎನ್ನುತ್ತಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬರು. ಪ್ರತಿಜೀವಕಗಳ ಮತ್ತು ಪ್ರತಿಜೀವಕಗಳಿಗೆ 'ಸೂಪರ್ ಬಗ್'ಗಳ ಪ್ರತಿರೋಧದ ಬಗ್ಗೆ ಅವರನ್ನು ಕೇಳಿದಾಗ, ಯಾವ ರೋಗಲಕ್ಷಣಗಳನ್ನು ಯಾವ ಪ್ರತಿಜೀವಕವು ಗುಣಪಡಿಸುತ್ತದೆ ಎಂಬುದು ತಿಳಿದಿತ್ತೇ ಹೊರತು ಪ್ರತಿಜೀವಕಗಳಿಗೆ ಹುಟ್ಟಿಕೊಳ್ಳುತ್ತಿರುವ ಪ್ರತಿರೋಧದ ಬಗ್ಗೆ ತಿಳಿದಿರಲಿಲ್ಲ.

ಔಷಧಿಕಾರರು ಮತ್ತು ವೈದ್ಯರೇ ಪ್ರತಿಜೀವಕಗಳ ದುರ್ಬಳಕೆ / ಅತಿಯಾದ ಬಳಕೆಗೆ ಕಾರಣರು ಎನ್ನುತ್ತೀರಾ? ಹೌದು! ಈ ಅಧ್ಯಯನದಲ್ಲಿ ಒಬ್ಬ ವೈದ್ಯರೇ ಇದನ್ನು ಒಪ್ಪಿಕೊಂಡಿದ್ದಾರೆ;  "ನಾವು ಮೊದಲ ದಿನವೇ ಹೆಚ್ಚಿನ ರೋಗ ತನಿಖೆಯನ್ನು ಸೂಚಿಸಿದರೆ, ರೋಗಿಯು ಮತ್ತೆಂದೂ ಹಿಂದಿರುಗಿ ಬರಲಾರರು. ಆದ್ದರಿಂದ, ನಾವು ತಕ್ಷಣವೇ ಪ್ರತಿಜೀವಕಗಳನ್ನು ಕೊಡುತ್ತೇವೆ ಮತ್ತು ಎರಡು ದಿನಗಳ ಕಾಲ ವೀಕ್ಷಿಸುತ್ತೇವೆ. ರೋಗಿಗಳು ಕೇವಲ ರೋಗಲಕ್ಷಣದ ಪರಿಹಾರದ ಬಗ್ಗೆಯಷ್ಟೇ ಒಲವನ್ನು ಹೊಂದಿರುತ್ತಾರೆಯೇ ಹೊರತು, ರೋಗನಿರ್ಣಯದ ಬಗ್ಗೆ ಮಾತ್ರ ಯಾರೂ ಚಿಂತಿಸುವುದಿಲ್ಲ" ಎನ್ನುತ್ತಾರೆ!

ಔಷಧಿ ಕಂಪೆನಿಗಳೂ ಈ ಷಡ್ಯಂತ್ರದ ಒಂದು ಭಾಗ. "ಪ್ರಸಿದ್ಧ ಔಷಧಿ ಕಂಪನಿಗಳು ತಮ್ಮ ಔಷಧಿಗಳನ್ನು ಶಿಫಾರಸು ಮಾಡುವಂತೆ ಆಮಿಷ ಒಡ್ಡುತ್ತವೆ. ನಾವು ಆ ಔಷಧಿಗಳನ್ನು ಹೆಚ್ಚೆಚ್ಚು ಶಿಫಾರಸು ಮಾಡಿದರೆ, ಅವರು ಹವಾನಿಯಂತ್ರಿತ ಕಾರು ಅಥವಾ ಉಚಿತ ಟಿಕೆಟ್ಗಳಂತಹ ಉಡುಗೊರೆಗಳನ್ನು ನೀಡುತ್ತಾರೆ; ಹಾಗಾಗಿ, ನಾವು ಹೊಸ ಪ್ರತಿಜೀವಕಗಳನ್ನು ಸೂಚಿಸಬೇಕಾಗುತ್ತದೆ" ಎಂದು ಮತ್ತೊಬ್ಬ ವೈದ್ಯರು ತಪ್ಪೊಪ್ಪಿಕೊಂಡಿದ್ದಾರೆ.

ಔಷಧಿಕಾರರು ಪ್ರಿಸ್ಕ್ರಿಪ್ಷನ್ ಇಲ್ಲದೆ ಪ್ರತಿಜೀವಕಗಳನ್ನು ಮಾರಾಟ ಮಾಡಲು, ಪ್ರತಿಜೀವಕಗಳನ್ನು ಸೂಚಿಸಲು ಅಥವಾ ಔಷಧಿಗಳನ್ನು ಬದಲಿಸಲು ಅವರದ್ದೇ ಬೇರೆ ರೀತಿಯ ಪ್ರೇರಣೆ ಹೊಂದಿದ್ದಾರೆ. ಈ ಅಧ್ಯಯನದ ಸಲುವಾಗಿ ನಡೆಸಲಾದ ಸಂದರ್ಶನದಲ್ಲಿ, ಒಬ್ಬ ಔಷಧಿಕಾರನು ಒಪ್ಪಿಕೊಂಡಿದ್ದೇನೆಂದರೆ "ವ್ಯವಹಾರವನ್ನು ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ ಹೇಳಿ? ನಾವು ಗ್ರಾಹಕರು ಕೇಳುವ ಯಾವುದೇ ಔಷಧಿಯನ್ನು ಹಿಂದುಮುಂದು ನೋಡದೆ ನೀಡುತ್ತೇವೆ. ಔಷಧಿ ಅಂಗಡಿಗಳ ನಡುವಿನ ಸ್ಪರ್ಧೆ, ಅಂಗಡಿಗಳಿರುವ ಸ್ಥಳ, ಪರವಾನಗಿಯ ಸಮಸ್ಯೆಗಳು - ಹೀಗೆ ಎಲ್ಲವೂ ವಾಣಿಜ್ಯೀಕರಣಗೊಂಡಿವೆ."

ಪ್ರತಿಜೀವಕಗಳ ಬಳಕೆಯ ಬಗ್ಗೆ ವಿಭಿನ್ನ ಗ್ರಹಿಕೆಗಳು, ಅನಿಸಿಕೆಗಳು ಇದ್ದರೂ ಸಹ, ಒಂದು ವ್ಯಾಪಕವಾದ ಸಾಮಾನ್ಯತೆ ಇದೆ; ಅದೇನೆಂದರೆ, ಸರಿಯಾದ ರೋಗನಿರ್ಣಯ ಮತ್ತು ಸಂಪೂರ್ಣ ಗುಣಮುಖತೆ ಮುಂತಾದ ಜೈವಿಕ ಅಂಶಗಳ ಬದಲಿಗೆ ತ್ವರಿತ ಚೇತರಿಕೆ, ರೋಗಿಯ ತೃಪ್ತಿ ಮತ್ತು ವಾಣಿಜ್ಯಿಕ ಪ್ರೋತ್ಸಾಹ ಮುಂತಾದ ಸಾಮಾಜಿಕ ಅಂಶಗಳ ಮೇಲೆ ಪ್ರತಿಜೀವಕಗಳ ಸೂಚಿತವು ಅವಲಂಬಿತವಾಗಿದೆ.

ಭಾರತೀಯ ಮಾರುಕಟ್ಟೆಯು ೧೦,೦೦೦ಕ್ಕಿಂತ ಹೆಚ್ಚು ಪ್ರತಿಜೀವಕಗಳ ಸೂತ್ರೀಕರಣಗಳನ್ನು ಒದಗಿಸುತ್ತದೆ. ಆದರೆ, ಹೆಚ್ಚಿನ ಜನಸಂಖ್ಯೆಯ ಆದ್ಯತೆಯು ಆರೋಗ್ಯದ ಅಗತ್ಯತೆಗಳನ್ನು ಪೂರೈಸುವ ಔಷಧಿಗಳನ್ನು ಒಳಗೊಂಡಿರುವ 'ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ'ಯಲ್ಲಿ, ಕೇವಲ ೨೧ ಪ್ರತಿಜೀವಕಗಳು ಮತ್ತು ಎರಡು ಪ್ರತಿಜೀವಕಗಳ ಸಂಯೋಜನೆ ಮಾತ್ರ ಇವೆ ಎಂದರೆ ಆಶ್ಚರ್ಯವಲ್ಲವೇ? ಇವುಗಳ ನಡುವಿನ ಈ ಅಸಮಾನತೆಯು, ಪ್ರತಿಜೀವಕಗಳ ವ್ಯಾಪಕ ದುರುಪಯೋಗವನ್ನು ಸೂಚಿಸುತ್ತದೆ.

"ನಾವು ಪೂರ್ವಭಾವಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ನಾವು ಹಿಂದಿದ್ದೇವೆ ಮತ್ತು 'ಸೂಪರ್ ಬಗ್' ಬ್ಯಾಕ್ಟೀರಿಯಾ ತಾನು ಬದುಕುಳಿಯುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿವೆ" ಎಂದು ಈ ಅಧ್ಯಯನದ ಪ್ರಮುಖ ಲೇಖಕ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಸುಜಿತ್ ಜೆ. ಚಾಂಡಿ ಎಚ್ಚರಿಸಿದ್ದಾರೆ. "ಪ್ರತಿಜೀವಕ ನಿರೋಧಕ 'ಸೂಪರ್ ಬಗ್'ಗಳ ಈ ಸಮಸ್ಯೆಯು ಒಂದು ಬಹುರೂಪಿ ಸಮಸ್ಯೆಯಾಗಿದ್ದು, ಇದೇ ಕಾರಣದಿಂದ ಪರಿಹಾರವೂ ಸಂಕೀರ್ಣವಾಗಿದೆ; ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಎಲ್ಲಾ ಹಂತಗಳಲ್ಲಿಯೂ ಒಳಹೊಕ್ಕು ಪ್ರಯತ್ನಿಸಬೇಕು ಮತ್ತು ಎಲ್ಲಾ ಪಾಲುದಾರರನ್ನೂ ಒಳಗೊಂಡಿರಬೇಕು. ಈ ಸಮಸ್ಯೆಗೆ ಕಾರಣವಾದ ಕೆಲವು ಅಂಶಗಳು ಬದಲಾಗುವುದು ಕಷ್ಟ, ಆದರೆ ಕೆಲವು ಸುಲಭ ಸರಳ ಸೂತ್ರಗಳು ಇವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ಪಾತ್ರ ಏನೆಂದರೆ ನಾವು ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ, ನೈರ್ಮಲ್ಯದ ಅಭ್ಯಾಸಗಳ ಪಾಲನೆ ಮತ್ತು ಪ್ರತಿಜೀವಕಗಳ ಬಳಕೆಯನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಅವಧಿಗೆ, ಸರಿಯಾದ ಆವರ್ತನದಲ್ಲಿ ಬಳಸುವುದನ್ನು ಉತ್ತೇಜಿಸಬೇಕಾಗಿದೆ" ಎಂದು ಪ್ರೊಫೆಸರ್ ಚಾಂಡಿ ವಿವರಿಸುತ್ತಾರೆ.

ವಿಜ್ಞಾನಿಗಳು, ಪ್ರಸ್ತುತ ಲಭ್ಯವಿರುವ ಪ್ರತಿಜೀವಕಗಳಿಗೆ ಉತ್ತಮ ಪರ್ಯಾಯಗಳನ್ನು ಅಭಿವೃದ್ಧಿಪಡಿಸುವವರೆಗೂ, ಮತ್ತು ಸರ್ಕಾರವು ಅದರ ಬಳಕೆಯ ಮೇಲೆ ನಿಯಂತ್ರಣವನ್ನು ಬಲಪಡಿಸುವವರೆಗೂ, ಪ್ರತಿಜೀವಕಗಳ ನ್ಯಾಯಸಮ್ಮತವಾದ ಬಳಕೆಯನ್ನು ಸಮರ್ಥಿಸುವುದು ನಮ್ಮ ಕೈಯಲ್ಲೇ ಇದೆ; ಇದನ್ನು ನಾವು ಸಾಧ್ಯವಾಗಿಸಬೇಕೆಂದರೆ, ಸರಿಯಾದ ಡೋಸ್, ಸರಿಯಾದ ಅವಧಿ ಮತ್ತು ಸರಿಯಾದ ಆವರ್ತನದಲ್ಲಿ ಪ್ರತಿಜೀವಕಗಳನ್ನು ಸೇವಿಸಿ 'ಸೂಪರ್ ಬಗ್'ಗಳನ್ನು ಇನ್ನಿಲ್ಲವಾಗಿಸುವುದೊಂದೇ ಉಳಿದಿರುವ ಅತ್ಯುತ್ತಮ ದಾರಿ. ಎಷ್ಟೇ ಆದರೂ, ನಾವು ಜವಾಬ್ದಾರಿಯುತ ನಾಗರಿಕರಾಗಿ ಇಷ್ಟೂ ಮಾಡದಿದ್ದರೆ ಹೇಗೆ?

Kannada