ಯುರೇನಿಯಂ ಗಿರಣಿಗಳ ತ್ಯಾಜ್ಯದಿಂದ ಸುರಕ್ಷಿತ ಇಟ್ಟಿಗೆ: ಭಾಭಾ ಅಣುಶಕ್ತಿ ಸಂಶೋದನಾ ಕೇಂದ್ರದ ವಿಜ್ಞಾನಿಗಳ ಶೋಧ

Mumbai
18 Mar 2025
Left: UMT Blocks and ingredients. Right: Uranium ore

ಪ್ರಪಂಚದಾದ್ಯಂತ, ವಿವಿಧ ರಾಷ್ಟ್ರಗಳು, ವಾಯುಗುಣ ಬದಲಾವಣೆಯನ್ನು ಎದುರಿಸಲು, ಸ್ವಚ್ಛ ಇಂಧನ ಮೂಲಗಳಿಗಾಗಿ ಹುಡುಕಾಡುತ್ತಿರುವ ಇಂದಿನ ಸಂದರ್ಭದಲ್ಲಿ, ಪರಮಾಣು ಶಕ್ತಿ ಗಮನ ಸೆಳೆಯುತ್ತಿದೆ. ಹಾಗಿದ್ದರೂ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವಾಗ, ಅತಿ ಕಡಿಮೆ ಹಸಿರು ಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತದೆ ಎಂದು ಹೆಸರಾದ ಪರಮಾಣು ಶಕ್ತಿ ಕೂಡ, ಕೆಲವು ಸವಾಲುಗಳನ್ನು ಒಡ್ಡುವುದುಂಟು.!  ಬಹು ಮುಖ್ಯವಾಗಿ, ಪರಮಾಣು ತ್ಯಾಜ್ಯದ ವಿಲೇವಾರಿಯ ಸಮಸ್ಯೆ, ಎದುರಾಗುತ್ತದೆ. ಹೀಗಾಗಿ, ಪರಮಾಣು ಶಕ್ತಿಯನ್ನು ಬಳಸಿದ ನಂತರ, ಉಳಿಯುವ ಕಸವನ್ನು ವಿಲೇವಾರಿ ಮಾಡುವಂತಹ ಸುಲಭ ಉಪಾಯಗಳನ್ನು, ಎಲ್ಲ ರಾಷ್ಟ್ರಗಳೂ ಹುಡುಕುತ್ತಿವೆ.

ಶಕ್ತಿಗೆ, ಹಾಗೂ ಕಟ್ಟಡ ನಿರ್ಮಾಣದ ವಸ್ತುಗಳಿಗೆ, ಸದಾ ಬೇಡಿಕೆ ಏರುತ್ತಲೇ ಇರುವ ಭಾರತದಲ್ಲಿಯೂ, ಇದು ದೊಡ್ಡ ಸವಾಲೇ!!. ಇದೀಗ, ಮುಂಬಯಿಯ ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ, ಅರ್ಥಾತ್‌ ಬಿ ಎ ಆರ್‌ಸಿಯ ವಿಜ್ಞಾನಿಗಳು, ಇದಕ್ಕಾಗಿ ಅಸಾಧಾರಣ ಐಡಿಯಾವೊಂದನ್ನು ಪರಿಶೀಲಿಸುತ್ತಿದ್ದಾರೆ. ಯುರೇನಿಯಂ ಅದಿರನ್ನು ಗಿರಣಿಯಾಡಿದ ನಂತರ ಉಳಿಯುವ ಗಸಿಯಿಂದಲೇ ಇಟ್ಟಿಗೆಗಳನ್ನು ತಯಾರಿಸಿದರೆ ಹೇಗೆ ಎನ್ನುವುದೇ ಈ ಉಪಾಯ. ಈ ವಿಜ್ಞಾನಿಗಳ ಪ್ರಮುಖ ಉದ್ದೇಶ: ಯುರೇನಿಯಂ ಗಿರಣಿಯಾಡಿದ ನಂತರ ಉಳಿಯುವ, ಕೆಸರಿನ ಗಸಿಯನ್ನು ಸುರಕ್ಷಿತವಾದ ಹಾಗೂ, ಗಟ್ಟಿಯಾದ ಇಟ್ಟಿಗೆಗಳನ್ನಾಗಿ ಮಾಡಿ, ಕಟ್ಟಡ ನಿರ್ಮಾಣದಲ್ಲಿ ಬಳಸುವುದು.

ಯುರೇನಿಯಂ ಗಸಿ, ಅಥವಾ ವಿಜ್ಞಾನಿಗಳು ಯುರೇನಿಯಂ ಮಿಲ್‌ ಟೇಲಿಂಗ್ಸ್‌ ಎಂದು ಕರೆಯುವ, ಈ ವಸ್ತು, ಲೋಹದಿಂದ ಸಮೃದ್ಧವಾದ ಕೆಸರು. ಯುರೇನಿಯಮನ್ನು ಹೆಕ್ಕಿದ ನಂತರ ಉಳಿಯುವ ತ್ಯಾಜ್ಯ. ಜಾಗತಿಕವಾಗಿ, ಈ ಕಸ ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ.. ಪರಿಸರ ಮಾಲಿನ್ಯವಾಗದಂತೆ, ಇದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ, ಇಲ್ಲವೇ ಸಂಗ್ರಹಿಸುವ ಸವಾಲನ್ನು ಒಡ್ಡುತ್ತಿ ದೆ.

ಬಿ ಎ ಆರ್‌ಸಿಯ ವಿಜ್ಞಾನಿಗಳು, ಯುರೇನಿಯಂ ಸಂಸ್ಕರಿಸುವ ಎಡೆಯಿಂದ, ಈ ಗಸಿಯನ್ನು ಸಂಗ್ರಹಿಸಿ ಪ್ರಯೋಗ ಮಾಡಿದ್ದಾರೆ. ಸಿಲಿಕಾನ್‌ ಡಯಾಕ್ಸೈಡು ಹಾಗೂ, ಅಲ್ಯುಮಿನಿಯಂ ಆಕ್ಸೈಡು, ಅಥವಾ ಅಲ್ಯುಮಿನಾ, ಎನ್ನುವ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ಇರುವ  ಗಸಿ, ಹಾಗೂ ಉರಿಬೂದಿ ಮೊದಲಾದ ವಸ್ತುಗಳು ಪ್ರಬಲವಾದ ಕ್ಷಾರವಸ್ತುವಿನೊಂದಿಗೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ರವೆ. ಇದನ್ನು ಜಿಯೊಪಾಲಿಮರೈಸೇಶನ್‌ ಎನ್ನುತ್ತಾರೆ. ಈ ವಸ್ತುಗಳನ್ನು ಮೊದಲು ದ್ರಾವಣವಾಗಿಸುವ ಈ ಕ್ರಿಯೆ, ಅನಂತರ ಅವು ಅಲ್ಯುಮಿನೊಸಿಲಿಕೇಟುಗಳೆಂಬ ಪಾಲಿಮರುಗಳಾಗುವಂತೆ ಮಾಡುತ್ತದೆ. ಇದನ್ನೇ ವಿಜ್ಞಾನಿಗಳು, ಜಿಯೊಪಾಲಿಮರು, ಎನ್ನುತ್ತಾರೆ. ಇದರ ಫಲವಾಗಿ, ಹೊಸದೊಂದು, ಗಟ್ಟಿಯಾದ, ಮೂರು ಆಯಾಮದಲ್ಲಿ ಹರಳುಗಟ್ಟಿದ, ವಸ್ತು ದೊರೆಯುತ್ತದೆ. ಸುಟ್ಟ ಇಟ್ಟಿಗೆ, ಸಿರಾಮಿಕ್‌, ಹಾಗೂ ಗಾಜು, ಈ ರೀತಿಯಲ್ಲಿ ತಯಾರಾದ ವಸ್ತುಗಳು. ಈ ಅಧ್ಯಯನದಲ್ಲಿ ವಿಜ್ಞಾನಿಗಳು, ಯುರೇನಿಯಂ ಗಸಿಯನ್ನು, ಕಲ್ಲಿದ್ದಲಿನ ಉಷ್ಣಸ್ಥಾವರಗಳಿಂದ ಹೊರಬೀಳುವ, ಮತ್ತೊಂದು ಕಸವಾದ ಹಾರುಬೂದಿಯೊಂದಿಗೆ, ಹಾಗೂ, ಕಬ್ಬಿಣದ ಅದಿರನ್ನು ಸಂಸ್ಕರಿಸುವಾಗ ದೊರೆಯುವ, ಮತ್ತೊಂದು ಗಸಿಯೊಂದಿಗೆ ಬೆರೆಸಿ, ಜಿಯೊಪಾಲಿಮರನ್ನು ರೂಪಿಸಿದ್ದಾರೆ.

ಜಿಯೊಪಾಲಿಮರು ಇಟ್ಟಿಗೆಗಳನ್ನು ತಯಾರಿಸಲು ಸಂಶೋಧಕರು ಮೂರು ಬಗೆಯ ಮಿಶ್ರಣಗಳನ್ನು ಬಳಸಿದ್ದಾರೆ. ಪ್ರತಿಯೊಂದು ಮಿಶ್ರಣದಲ್ಲಿಯೂ, ಯುರೇನಿಯಂ ಗಸಿ, ಹಾರುಬೂದಿ ಹಾಗೂ ಕಬ್ಬಿಣದ ಗಸಿಯನ್ನು ಬೇರೆ, ಬೇರೆ ಪ್ರಮಾಣದಲ್ಲಿ ಬೆರೆಸಲಾಗಿತ್ತು. ಇದರೊಟ್ಟಿಗೆ, ಸೋಡಿಯಂ ಹೈಡ್ರಾಕ್ಸೈಡು,  ಹಾಗೂ ಸೋಡಿಯಂ ಸಿಲಿಕೇಟು ದ್ರಾವಣಗಳನ್ನು ಬೆರೆಸಿ, ಈ ಪುಡಿಗಳು ಗಟ್ಟಿಯಾಗುವಂತೆ ಮಾಡಿದರು. ಇವೆಲ್ಲವನ್ನೂ ಬೆರಸುವ ಮೊದಲು, ಗಸಿ, ಹಾರುಬೂದಿ, ಮೊದಲಾದ ಕಚ್ಚಾವಸ್ತುಗಳಲ್ಲಿನ ಕಣಗಳ ಗಾತ್ರ, ಹಾಗೂ ಆಕಾರವನ್ನು ಪರಿಶೀಲಿಸಿದ್ದರು. ಅವು ಒಂದಕ್ಕೊಂದು ಅಂಟಿಕೊಳ್ಳುವಷ್ಟು  ಅಳ್ಳಕವಾಗಿದೆ, ಎಂದು ಖಚಿತಪಡಿಸಿಕೊಂಡಿದ್ದರು.

ಈ ಎಲ್ಲವನ್ನೂ ದಪ್ಪನೆಯ ಪೇಸ್ಟಿನ ರೂಪಕ್ಕೆ ಬೆರೆಸಿ, ಗಟ್ಟಿ ಮಾಡಲು ಅಚ್ಚುಗಳಿಗೆ ಸುರಿದರು. ರಾತ್ರಿಯಿಡೀ ಗಟ್ಟಿಯಾಗಲು ಬಿಟ್ಟ ನಂತರ, ಬೆಳಗ್ಗೆ, ಅರವತ್ತು ಡಿಗ್ರಿ ಉಷ್ಣಾಂಶವಿರುವ ಕುಲುಮೆಯೊಳಗೆ ಇಟ್ಟು,  ಜಿಯೊಪಾಲಿಮರುಗಳಾಗಿಸಿದರು.  ಜಿಯೊಪಾಲಿಮರು ಇಟ್ಟಿಗೆಗಳು ಸಿದ್ಧವಾದ ನಂತರ, ಒಂದು ತಿಂಗಳವರೆಗೂ ಅವನ್ನು ಹದವಾಗಲು ಬಿಟ್ಟರು. ಅನಂತರ ಬಿಎಸ್‌ಐ ಮಾನಕಗಳಿಗೆ ಅನುಗುಣವಾದ ಗುಣಗಳು ಇವೆಯೇ ಎಂದು ಪರೀಕ್ಷಿಸಿದರು. ಮೂರೂ ಮಿಶ್ರಣಗಳೂ ಕೂಡ, ಮೂರು ಪಾಯಿಂಟ್‌ ಐದು ಮೆಗಾಪ್ಯಾಸ್ಕಲ್‌ ಒತ್ತಡವನ್ನು ತಾಳಿಕೊಳ್ಳುವಷ್ಟು ಗಟ್ಟಿಯಾಗಿದ್ದುವು. ಇದು ಬಿಎಸ್‌ಐ ಮಾನಕವು ನಿಗದಿ ಪಡಿಸಿರುವ ಕನಿಷ್ಟ ಧೃಢತೆಯ ಮಿತಿ. ಒಂದು ಮಿಶ್ರಣದ ಒತ್ತಡ ತಾಳಿಕೆಯು ೧೦.೭ ಮೆಗಾಪ್ಯಾಸ್ಕಲು ಇತ್ತು. ಮತ್ತೊಂದರದ್ದು ೧೨ ಹಾಗೂ ಮೂರನೆಯದ್ದರದ್ದು ೧೫.೬ ಮೆಗಾಪ್ಯಾಸ್ಕಲುಗಳು ಇದ್ದುವು. ಇದು,  ಕಟ್ಟಡ ಕಟ್ಟೋಣಕ್ಕೆ ಅವಶ್ಯಕವಾದಷ್ಟು, ಇವು ಗಟ್ಟಿಯಾಗಿವೆ ಎಂದು ತೋರಿಸುತ್ತದೆ. ಅದರಲ್ಲಿರುವ ಅಲ್ಯುಮಿನಾ ಅಂಶದಿಂದಾಗಿ, ಹೆಚ್ಚೆಚ್ಚು ಹಾರುಬೂದಿಯನ್ನು ಬೆರೆಸಿದಾಗ  ಇಟ್ಟಿಗೆಗಳು ಇನ್ನೂ ಗಟ್ಟಿತನವನ್ನು ತೋರಿದುವು

ಯುರೇನಿಯಂ ಗಸಿಯಲ್ಲಿ ,ವಿಕಿರಣಶಾಲಿ ವಸ್ತುಗಳು ಇರಬಹುದಾದ್ದರಿಂದ, ಅದರಲ್ಲಿರುವ ವಿಕಿರಣಶಾಲಿ ಐಸೋಟೋಪುಗಳು, ಹಾಗೂ ರೇಡಾನ್‌ ಅನಿಲದ ಬಗ್ಗೆ, ವಿಜ್ಞಾನಿಗಳು ವಿಶೇಷ ಗಮನ ಹರಿಸಿದರು. ಕಾಲಕಳೆದಂತೆಲ್ಲ, ಎಷ್ಟೆಷ್ಟು ರೇಡಾನ್‌ ಅನಿಲ ಹೊರಸೂಸಿತು ಎಂದು, ಮತ್ತು ಯುರೇನಿಯಂ ೨೩೮, ಹಾಗೂ ರೇಡಾನ್‌ ೨೨೬ರಂತಹ, ವಿಕಿರಣಶಾಲಿ ಧಾತುಗಳ ಪ್ರಮಾಣವನ್ನೂ ಅಳೆದಿದ್ದಾರೆ. ಈ  ಜಿಯೊಪಾಲಿಮರು ಇಟ್ಟಿಗೆಗಳು, ನಿಗದಿಪಡಿಸಿದ ಮಿತಿಗಿಂತಲೂ ಹೆಚ್ಚು ವಿಕಿರಣಗಳನ್ನು ಸೂಸುತ್ತವೆಯೋ ಎಂದು ಗ್ಯಾಮಾರೇ ಸ್ಪೆಕ್ಟ್ರೊಮೀಟರು ಎನ್ನುವ ವಿಶೇಷ ಸಾಧನದಿಂದ ಅಳೆದಿದ್ದಾರೆ.

ಜಿಯೊಪಾಲಿಮರುಗಳಿಂದ ಸೂಸಿದ ರೇಡಾನಿನ ಪ್ರಮಾಣ ಬಹಳ ಕಡಿಮೆ ಇತ್ತು. ಕೆಲವು ಸಂದರ್ಭಗಳಲ್ಲಿ, ಇದು ಕಟ್ಟಡಗಳಲ್ಲಿ ಬಳಸುವ ಸಾಧಾರಣ ಇಟ್ಟಿಗೆ, ಹಾಗೂ ಸಿಮೆಂಟು ಬ್ಲಾಕುಗಳಲ್ಲಿ ಇರುವಷ್ಟೆ ಇತ್ತು. ಇಟ್ಟಿಗೆಗಳಲ್ಲಿ ಇರಬಹುದಾದ ,ವಿಭಿನ್ನ ವಿಕಿರಣಶಾಲಿ ಧಾತುಗಳ ಪ್ರಮಾಣವು,  ಅಂತಾರ್ರಾಷ್ಟ್ರೀಯ ಪರಮಾಣು ಶಕ್ತಿ ಎಜೆನ್ಸಿ, ಐಎಈಏ, ಪ್ರಪಂಚದಾದ್ಯಂತ ನಿಗದಿ ಪಡಿಸಿರುವ ಮಿತಿಗೆ ತಕ್ಕಂತೆ ಇತ್ತು. ಅಷ್ಟೇ ಅಲ್ಲ. ವಿಜ್ಞಾನಿಗಳು ರೇಡಿಯಂ ಸಮಾನ ವಿಕಿರಣ ಚಟುವಟಿಕೆಯನ್ನೂ ಪರಿಗಣಿಸಿದ್ದಾರೆ. ಇದು, ನಿರ್ದಿಷ್ಟ ಕಟ್ಟೋಣಗಳಿಗೆ ತಕ್ಕುದಾದ, ವಿಕಿರಣ ಪ್ರಮಾಣವನ್ನು ಸೂಚಿಸುತ್ತದೆ. ಈ ಎಲ್ಲಾ ಲೆಕ್ಕಾಚಾರಗಳೂ, ಹೊಸ ಇಟ್ಟಿಗೆಗಳನ್ನು ವಸತಿಯೇತರ ಕಟ್ಟಡಗಳು, ರಸ್ತೆಗಳು ಹಾಗೂ ಅಡಿಪಾಯಗಳಿಗೆ ಬಳಸಲು ಯೋಗ್ಯವಾದಷ್ಟು ರೇಡಿಯಂ ಸಮಾನ ವಿಕಿರಣಶೀಲತೆ ಇದೆ ಎಂದು ತಿಳಿದುಬಂದಿದೆ.
ಕಂಪ್ಯೂಟರುಗಳಲ್ಲಿ ಗಣಿತೀಯ ಮಾದರಿಗಳನ್ನು ಬಳಸಿಕೊಂಡು, ಸಂಶೋಧಕರು ಈ ಇಟ್ಟಿಗೆಗಳಿಂದ ಕಟ್ಟಿದ ಕೋಣೆಯ ಪರಿಸರವನ್ನೂ ರೂಪಿಸಿ, ಪರಿಶೀಲಿಸಿದ್ದಾರೆ. ಇವರ ಲೆಕ್ಕಾಚಾರಗಳು, ಕೋಣೆಯೊಳಗಿನ ರೇಡಾನ್‌ ಪ್ರಮಾಣ, ರಾಷ್ಟ್ರೀಯ ಹಾಗೂ ಅಂತಾರ್ರಾಷ್ಟ್ರೀಯ ಮಿತಿಗಳೊಳಗೆ ಇವೆ ,ಎಂದು ತೋರಿಸಿವೆ.

ಯುರೇನಿಯಂ ಗಸಿಗಳಲ್ಲಿ ,ಸಹಜವಾಗಿಯೇ ವಿಕಿರಣಶೀಲವಾಗಿರುವ, ರೇಡಿಯಂ ೨೨೮ ಇರುತ್ತದೆ. ಇದು ಅನಂತರ, ರೇಡಾನ್‌ ೨೨೨ ಎನ್ನುವ ಅನಿಲವಾಗಿ,  ಇಟ್ಟಿಗೆಯಿಂದ ಹೊರಹೊಮ್ಮುತ್ತದೆ. ಆದರೆ ಈ ಬಗೆಯ ಜಿಯೊಪಾಲಿಮರ್‌ ಇಟ್ಟಿಗೆಗಳಲ್ಲಿ, ಬೃಹದಣು ರೂಪುಗೊಳ್ಳುವ ಕ್ರಿಯೆಯಿಂದಾಗಿ, ಈ ಅನಿಲಗಳು ಅಲ್ಲಿಯೇ ಸೆರೆಯಾಗುತ್ತವೆ. ಹೀಗೆ, ಈ ಇಟ್ಟಿಗೆಗಳು, ವಿಕಿರಣಗಳನ್ನು ತಮ್ಮೊಳಗೇ ಉಳಿಸಿಕೊಳ್ಳುತ್ತವೆ, ಎಂದು ಇವರು ತರ್ಕಿಸಿದ್ದಾರೆ. ಕಚ್ಚಾವಸ್ತುಗಳನ್ನು ಸರಿಯಾದ ರೀತಿಯಲ್ಲಿ ಬೆರೆಸಿ, ಹದಗೊಳಿಸುವುದರಿಂದ, ಕಡಿಮೆ ಪ್ರಮಾಣದಲ್ಲಿ ವಿಕಿರಣಗಳು ಸೂಸುವಂತೆ ಮಾಡಬಹುದು, ಎಂದು ನಡೆಸಿದ ರೇಡಾನ್‌  ಅಳತೆಗಳು  ಪತ್ತೆ ಮಾಡಿವೆ. ರಾಸಾಯನಿಕ ಕ್ರಿಯೆಗಳಿಂದ ಉಂಟಾಗುವ ಬಂಧಗಳು, ಹಾಗೂ ವಸ್ತುವಿನ ಸಾಂದ್ರತೆ, ಒಳಗಿರುವ ಅನಿಲ, ಹೊರಚಲಿಸದಂತೆ ತಡೆಯುತ್ತಿರಬೇಕು ಎನ್ನುವುದು, ಇವರ ತರ್ಕ.

ಯುರೇನಿಯಂ ತ್ಯಾಜ್ಯದಿಂದ, ಜಿಯೊಪಾಲಿಮರನ್ನು ರೂಪಿಸುವ ಈ ವಿಧಾನ, ಆಶಾದಾಯಕವೇನೋ ಹೌದು!  ಆದರೆ, ಅದರಿಂದ,  ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ಮಾಡಬೇಕಿದೆ. ಇಂತಹ ಇಟ್ಟಿಗೆಗಳನ್ನು,  ದೀರ್ಘಾವಧಿ ಬಳಸುವುದರಿಂದ ಆಗುವ ಪರಿಣಾಮಗಳ ಬಗ್ಗೆ, ವಿಸ್ತೃತವಾದ ಅಧ್ಯಯನ ಇನ್ನೂ ಆಗಬೇಕಿದ.  ಅನಂತರವಷ್ಟೆ, ಇವನ್ನು ಕಟ್ಟಡಗಳಲ್ಲಿ ಬಳಸಬಹುದು. ಸಂಶೋಧಕರ ಪ್ರಕಾರ, ಇದಕ್ಕಿಂತಲೂ ಮುಖ್ಯವಾದ ಸವಾಲು, ಇನ್ನೊಂದಿದೆ. ಸಾಧಾರಣವಾಗಿ, ಕಟ್ಟಡಗಳಲ್ಲಿ ಬಳಸುವ ವಸ್ತುಗಳಲ್ಲಿನ ವಿಕಿರಣ ಪ್ರಮಾಣವನ್ನು ನಿಯಂತ್ರಿಸಲು,  ಭಾರತದಲ್ಲಿ ನಿರ್ದಿಷ್ಟವಾದ ನಿಯಮಗಳು ರೂಪುಗೊಂಡಿಲ್ಲ. ಇದರಿಂದಾಗಿ, ಇಂತಹ ಇಟ್ಟಿಗೆಗಳನ್ನು ಕಟ್ಟಡಗಳಲ್ಲಿ ಬಳಸಲು ಅನುಮತಿ ಸಿಗಬಹುದೇ, ಎನ್ನುವ ಪ್ರಶ್ನೆಯೂ ಇದೆ.  ಇಂತಹ ಮಾನಕಗಳನ್ನು ರೂಪಿಸುವ ಜರೂರೂ ಇದೆ!!!

ಪ್ರಪಂಚದಾದ್ಯಂತ, ಲಕ್ಷಾಂತರ ಟನ್ನುಗಳಷ್ಟು ಯುರೇನಿಯಂ ಗಸಿ ಸಂಗ್ರಹವಾಗಿದೆ. ಈ ವಿಕಿರಣಶೀಲ ತ್ಯಾಜ್ಯಗಳಿಂದ, ವಿಕಿರಣಗಳು ಹೊರಸೂಸದಂತೆ ಹಿಡಿದಿಟ್ಟುಕೊಳ್ಳಬಲ್ಲ ಜಿಯೊಪಾಲಿಮರು, ಅಥವಾ ಇತರೆ ಕಟ್ಟೋಣದ ವಸ್ತುಗಳನ್ನಾಗಿ ರೂಪಿಸಿ ಬಳಸುವುದರಿಂದ, ದೀರ್ಘಾವಧಿಯಲ್ಲಿ ಇವು, ಪರಿಸರ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು, ಕಡಿಮೆ ಮಾಡಬಹುದು. ಹಾಗಾಗುವುದಕ್ಕೂ ಮುನ್ನ, ಜನರಲ್ಲಿ ಈ ಬಗ್ಗೆ ವಿಶ್ವಾಸ ಮೂಡಬೇಕು! ಇವು, ದೀರ್ಘಕಾಲ ಬಾಳುತ್ತವೆಂದು ಖಚಿತಪಡಿಸಿಕೊಳ್ಳಬೇಕು! ಹಾಗೂ, ವಿಕಿರಣಗಳ ಮಿತಿಯ ಬಗ್ಗೆ ನಿಯಮಗಳನ್ನೂ ರೂಪಿಸಬೇಕು. ಆಮೇಲಷ್ಟೆ, ಇಂತಹ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸಲಾದೀತು!!!


ಯಾಂತ್ರಿಕ ಬುದ್ಧಿಮತ್ತೆಯ ನೆರವಿನಿಂದ, ರೀಸರ್ಚ್‌ ಮ್ಯಾಟರ್ಸ್‌ ಸಿದ್ಧಪಡಿಸಿದ ವರದಿಯನ್ನು, ಜಾಣಸುದ್ದಿ ಅನುವಾದಿಸಿ, ಧ್ವನಿಮುದ್ರಿಸಿದೆ.


 

Kannada