ನೀವು ಎಂದಾದರೂ ಬೇಸಿಗೆಯ ಹಗಲಿನಲ್ಲಿ, ಬಿರುಬಿಸಿಲಿನ ಆಕಾಶವನ್ನು ಬರಿಗಣ್ಣಿನಿಂದ ನಿಟ್ಟಿಸಿದ್ದೀರಾ? ಆಕಾಶದಲ್ಲಿ ನಿಮ್ಮ ದೃಷ್ಟಿ ನೆಟ್ಟಿರುವಾಗ, ಏನೋ ಕಣ್ಣಿನ ಮುಂದೆ ತೇಲಿದಂತೆ ಭಾಸವಾಗಿದ್ದು ಗಮನಿಸಿದ್ದೀರಾ? ಹೀಗೆ ಬೆಳಕನ್ನು ನಿಟ್ಟಿಸಿ ನೋಡುವಾಗ ಕಣ್ಣಿನ ದೃಷ್ಟಿ ಕ್ಷೇತ್ರದಲ್ಲಿ ಏನೋ ಈಜಿದಂತೆ ಎನಿಸುತ್ತದೆ ಅಲ್ಲವೇ? ಇವು ಪಾರದರ್ಶಕವಾದ ಹುಳುಗಳೋ ಅಥವಾ ಯಾವುದೋ ಆತ್ಮವೋ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರಂತೆ. ಅವು ಕಣ್ಣೀರ ಹನಿಗಳೇನೋ ಎಂದು ನೀವು ಅವನ್ನು ಗಮನಿಸಲು ಪ್ರಾರಂಭಿಸಿದಾಗ, ಅವು ಕಣ್ಮರೆಯಾಗಿ, ನೀವು ನಿಮ್ಮ ನೋಟವನ್ನು ಬದಲಾಯಿಸಿದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ. ಇವನ್ನು 'ಫ್ಲೋಟರ್ಸ್' ಅಥವಾ ತೇಲುಕಗಳು ಎನ್ನುತ್ತಾರೆ; ವೈಜ್ಞಾನಿಕ ಸಮುದಾಯವು ಇದನ್ನು 'ಮುಸ್ಕೆ ವೋಲಿಟಾಂಟ್ಸ್' ಎನ್ನುತ್ತದೆ; ಲ್ಯಾಟಿನ್ ಭಾಷೆಯಲ್ಲಿ 'ಹಾರಾಡುವ ನೊಣಗಳು' ಎಂದು ಇದರ ಅರ್ಥ.
ಹಾರಾಡುವ ನೊಣಗಳು ಎಂದು ಕರೆಸಿಕೊಂಡರೂ ಈ ತೇಲುಕಗಳು ನಿಜವಾದ ಕೀಟಗಳಲ್ಲ; ವಾಸ್ತವವಾಗಿ, ಅವು ಯಾವುದೇ ಬಗೆಯ ಬಾಹ್ಯ ವಸ್ತುಗಳೂ ಅಲ್ಲ; ಬದಲಿಗೆ, ಅವು ನಮ್ಮ ಕಣ್ಣಗುಡ್ಡೆಯೊಳಗೆ ಕಂಡುಬರುವ ಕಣಗಳ ನೆರಳುಗಳು ಅಷ್ಟೇ. ಈ ತೇಲುಕಗಳು, ಕಣ್ಣೊಳಗಿನ ಕೆಲಬಗೆಯ ಅಂಗಾಂಶಗಳು, ಕೆಂಪು ರಕ್ತ ಕಣಗಳು ಅಥವಾ ಕೊಲಾಜೆನ್ ಎಂಬ ಪ್ರೋಟೀನ್ ನ ತುಣುಕುಗಳಾಗಿರುತ್ತವೆ. ಕಣ್ಣಗುಡ್ಡೆಯೊಳಗಿನ ಅಕ್ಷಿಪಟಲ ಮತ್ತು ಮಸೂರದ ನಡುವೆ ಕಂಡುಬರುವ ಪಾರದರ್ಶಕ ಬಣ್ಣರಹಿತ ಜೆಲ್ 'ವಿಟ್ರಿಯಸ್ ಹ್ಯುಮರ್'ನ ಒಳಗೆ, ಈ ಕೊಲಾಜೆನ್ ಎಂಬ ಪ್ರೋಟೀನ್ ಇರುತ್ತದೆ.
ಈ ತೇಲುಕಗಳು 'ವಿಟ್ರಿಯಸ್ ಹ್ಯುಮರ್'ನ ಒಳಗೆ ತೇಲುತ್ತಿರುತ್ತವೆ ಮತ್ತು ನಮ್ಮ ಕಣ್ಣಿನ ಚಲನೆಗಳಿಗೆ ಅನುಗುಣವಾಗಿ ಚಲಿಸುತ್ತವೆ. ನಾವು ಒಂದೆಡೆಯಿಂದ ಮತ್ತೊಂದೆಡೆ ನಮ್ಮ ದೃಷ್ಟಿಯನ್ನು ಹೊರಳಿಸಿದಾಗ, ಅವು ತಮ್ಮ ಆಕಾರವನ್ನು ಬದಲಾಯಿಸಿಕೊಳ್ಳುತ್ತಾ ಪುಟಿದು, ಕಾಲಕಾಲಕ್ಕೆ ಗೋಚರಿಸುತ್ತವೆ. ನಾವು ಅವುಗಳ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ; ಏಕೆಂದರೆ ಅವು ನಮ್ಮ ಕಣ್ಣಿನ ಚಲನೆಯನ್ನು ಅನುಸರಿಸಿ, ನಾವು ನೋಡುವ ದಿಕ್ಕಿನ ಕಡೆಗೇ ತಿರುಗುತ್ತವೆ.
ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಇವನ್ನು ಗುರುತಿಸಲಾಗದು; ಆದರೆ ಅವು ರೆಟಿನಾದ ಹತ್ತಿರದಲ್ಲಿದ್ದಾಗ ಹೆಚ್ಚು ಸುಲಭವಾಗಿ ಗೋಚರಿಸುತ್ತವೆ. ತೇಲುಕಗಳು, ತಮ್ಮ ಹೆಸರಿಗೆ ವಿರುದ್ಧವಾಗಿ, ಕಣ್ಣುಗುಡ್ಡೆಯ ಕೆಳಭಾಗಕ್ಕೆ ಮುಳುಗುತ್ತವೆ. ಆದ್ದರಿಂದ, ನಾವು ಬೆಳಕಿನ ಆಗರವಾದ ಆಕಾಶವನ್ನು ನೋಡಲು ನಮ್ಮ ತಲೆಯನ್ನು ಮೇಲ್ಮುಖವಾಗಿ ತಿರುಗಿಸಿದಾಗ, ಇವು ಕೆಳಕ್ಕೆ ಚಲಿಸುವಂತೆ ಗೋಚರಿಸುತ್ತದೆ.
ಈ ತೇಲುಕಗಳಿಗೆ ದೊರೆತಿರುವ ಸುಲೀನ ಸ್ಥಾನವು, ಅವು ಕಣ್ಣುಗುಡ್ಡೆಯ ಹಿಂಭಾಗದಲ್ಲಿ ಕೇಂದ್ರೀಕೃತಗೊಳ್ಳಲು ಅನುವು ಮಾಡಿಕೊಡುತ್ತದೆ. ಇದು 'ಹಳದಿ ಬಿಂದು' ಅಥವಾ 'ಮ್ಯಾಕುಲಾ'ದೊಂದಿಗೆ ಸಹಘಟಿಸುತ್ತದೆ; ಈ 'ಹಳದಿ ಬಿಂದುವು' ಹೆಚ್ಚಿನ ಸ್ಪಷ್ಟತೆಯೊಂದಿಗೆ ನಮ್ಮ ಸುತ್ತಲಿನ ವಸ್ತು ವಿಚಾರಗಳನ್ನು ನೋಡಲು ನಮಗೆ ಸಹಕಾರಿ. ಇಂತಹಾ ಹಳದಿ ಬಿಂದುವಿನ ಎದುರಿನಿಂದ ಈ ತೇಲುಕವು ಮತ್ತೊಂದೆಡೆ ಚಲಿಸುವ ತನಕ, ತಾತ್ಕಾಲಿಕವಾಗಿ ದೃಷ್ಟಿಯು ಮಸುಕುಗೊಂಡಂತೆ ಎನಿಸಿ, ನಂತರ ಸ್ಪಷ್ಟಗೊಳ್ಳುತ್ತದೆ. ಹಳದಿ ಬಿಂದುವಿನ ಬಳಿಯೇ ಈ ತೇಲುಕಗಳು ಸುಳಿದಾಡುವುದರಿಂದ, ಸುಲಭವಾಗಿ ಬೆಳಕನ್ನು ಹೀರಿಕೊಂಡು, ವಕ್ರೀಭವನಗೊಳಿಸುತ್ತವೆ.
ಖಾಲಿ ಕಂಪ್ಯೂಟರ್ ಪರದೆಗಳು ಅಥವಾ ಬಿರುಬೆಳಕಿನ ಆಗಸದಂತಹಾ ವಿನ್ಯಾಸವಿಲ್ಲದ ಮತ್ತು ಸಮಾನವಾಗಿ ಬೆಳಕನ್ನುಹೊಮ್ಮಿಸುವ ಯಾವುದೇ ಪರದೆ, ಈ ತೇಲುಕಗಳನ್ನು ವೀಕ್ಷಿಸಲು ಸೂಕ್ತ ಮಾಧ್ಯಮ ಎನಿಸುತ್ತವೆ. ಹರಡಿದ ಬೆಳಕನ್ನು ಹೊರಸೂಸುವ ಟ್ಯೂಬ್ಲೈಟ್ಗಿಂತಾ, ತಲೆಯ ಮೇಲೆ ಹೊಳೆಯುವ ಒಂದು ಪ್ರಖರ ಬಲ್ಬ್, ತೀಕ್ಷ್ಣವಾದ ಮತ್ತು ಹೆಚ್ಚು ವಿಶಿಷ್ಟವಾದ ನೆರಳುಗಳ ರಚನೆಗೆ ಕಾರಣವಾಗುತ್ತದೆ. ಪ್ರಕಾಶಮಾನವಾದ ದಿನಗಳಲ್ಲಿ ಕಣ್ಣು ಮುಚ್ಚಿದಾಗಲೂ ನೆರಳುಗಳ ಮೂಲಕ ತೇಲುಕಗಳನ್ನು ಗೋಚರಿಸುವಂತೆ ಮಾಡಲು, ಕಣ್ಣುರೆಪ್ಪೆಗಳ ಮೇಲೆ ಬೀಳುವ ಬೆಳಕೇ ಸಾಕು ಎಂಬುದನ್ನು ನಾವು ಅನುಭವಿಸಿರುವುದು ಸಾಧ್ಯ.
ಹುಟ್ಟಿನಿಂದಲೇ ನಮ್ಮ ಕಣ್ಣೊಳಗೆ ಇರುವ ತೇಲುಕಗಳು, ನಮ್ಮ ಜೀವಿತಾವಧಿಯ ಉದ್ದಕ್ಕೂ ಕಂಡುಬರುತ್ತವೆ. ಆದರೆ ನಮ್ಮ ಜೀವಿತಾವಧಿಯಲ್ಲಿ ನಡುನಡುವೆ, ಕಣ್ಣುಗುಡ್ಡೆಯ ಸವೆಯುವಿಕೆ ಇನ್ನಿತರ ಕಾರಣಗಳಿಗೆ 'ವಿಟ್ರಿಯಸ್ ಹ್ಯುಮರ್'ನೊಳಗೆ ಒಟ್ಟುಗೂಡುವ ಸತ್ತ ಜೀವಕೊಶಗಳ ರಾಶಿಯು, ತಾವೇ ತೇಲುಕಗಳಂತೆ ವರ್ತಿಸಿದರೂ, ಕ್ರಮೇಣ ಕೆಲವೇ ವಾರಗಳಲ್ಲಿ ಕಣ್ಮರೆಯಾಗುತ್ತವೆ. ಈಗ ಈ ತೇಲುಕಗಳ ಹಿನ್ನೆಲೆ ನಿಮಗೆ ತಿಳಿದಿದೆಯಾದ್ದರಿಂದ, ಮುಂದೆಂದಾದರೂ ನಿಮ್ಮ ದೃಷ್ಟಿ ಕ್ಷೇತ್ರದಲ್ಲಿ ತೇಲುಕಗಳು ಚಲಿಸಿದ್ದು ಕಂಡರೆ, ಹೆದರದೆ ಅದರ ಸೊಗಸನ್ನು ಅನುಭವಿಸಿ. ಏಕೆಂದರೆ; ಅವು, ತಾವು ಅಡಗಿರುವ ಅರೆಘನದ್ರಾವಕ ಜೆಲ್ಲಿಯಲ್ಲಿ ಪುಟಿದು ಆಡುತ್ತಿರುತ್ತವಷ್ಟೇ!