ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಕೊಡತಿಕೀಟಗಳ ಭೂಪ್ರದಕ್ಷಿಣೆ!

Read time: 1 min 20 January, 2018 - 09:00

'ಕೀಟ ವಲಸೆ' ಎಂಬ ಪದವು ಬಣ್ಣಬಣ್ಣದ ಚಿಟ್ಟೆಗಳ ಪ್ರಸಿದ್ಧವಾದ ವಲಸೆಯನ್ನು ನೆನಪಿಸುತ್ತದೆ; ಸಾವಿರಾರು ಮೊನಾರ್ಕ್ ಚಿಟ್ಟೆಗಳು ಮೆಕ್ಸಿಕೊದಿಂದ ದಕ್ಷಿಣ ಕೆನಡಾಕ್ಕೆ ತೆರಳುವ ಅಮೋಘ ವಲಸೆಯು ಜಗತ್ಪ್ರಸಿದ್ಧ.  ಇಂತಹದ್ದೇ ಒಂದು ಕೀಟ ವಲಸೆ, ಆದರೆ ಚಿಟ್ಟೆಗಳಷ್ಟು ವರ್ಣಮಯವಲ್ಲದ್ದು, ಹಿಂದೂ ಮಹಾಸಾಗರದ ಉದ್ದಗಲಕ್ಕೂ ನಡೆಯುವುದು ಕಂಡುಬಂದಿದೆ. ಡ್ರಾಗನ್ ಫ್ಲೈ ಅಥವಾ ಕೊಡತಿ ಕೀಟಗಳ ಈ ವಲಸೆಯು ಅದ್ಭುತವಾಗಿದ್ದು,  ದಾಖಲಾದ ಅತೀ ಹೆಚ್ಚು ದೂರದ ಕೀಟವಲಸೆ ಎಂದು ನಂಬಲಾಗಿದೆ.

ಪ್ರತಿ ವರ್ಷ ಮುಂಗಾರು ಮಳೆ ಆರಂಭವಾಗುವುದರೊಂದಿಗೆ, ಭಾರತದ ಬಹುತೇಕ ಭಾಗಗಳಲ್ಲಿ ಕೊಡತಿಕೀಟಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಈ ಹಗುರವಾದ ಚುರುಕುಬುದ್ಧಿಯ ಹಾರುವ ಕೀಟಗಳು ಸಾಮಾನ್ಯವಾಗಿ ನೀರಿನ ಗುಂಡಿಗಳು, ಕೆಸರಿನ ಹೊಂಡಗಳ ಬಳಿ ಸುತ್ತುವರಿಯುತ್ತವೆ ಮತ್ತು ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿ ತಮ್ಮ ಜೀವನ ಚಕ್ರ ಪೂರ್ಣಗೊಳಿಸಿಕೊಳ್ಳುತ್ತವೆ. ಆದರೆ ಇತ್ತೀಚಿನವರೆಗೂ ಈ ಹುಳಗಳು ಅಲ್ಲಿಗೆ ಎಲ್ಲಿಂದ ಬಂದವು ಮತ್ತು ಮುಂಗಾರು ಮುಗಿದ ನಂತರ ಅಲ್ಲಿಂದ ಎಲ್ಲಿಗೆ ಹೋದವು ಎಂಬುದು ಅಸ್ಪಷ್ಟವಾಗಿತ್ತು.

ಜೀವವಿಜ್ಞಾನಿ ಡಾ. ಚಾರ್ಲ್ಸ್ ಆಂಡರ್ಸನ್, ಮಾಲ್ಡೀವ್ಸ್ ದ್ವೀಪದಲ್ಲಿ ಕೊಡತಿಕೀಟಗಳನ್ನು ಕಂಡಾಗ ಆಶ್ಚರ್ಯ ಚಕಿತರಾದರು; ಅವುಗಳ ಜೀವನಚಕ್ರವನ್ನು ನಿರ್ವಹಿಸಲು ಸಿಹಿನೀರಿನ ಹೊಂಡಗಳೇ ಇಲ್ಲದ ಇಲ್ಲಿಗೆ ಏಕೆ ಹಾಗೂ ಹೇಗೆ ಬಂದವು ಎಂದು ಅಚ್ಚರಿಗೊಳ್ಳುತ್ತಾ ಅವುಗಳನ್ನು ಕೂಲಂಕುಶವಾಗಿ ಗಮನಿಸಲು ಪ್ರಾರಂಭಿಸಿದರು. ಪಶ್ಚಿಮ ಭಾರತೀಯ ಕರಾವಳಿ, ಮಾಲ್ಡೀವ್ಸ್, ಸೇಶೆಲ್ಸ್ ಮತ್ತು ಆಫ್ರಿಕಾದ ಭಾಗಗಳಲ್ಲಿ ಕೊಡತಿ ಕೀಟಗಳ ಆಗಮನದ ಬಗ್ಗೆ ಅವರು ಮಾಹಿತಿಯನ್ನು ಪಡೆದರು. ಈ ಅವಲೋಕನಕ್ಕಾಗಿ ೧೪ ವರ್ಷಗಳ ದತ್ತಾಂಶ ಮತ್ತು ಹವಾಮಾನ ಮಾಹಿತಿಯನ್ನು ಸಂಗ್ರಹಿಸಲಾಯಿತು. 

ಡಾ. ಚಾರ್ಲ್ಸ್ ಆಂಡರ್ಸನ್ ಅವರ ಸಂಶೋಧನೆಗಳು, ಊಹಿಸಲೂ ಸಾಧ್ಯವಿಲ್ಲದ್ದನ್ನು ಖಚಿತ ಪಡಿಸಿದವು; ಅದೇನೆಂದರೆ, ಗ್ಲೋಬ್ ಸ್ಕಿಮ್ಮರ್ ಎಂದೇ ಪ್ರಸಿದ್ಧವಾದ 'ಪಾಂತಲಾ ಫ್ಲಾವೆಸೆನ್ಸ್' ಎಂಬ ಕೊಡತಿಕೀಟವು ಅಕ್ಷರಶಃ ಭೂಮಿಯುದ್ದಗಲಕ್ಕೂ ಹಾರುತ್ತವೇನೋ ಎಂಬಂತೆ ೧೩೦೦೦ ಕಿಲೋಮೀಟರ್ಗಳಷ್ಟು ದೂರ ವಲಸೆ ಹೋಗುತ್ತವೆಯಂತೆ! ಮುಂಗಾರು ಮಾರುತಗಳ ಸಹಾಯವನ್ನೂ ಪಡೆದು ಅವು ಭಾರತೀಯ ಉಪಖಂಡದಿಂದ ಆಫ್ರಿಕಾದ ಪೂರ್ವ ಕರಾವಳಿಗೆ ಮತ್ತು ಮರಳಿ ಭಾರತಕ್ಕೆ ಪ್ರಯಾಣಿಸುತ್ತವೆ ಎಂದು ಧೃಡಪಟ್ಟಿದೆ. ಹಿಂದಿರುಗುವಾಗ  ದಾರಿಯಲ್ಲಿ, ಮುಂಗಾರು ಮಳೆಯು ಹುಟ್ಟುಹಾಕಿದ ಸ್ಥಳೀಯ ಸಿಹಿನೀರಿನ ಅಥವಾ ಕೆಸರಿನ ಗುಂಡಿಗಳನ್ನು ತಮ್ಮ ಸಂತಾನೋತ್ಪತ್ತಿಗಾಗಿ ಬಳಸುತ್ತವೆ. 

ಹೀಗೇ, ಕೀಟ ಪ್ರಪಂಚವು ಯಾವಾಗಲೂ ನಮ್ಮನ್ನು ಅಚ್ಚರಿಗೊಳಿಸುವ ಆಕರ್ಷಕ ಸಂಗತಿಗಳನ್ನು ಒಳಗೊಂಡಿರುತ್ತದೆ; ಅಂತಹ ಅನನ್ಯ ಅಚ್ಚರಿದಾಯಕ ವಿಚಾರಗಳಲ್ಲಿ ಇದೂ ಒಂದಷ್ಟೇ!