ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

Read time: 1 min
Bengaluru
28 Apr 2022
‘ದ್ವಿಪಾತ್ರ’ದಲ್ಲಿ ಮೈಕ್ರೋ ಆರ್‌ಎನ್‌ಎ

ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಹಾನಿಕಾರಕ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾದ ವ್ಯವಸ್ಥೆಯನ್ನು ಹೊಂದಿದೆ. ಈಗಾಗಲೇ ತಿಳಿದಿರುವಂತೆ ಪ್ರತಿರಕ್ಷಣಾ ವ್ಯವಸ್ಥೆಗಳು ಎರಡು ವಿಧಗಳಾಗಿವೆ: ಜನ್ಮಜಾತ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆ. ಜನ್ಮಜಾತ ಪ್ರತಿರಕ್ಷಣಾ ವ್ಯವಸ್ಥೆಯು ಸಸ್ಯಗಳು, ಶಿಲೀಂಧ್ರಗಳು, ಕೀಟಗಳು ಮತ್ತು ಪ್ರಾಚೀನ ಬಹುಕೋಶೀಯ ಜೀವಿಗಳಲ್ಲಿ ಕಂಡುಬರುವ ಪ್ರಬಲ ಮತ್ತು ಹಳೆಯ ವಿಕಸನೀಯ ರಕ್ಷಣಾ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ತಿಳಿದಿರುವ ಸಂದರ್ಭಗಳು ಮತ್ತು ಪ್ರಚೋದನೆಗಳ ವ್ಯಾಪಕ ಶ್ರೇಣಿಯ ಕೆಲವು ಪ್ರಮಾಣಿತ ಪ್ರತಿಕ್ರಿಯೆಗಳನ್ನು ಒದಗಿಸುತ್ತದೆ.

ಆದರೆ, ಇದನ್ನು ಸಕ್ರಿಯಗೊಳಿಸಲು ಒಂದು ಪ್ರಚೋದಕದ ಅವಶ್ಯಕತೆ ಇದೆ. ವೈರಸ್‌ಗಳು ನಮ್ಮ ದೇಹವನ್ನು ಆಕ್ರಮಿಸಿದಾಗ, ನಮ್ಮ ದೇಹವು ಇಂಟರ್‌ಫೆರಾನ್‌ಗಳು ಮತ್ತು ಸೈಟೊಕಿನ್‌ಗಳು ಎಂಬ ರಾಸಾಯನಿಕಗಳನ್ನು ಉತ್ಪಾದಿಸುವ ಅನೇಕ ಜೀನ್‌ಗಳೊಂದಿಗೆ ಹೋರಾಡುತ್ತದೆ. ಆದರೆ ಈ ಜೀನ್‌ಗಳನ್ನು ಯಾವುದು ನಿಯಂತ್ರಿಸುತ್ತದೆ ಮತ್ತು ಅವುಗಳನ್ನು ಯಾವಾಗ ಸಕ್ರಿಯಗೊಳಿಸಬೇಕು ಎಂಬುದು ತಿಳಿಯುವುದೇ ಯಕ್ಷಪ್ರಶ್ನೆಯಾಗಿತ್ತು. 

ಆಕ್ರಮಿಸಿದ ಹಾನಿಕಾರಕ ವೈರಸ್ ವಿರುದ್ಧ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸುವ ಪ್ರಚೋದಕವಾಗಿ ಸೂಕ್ತವಾಗಿರುವ ಒಂದು ಅಣುವನ್ನು ಈಗ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಪ್ರಚೋದಕ miRNA-30e ಎಂಬ ಸಣ್ಣ ರೈಬೋನ್ಯೂಕ್ಲಿಯಿಕ್ ಆಮ್ಲ (RNA) ಅಣು ಎಂದು ಕಂಡುಬಂದಿದೆ. ಮೈಕ್ರೋ ಆರ್‌ಎನ್‌ಎಗಳು ಸಾಮಾನ್ಯ ಆರ್‌ಎನ್‌ಎಗಳಿಗಿಂತ ಚಿಕ್ಕದಾಗಿರುತ್ತವೆ. ಇವು ಡಿಎನ್‌ಎಯಿಂದ ಸಂದೇಶಗಳನ್ನು ಸಾಗಿಸುವ ಅಣುಗಳು. ಮೈಕ್ರೋ ಆರ್‌ಎನ್‌ಎಯನ್ನು ಗುರಿಯಾಗಿಸುವುದು ಸಾಮಾನ್ಯವಾಗಿ ಲೂಪಸ್ ಎಂದು ಕರೆಯಲ್ಪಡುವ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್‌ (SLE) ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಗೆ ಚಿಕಿತ್ಸೆಯ ಆಯ್ಕೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಸೋಂಕುಗಳಿಗೆ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಜೀನ್‌ಗಳು ಯಾವಾಗಲೂ ಸಕ್ರಿಯವಾಗಿರಬೇಕಾಗಿಲ್ಲ. ಆದರೆ ಸಾಂಕ್ರಾಮಿಕ ವೈರಸ್ ದಾಳಿ ಮಾಡಿದಾಗ ಮಾತ್ರ ಸಕ್ರಿಯವಾಗಿರಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ನಿಗದಿತವಾಗಿ ನಡೆಯಲು ಮತ್ತು ಉತ್ತಮಗೊಳಿಸಲು ನಕಾರಾತ್ಮಕ ನಿಯಂತ್ರಕಗಳು ಎಂದು ಕರೆಯಲ್ಪಡುವ ಮತ್ತೊಂದು ಜೀನ್‌ಗಳು ಕಾರ್ಯರೂಪಕ್ಕೆ ಬರುತ್ತವೆ. ಆದರೂ, ವೈರಸ್ ಆಕ್ರಮಣ ಮಾಡಿದಾಗ ಈ ನಕಾರಾತ್ಮಕ ನಿಯಂತ್ರಕಗಳನ್ನು ನಿಗ್ರಹಿಸಬೇಕಾಗುತ್ತದೆ, ಹೀಗಾಗಿ ಪ್ರತಿರಕ್ಷಣಾ ಜೀನ್‌ಗಳು ಅಪೇಕ್ಷಿತ ರೀತಿಯ ಇಂಟರ್‌ಫೆರಾನ್‌ಗಳು ಮತ್ತು ಸೈಟೊಕಿನ್‌ಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ.

ಹಾಗಾದರೆ ನಿಯಂತ್ರಕರನ್ನು ಯಾವುದು ನಿಯಂತ್ರಿಸುತ್ತದೆ?

ಮೈಕ್ರೊ ಆರ್‌ಎನ್‌ಎ-30e (miRNA-30e) ಎಂಬ ಸಣ್ಣ ಆರ್‌ಎನ್‌ಎ ಅಣುವು ಮಾಸ್ಟರ್ ರೆಗ್ಯುಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಮೈಆರ್‌ಎನ್‌ಎಗಳ ಸಾಮಾನ್ಯ ಕೆಲಸವೆಂದರೆ ಇತರ ಜೀನ್‌ಗಳ ಚಟುವಟಿಕೆಯನ್ನು ನಿಯಂತ್ರಿಸುವುದು.

ಮೈಕ್ರೋ ಆರ್‌ಎನ್‌ಎಗಳು ಇತರ ಜೀನ್‌ಗಳ ಚಟುವಟಿಕೆಯನ್ನು ನಿಯಂತ್ರಿಸುವ ಒಂದು ವಿಶಿಷ್ಟ ವಿಧಾನವನ್ನು ಹೊಂದಿವೆ. ಸಾಮಾನ್ಯವಾಗಿ, ಜೀನ್‌ಗಳನ್ನು ಡಿಎನ್‌ಎಯಿಂದ ಮೆಸೆಂಜರ್ ಆರ್‌ಎನ್‌ಎ(ಎಂಆರ್‌ಎನ್‌ಎ)ಗೆ ನಕಲಿಸುವ ಮೂಲಕ ವ್ಯಕ್ತಪಡಿಸಲಾಗುತ್ತದೆ; ನಂತರ ಅದನ್ನು ಪ್ರೊಟೀನ್‌ಗಳಾಗಿ ಪರಿವರ್ತಿಸಲಾಗುತ್ತದೆ. ಜೀನ್‌ಗಳನ್ನು ಮೆಸೆಂಜರ್ ಆರ್‌ಎನ್‌ಎಗೆ ನಕಲಿಸಿದ ನಂತರ ಮೈಕ್ರೋ ಆರ್‌ಎನ್‌ಎಗಳು ಸಕ್ರಿಯಗೊಳ್ಳುತ್ತವೆ ಮತ್ತು ನಂತರ ಎಂಆರ್‌ಎನ್‌ಎ ಜೊತೆಗೆ ಸೇರುತ್ತವೆ (ಕಾಂಪ್ಲಿಮೆಂಟರಿ ಬೈಂಡಿಂಗ್ ಅಥವಾ ಕಾಂಪ್ಲಿಮೆಂಟರಿ ಬೇಸ್ ಪೇರಿಂಗ್ ಎಂಬ ಪ್ರಕ್ರಿಯೆಯಿಂದ). ಉದ್ದೇಶಿತ ಎಂಆರ್‌ಎನ್‌ಎಯನ್ನು ಇತರ ಕಿಣ್ವಗಳಿಂದ ನಂತರ ನಾಶಪಡಿಸಲಾಗುತ್ತದೆ ಅಥವಾ ಪ್ರೊಟೀನ್‌ಗಳನ್ನು ಉತ್ಪಾದಿಸುವುದರಿಂದ ನಿಗ್ರಹಿಸಲಾಗುತ್ತದೆ.

miRNA-30e ವೈರಸ್ ಸೋಂಕಿಗೆ ಒಳಗಾದಾಗ ಪ್ರತಿರಕ್ಷಣಾ ಪ್ರತಿಕ್ರಿಯೆ ಜೀನ್‌ಗಳನ್ನು ನಿಯಂತ್ರಿಸುತ್ತದೆ. ವೈರಸ್ ಸೋಂಕಿತ ಕೋಶಗಳನ್ನು ನೋಡುವಾಗ ಸಂಶೋಧಕರು miRNA-30e ಪಾತ್ರದ ಬಗ್ಗೆ ಮೊದಲ ಸುಳಿವು ಪಡೆದರು. ಸೋಂಕಿತ ಜೀವಕೋಶಗಳು ಈ ಮೈಕ್ರೋ ಆರ್‌ಎನ್‌ಎ ಅಣುಗಳೊಂದಿಗೆ ಕೂಡಿರುವುದು ಕಂಡುಬಂದಿದೆ. ಮೈಕ್ರೋಆರ್ಎನ್ಎಗಳ ಮಟ್ಟವನ್ನು ಗಮನಿಸಿದಾಗ, ಸಾಮಾನ್ಯ ಜೀವಕೋಶಗಳಿಗೆ ಹೋಲಿಸಿದರೆ ಸೋಂಕಿತ ಜೀವಕೋಶಗಳಲ್ಲಿ miRNA-30e ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.

ಸಂಶೋಧಕರು ಸಾಮಾನ್ಯವಾಗಿ ಡಿಎನ್‌ಎ, ಆರ್‌ಎನ್‌ಎ ಮತ್ತು ಮೈಕ್ರೋ ಆರ್‌ಎನ್‌ಎ ಅನುಕ್ರಮಗಳಿಗಾಗಿ ಡೇಟಾಬೇಸ್ ಅನ್ನು ನಿರ್ವಹಿಸುತ್ತಾರೆ. ಅಲ್ಲದೆ, ವೈರಸ್-ಸೋಂಕಿತ ಜೀವಕೋಶಗಳಲ್ಲಿ ವ್ಯಕ್ತಪಡಿಸಿದ ಜೀನ್ ಅನುಕ್ರಮಗಳಿಗಾಗಿ ವಿಶೇಷ ಡೇಟಾಬೇಸ್ ಅನ್ನು ನಿರ್ವಹಿಸಲಾಗುತ್ತದೆ. ಸಂಶೋಧಕರು ವಿವಿಧ ವೈರಸ್ ಸೋಂಕಿತ ಕೋಶಗಳ ಅಂತಹ ಡೇಟಾಬೇಸ್ ಅನ್ನು ವಿಶ್ಲೇಷಿಸಿದಾಗ, miRNA-30e ಯಾವಾಗಲೂ ವೈರಲ್ ಸೋಂಕಿತ ಜೀವಕೋಶಗಳಲ್ಲಿ ಕಂಡುಬಂದಿರುವುದು ಗಮನಿಸಿದ್ದಾರೆ.

ವೈರಲ್ ಸೋಂಕಿನ ಪ್ರತಿಕ್ರಿಯೆಯಲ್ಲಿ ಪ್ರಮುಖವಾದ miRNA-30e ಎಂದು ತಿಳಿದ ನಂತರ, ಸಂಶೋಧಕರು ಈ ಮೈಕ್ರೋ ಆರ್‌ಎನ್‌ಎಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಕಲಿಸಲು ಅದಕ್ಕೆ ಸೂಕ್ತ ಜೀವಕೋಶಗಳನ್ನು ಬೆಳೆಸಲು ಸಿದ್ಧಗೊಳಿಸಿದರು. ನಂತರ ಅವರು ವಿವಿಧ ರೀತಿಯ ವೈರಸ್‌ಗಳೊಂದಿಗೆ ಬೆಳೆಸಿದ ಜೀವಕೋಶಗಳಿಗೆ ಸೋಂಕು ತಗುಲಿಸಿದರು.

ಸೋಂಕಿಲ್ಲದ ಜೀವಕೋಶಗಳಿಗೆ ಹೋಲಿಸಿದರೆ miRNA-30e ನಿಂದ ಸೋಂಕಿತ ಜೀವಕೋಶಗಳಲ್ಲಿ ವೈರಲ್ ಲೋಡ್ ಕಡಿಮೆಯಾಗಿರುವುದು ಕಂಡುಬಂದಿದೆ. ಹಾಗಾಗಿ ವಿವಿಧ ವೈರಸ್ ಸೋಂಕುಗಳ ಮೇಲೆ miRNA-30e ನ ಪರಿಣಾಮವಾಗಿ ಜೀವಕೋಶಗಳಲ್ಲಿ ಹೆಚ್ಚಿದ ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಕಂಡುಬಂದಿದೆ. ಆದ್ದರಿಂದ miRNA-30e ವೈರಲ್ ಸೋಂಕಿಗೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಗಾಗಿ ವೈರಸ್ ಸೋಂಕಿನ ವಿರುದ್ಧ ಒಂದು ಒಳ್ಳೆಯ ಚಿಕಿತ್ಸಕ ಎಂದು ಪರಿಗಣಿಸಬಹುದು ಎಂದು ಸಂಶೋಧಕರು ತಿಳಿಸುತ್ತಾರೆ. ಇದರಿಂದ ಪ್ರೇರೇಪಿಸಿ ಸಂಶೋಧಕರ ತಂಡವು ಅಣುವಿನ ನಿಖರವಾದ ಪಾತ್ರವನ್ನು ಮತ್ತಷ್ಟು ತನಿಖೆ ಮಾಡಿದ್ದಾರೆ.

miRNA-30e ಪ್ರತಿರಕ್ಷಣಾ ಜೀನ್‌ಗಳ ಋಣಾತ್ಮಕ ನಿಯಂತ್ರಕಗಳನ್ನು ನಿಗ್ರಹಿಸಲು ಕಂಡುಬಂದಿದೆ, ಇದರಿಂದಾಗಿ ಪ್ರತಿರಕ್ಷಣಾ ಜೀನ್‌ಗಳು ವೈರಸ್ ಸೋಂಕಿನ ವಿರುದ್ಧ ಹೋರಾಡಲು ಇಂಟರ್ಫೆರಾನ್‌ಗಳು ಮತ್ತು ಸೈಟೊಕಿನ್‌ಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಸರ್ಕಸ್‌ನಲ್ಲಿ ರಿಂಗ್‌ಮಾಸ್ಟರ್‌ನಂತೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಾರಂಭಿಸಲು ಮತ್ತು ನಿಯಂತ್ರಿಸಲು ಈ ಮೈಕ್ರೊಆರ್‌ಎನ್‌ಎ ಪ್ರಮುಖ ಪಾತ್ರವಹಿಸಿಸುತ್ತದೆ.

miRNA-30e ಉತ್ಪಾದನೆ ಮತ್ತು ಚಟುವಟಿಕೆಯನ್ನು ಪರಿಶೀಲಿಸದೆ ಹೋದರೆ ಪ್ರತಿರಕ್ಷಣಾ ಪ್ರಕ್ರಿಯೆಯಲ್ಲಿ ಏರುಪೇರು ಆಗಬಹುದು. miRNAಯ ದೀರ್ಘಕಾಲದ ಉತ್ಪಾದನೆಯು ಪ್ರತಿರಕ್ಷಣಾ ಜೀನ್‌ಗಳು ಸಾರ್ವಕಾಲಿಕ ಸಕ್ರಿಯವಾಗಿರುವ ಸ್ಥಿತಿಗೆ ಕಾರಣವಾಗಬಹುದು. ಇಂತಹ ಸ್ಥಿತಿಯು ಪ್ರತಿರಕ್ಷಣಾಜೀನ್‌ಗಳು ದೇಹದಲ್ಲಿನ ಆರೋಗ್ಯಕರ ಅಂಗಾಂಶಗಳ ಮೇಲೆ ಆಕ್ರಮಣ ಮಾಡುವುದರಿಂದ ಸ್ವಯಂ ನಿರೋಧಕ ಕಾಯಿಲೆಗಳಿಗೆ ಕಾರಣವಾಗಬಹುದು.

ಇದನ್ನು ಇನ್ನಷ್ಟು ಪರೀಕ್ಷಿಸಲು ಸಂಶೋಧಕರು ರೋಗ-ಪ್ರೇರಿತ ಇಲಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ಇದಕ್ಕೆಂದೇ ಸ್ವಯಂ ನಿರೋಧಕ ಕಾಯಿಲೆಯುಳ್ಳ ಇಲಿಯ ಮೇಲೆ ಮತ್ತು ಮಾನವರೋಗಿಗಳಲ್ಲಿ ಪ್ರಯೋಗಿಸಿದ್ದಾರೆ. ಇಲಿಗಳು ಮತ್ತು ಮಾನವರೋಗಿಗಳ ಜೀವಕೋಶಗಳಲ್ಲಿ miRNA-30e ಯ ಅಧಿಕ ಉತ್ಪಾದನೆಯಾಗಿರುವುದು ಕಂಡುಬಂದಿದೆ. ಆದ್ದರಿಂದ, miRNA-30e ನಕಾರಾತ್ಮಕ ನಿಯಂತ್ರಕಗಳನ್ನು ಪ್ರತ್ಯೇಕಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದರ ಜೊತೆ ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳ ಸಂದರ್ಭದಲ್ಲಿ ಜೀವಕೋಶಗಳಲ್ಲಿನ ಅಣುವಿನ ಮಟ್ಟಗಳು ನಿರ್ಣಾಯಕವಾಗಿವೆ.

ಸಂಶೋಧಕರು miRNA-30e ಯ ರಾಸಾಯನಿಕ ಅಥವಾ ಸಂಶ್ಲೇಷಿತ ಪ್ರತಿಬಂಧಕ ‘ಆಂಟಗೋಮಿರ್’ ಎಂಬ ಪ್ರತಿಬಂಧಕವನ್ನು ಸೂಚಿಸಿದ್ದಾರೆ. ಇದು ಲೂಪಸ್‌ಗೆ ಸಂಭಾವ್ಯ ರೋಗನಿರ್ಣಯ ಸಾಮರ್ಥ್ಯವನ್ನು ಹೊಂದಿದೆ. ಸಂಶೋಧಕರು ರೋಗಗ್ರಸ್ತ ಇಲಿಗೆ ಆಂಟಗೋಮಿರ್ ಅನ್ನು ಚುಚ್ಚಿದಾಗ, ಇದು miRNA-30e ಸಮೃದ್ಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ, ಇದರಿಂದಾಗಿ ಪ್ರತಿರಕ್ಷಣಾ ಜೀನ್‌ಗಳ ಅತಿಯಾದ ಚಟುವಟಿಕೆಯನ್ನು ನಿಯಂತ್ರಿಸಿದೆ. ಹಾಗಾಗಿ ಸ್ವಯಂ ನಿರೋಧಕ ಕಾಯಿಲೆಯ ರೋಗನಿರ್ಣಯದಲ್ಲಿ miRNA-30e ಪ್ರಾಮುಖ್ಯವನ್ನು ಸ್ಪಷ್ಟೀಕರಿಸುತ್ತದೆ.

ವೈರಲ್ ಸೋಂಕುಗಳು ಮತ್ತು ಕೆಲವು ಸ್ವಯಂ ನಿರೋಧಕ ಕಾಯಿಲೆಗಳನ್ನು ಎದುರಿಸಲು miRNA-30e ಒಂದು ಪಾತ್ರ ಚಿಕಿತ್ಸಕವಾಗಿ, ಇನ್ನೊಂದು ಪಾತ್ರ ಪೂರ್ವಸೂಚಕವಾಗಿ ಕೆಲಸ ಮಾಡಬಲ್ಲದು.

ಸೂಚನೆ: ಇದರ ಮೊದಲ ಆವೃತ್ತಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. - ಸಂಪಾದಕರು.