ಗೆದ್ದಲು ಅಂದರೆ ಸಾಮಾನ್ಯವಾಗಿ ಎಲ್ಲರೂ ಪೀಠೋಪಕರಣ, ಬಾಗಿಲು ಕಿಟಕಿಗಳನ್ನು ಹಾಳುಗೆಡವುವ ಕೀಟ ಎಂದುಕೊಳ್ಳಬಹುದೇನೋ. ಆದರೆ, ಕೆಲವು ಬಗೆಯ ಗೆದ್ದಲುಗಳಿಗೆ ಸಿಗಬೇಕಾದ ಮೆಚ್ಚುಗೆ ಸಿಕ್ಕಿಲ್ಲ ಎಂಬುದು ಸತ್ಯ. ಏಕೆ ಗೊತ್ತೇ? ಅವು ಭೂಮಿಯ ಮೇಲಿನ ಮೊದಲ 'ರೈತರು' ಎಂಬುದು ಸಂಶೋಧನೆಯೊಂದರಿಂದ ಕಂಡುಬಂದಿದೆ; ಕೆಲವು ಬಗೆಯ ಗೆದ್ದಲುಗಳು, ತಮ್ಮದೇ ಆದ ಆಹಾರವನ್ನು ಬೆಳೆಯುತ್ತವೆಯಂತೆ! ಅವುಗಳ ತೋಟಗಳು ನಮ್ಮ ತೋಟಗಳಂತೆ ಇರುವುದಿಲ್ಲ ನಿಜ; ಆದರೆ ಆಹಾರಕ್ಕಾಗಿ ತಮ್ಮ ಗೂಡುಗಳಲ್ಲಿ ವಿವಿಧ ಬಗೆಯ ಶಿಲೀಂಧ್ರಗಳನ್ನು ಬೆಳೆಯುತ್ತವೆ. ಪ್ರತಿಯಾಗಿ, ಆ ಶಿಲೀಂಧ್ರಗಳ ಬೆಳವಣಿಗೆಗೆ ಸಹಾಯವಾಗಲೆಂದೇ ಹಲವು ಪದಾರ್ಥಗಳನ್ನು ಪೂರೈಕೆ ಮಾಡುತ್ತಾ ಪರಸ್ಪರ ಸಂಬಂಧವನ್ನು ಸುಲಲಿತಾಗಿ ನಿರ್ವಹಿಸುತ್ತವೆ.
ಆದರೆ ನಮ್ಮ ಕೃಷಿಯಂತೆಯೇ ಗೆದ್ದಲುಗಳು ಮಾಡುವ ಕೃಷಿಯಲ್ಲೂ ಕಳೆಗಳ ಕಾಟ ತಪ್ಪಿದ್ದಲ್ಲ. ಹಾಗಾದರೆ, ಗೆದ್ದಲುಗಳು ಈ ಕಳೆಗಳ ಸಮಸ್ಯೆಯಿಂದ ಹೇಗೆ ಮುಕ್ತಿ ಪಡೆಯುತ್ತವೆ? ನಮ್ಮಂತೆ ಕೀಟನಾಶಕಗಳ ಬಳಕೆ ಅಲ್ಲೂ ಇದೆಯೇ ಎಂದು ಹುಬ್ಬೇರಿಸುತ್ತೀರಾ? ಇಂತಹಾ ಸವಾಲುಗಳ ಬೆನ್ನಟ್ಟಿ ಹೊರಟವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಮತ್ತು ಫ್ರಾನ್ಸ್ ದೇಶದ 'ಎಕೊಲೆ ನ್ಯಾಶನಲೆ ಸುಪಿಯೆರೆರ್ ಡಿ ಚಿಮೆ ಡೆ ಮಾಂಟ್ಪೆಲ್ಲಿಯರ್'ನ ಸಂಶೋಧಕರು. 'ಜರ್ನಲ್ ಆಫ್ ಕೆಮಿಕಲ್ ಇಕಾಲಜಿ' ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಇವರ ಹೊಸ ಸಂಶೋಧನೆಯ ಪ್ರಕಾರ, ಕೃಷಿಕ ಗೆದ್ದಲುಗಳು, ತಾವು ಆಹಾರವಾಗಿ ಬಳಕೆ ಮಾಡಲು ಸೂಕ್ತವಾದ ಶಿಲೀಂಧ್ರಗಳು ಮತ್ತು ಅನಗತ್ಯ ಕಳೆ/ಅಪಾಯಕಾರಿ ಶಿಲೀಂಧ್ರಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸ ಗುರುತಿಸಬಲ್ಲವು. ಹೀಗೆ ವ್ಯತ್ಯಾಸ ಗುರುತಿಸುವುದು ಹೇಗೆ ಗೊತ್ತೇ? ಆ ಶಿಲೀಂಧ್ರಗಳ ವಾಸನೆಯನ್ನು ಆಘ್ರಾಣಿಸುವುದರ ಮೂಲಕವಂತೆ!
ಈ ಸಂಶೋಧನೆಯ ಪ್ರಕಾರ, ಸಂಶೋಧಕರು 'ಓಡಾಂಟೊಟೆರ್ಮಸ್ ಒಬೆಸಸ್' ಎಂಬ ಗೆದ್ದಲು ಪ್ರಭೇದದ ಮೇಲೆ ಅಧ್ಯಯನ ನಡೆಸಿದರು; ಈ ಗೆದ್ದಲನ್ನು, ಎರಡು ರೀತಿಯ ಶಿಲೀಂಧ್ರಗಳನ್ನು ಹೊಂದಿರುವ ಜೀವಕೋಶ ಪೂರಕ ಕೃಷಿಕೆಯೊಳಗೆ ಪರಿಚಯಿಸಿದರು. ಅಂದರೆ ಸೂಕ್ಷ್ಮಾಣುಜೀವಿಗಳನ್ನು ಬೆಳೆಸಲು ಬಳಸುವ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮಾಧ್ಯಮದಲ್ಲಿ 'ಟರ್ಮಿಟೊಮೈಸಸ್' ಮತ್ತು'ಸುಡೊಕ್ಸಿಲೈರಿಯಾ' ಎಂಬ ಎರಡು ಶಿಲೀಂಧ್ರಗಳನ್ನು ಬೆಳೆಸಿ, ಅಲ್ಲಿ ಈ ಗೆದ್ದಲನ್ನು ಇರಿಸಿದರು. ಇಲ್ಲಿ ಬಳಸಲಾದ 'ಟರ್ಮಿಟೊಮೈಸಸ್' ಎಂಬ ಶಿಲೀಂಧ್ರವು ಕೃಷಿಕ ಗೆದ್ದಲುಗಳು ಸಾಮಾನ್ಯವಾಗಿ ಆಹಾರಕ್ಕೆ ಬೆಳೆಸುವ ಶಿಲೀಂಧ್ರವಾಗಿದ್ದು, 'ಸುಡೊಕ್ಸಿಲೈರಿಯಾ' ಎಂಬುದು ಕಳೆ ಶಿಲೀಂಧ್ರವಾಗಿದೆ; ಈ 'ಕೃಷಿಕೆ'ಯೊಳಗೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಗೆದ್ದಲುಗಳು, 'ಕೃಷಿಕೆ'ಯೊಳಗೆ ಪೋಷಕಾಂಶ ನೀಡಲು ಬಳಸಲಾದ 'ಆಗಾರ್' ಮಾಧ್ಯಮವನ್ನು ಅಗೆಯಲು ಪ್ರಾರಂಭಿಸಿದವು. 'ಅಗಾರ್'ಅನ್ನು ಅಗೆದು ಮೊಗೆದು ಒಂದೆಡೆ ಪೇರಿಸಿ 'ಬೋಲಸ್' ಎಂದು ಕರೆಯಲ್ಪಡುವ ರಾಶಿ ಸೃಷ್ಟಿಸಿದವು; ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ರೆನೀ ಬೊರ್ಜಸ್ ಅವರ ಪ್ರಕಾರ, ಈ ಗೆದ್ದಲುಗಳು ಮಣ್ಣಿನ ಮಾಧ್ಯಮವನ್ನೂ ಇದೇ ರೀತಿ ಬಳಸುತ್ತವೆ ಮತ್ತು 'ಬೋಲಸ್' ರಾಶಿಯನ್ನು ತಮಗೆ ಬೇಡದ ಕಳೆ ಶಿಲೀಂಧ್ರಗಳ ಮೇಲೆ ಹೆಚ್ಚೆಚ್ಚು ಪೇರಿಸಿ, ಅವುಗಳನ್ನು ಹೂತುಹಾಕುತ್ತವೆ. ಇಲ್ಲೂ ಸಂಶೋಧಕರು ಗಮನಿಸಿದ ಪ್ರಕಾರ, ಕಳೆ ಶಿಲೀಂಧ್ರವಾದ 'ಸುಡೊಕ್ಸಿಲೈರಿಯಾ' ಮೇಲೆ ಹೆಚ್ಚೆಚ್ಚು 'ಅಗಾರ್'ನ ರಾಶಿ ಪೇರಿಸಿ ಹೂತು ಹಾಕುವ ಪ್ರಯತ್ನ ಮಾಡಿದವು ಮತ್ತು 'ಟರ್ಮಿಟೊಮೈಸಸ್' ಶಿಲೀಂಧ್ರದ ಮೇಲೆ ಕನಿಷ್ಠ ಪ್ರಮಾಣದ 'ಬೋಲಾಸ್' ಪೇರಿಸಿದವು.
ಈ ನಿಟ್ಟಿನಲ್ಲಿ ಹೆಚ್ಚಿನ ತಿಳುವಳಿಕೆ ಪಡೆಯುವ ಸಲುವಾಗಿ, ಸಂಶೋಧಕರು ಈ ಕೃಷಿಕ ಗೆದ್ದಲುಗಳಿಗೆ ಹೆಚ್ಚಿನ ಸವಾಲನ್ನು ಒಡ್ಡಿದರು; ಪೂರ್ತಿ ಕತ್ತಲೆಯ ಪರಿಸರದಲ್ಲಿ ಶಿಲೀಂಧ್ರಗಳೆರಡಕ್ಕೂ ಭೌತಿಕ ಪ್ರವೇಶವನ್ನು ನಿರ್ಬಂಧಿಸಿ, ಪರೀಕ್ಷೆ ನಡೆಸಿದರು. ಗೆದ್ದಲು ಗೂಡಿನ ಒಳಾಂಗಣವನ್ನು ಅನುಕರಿಸಲು ಈ ವಾತಾವರಣ ಅವಶ್ಯಕವಾಗಿತ್ತು. ಈಗ ಗೆದ್ದಲುಗಳಿಗೆ ಶಿಲೀಂಧ್ರಗಳು ಕಾಣುವುದಿಲ್ಲವಾದ್ದರಿಂದ ಇದು ಕೇವಲ ಘ್ರಾಣ ಪರೀಕ್ಷೆಯಾಗಿತ್ತು; ಆಗ ಉತ್ಸಾಹೀ ಸಂಶೋಧಕರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಅಚ್ಚರಿದಾಯಕ ಫಲಿತಾಂಶ ಹೊರಬಿತ್ತು; ಕೇವಲ ವಾಸನೆಯ ಆಧಾರದ ಮೇಲೆ ಗೆದ್ದಲುಗಳು ಎರಡೂ ಶಿಲೀಂಧ್ರಗಳ ನಡುವೆ ವ್ಯತ್ಯಾಸ ಗುರುತಿಸಿ, ಕಳೆ ಶಿಲೀಂಧ್ರವನ್ನು ಹೆಚ್ಚು ಆಳಕ್ಕೆ ಹೂತು ಹಾಕುವ ತಮ್ಮ ಎಂದಿನ ಕಾರ್ಯವನ್ನು ಮುಂದುವರೆಸಿದ್ದವು!
ಹಾಗಾದರೆ, ಈ ಶಿಲೀಂಧ್ರಗಳ ವಾಸನೆಯ ನಡುವೆ ರಾಸಾಯನಿಕವಾಗಿ ನಿಜವಾಗಲೂ ವ್ಯತ್ಯಾಸವಿದೆಯೇ ಎಂದು ತಿಳಿಯಲು ತಮ್ಮ ಅಧ್ಯಯನವನ್ನು ಆ ದಿಕ್ಕಿನೆಡೆ ತಿರುಗಿಸಿದರು; 'ಸೂಡೊಕ್ಸಿಲೈರಿಯಾ' ಮತ್ತು 'ಟರ್ಮಿಟಮೈಸೆಸ್'ನ ವಾಸನೆಯ ಪ್ರೊಫೈಲ್ಗಳನ್ನು ಹೋಲಿಕೆ ಮಾಡಿದಾಗ 'ಅರಿಸ್ಟಾಲೀನ್' ಮತ್ತು 'ವೈರಿಡಿಫ್ಲೋರಲ್'ನಂತಹ 'ಸೆಸ್ಕ್ವಿಟರ್ಪೆನ್' ಸಂಯುಕ್ತಗಳು ವಿಶೇಷವಾಗಿ ಕಳೆ ಶಿಲೀಂಧ್ರದಲ್ಲಿ ಮಾತ್ರ ಇದ್ದದ್ದು ಕಂಡುಬಂದಿದೆ ಮತ್ತು ವಾಸನೆಯ ವ್ಯತ್ಯಾಸಕ್ಕೆ ಕಾರಣ ಇವೇ ರಾಸಾಯನಿಕಗಳು ಎಂದು ಖಾತ್ರಿಯಾಗಿದೆ.
ಮತ್ತೊಂದು ಪ್ರಯೋಗದಲ್ಲಿ, ಸಂಶೋಧಕರು 'ಸೂಡೋಕ್ಸಿಲ್ಯಾರಿಯಾ' ಮತ್ತು ಒಂದು ಖಾಲಿ ಪ್ಲಗ್ಗನ್ನು ಬಳಸುತ್ತಾರೆ. ಅಂದರೆ, ಇಲ್ಲಿ ಕಳೆ ಶಿಲೀಂಧ್ರದ ಜೊತೆಗೆ ಆಹಾರ ಬೆಳೆ ಶಿಲೀಂಧ್ರವನ್ನು ಬಳಸಲಾಗಿಲ್ಲ; ಆಗಲೂ ಕಳೆ ಶಿಲೀಂಧ್ರವನ್ನು ಇನ್ನಿಲ್ಲವಾಗಿಸುವ ಸಲುವಾಗಿ, ಅವುಗಳನ್ನು ಸಮಾಧಿ ಮಾಡುವ ಪ್ರಕ್ರಿಯೆಯನ್ನು ಗೆದ್ದಲುಗಳು ಬಿಡಲಿಲ್ಲ.
ಆದರೂ, ತಮಗೆ ಬೇಡವಾದ ಕಳೆ ಶಿಲೀಂಧ್ರಗಳ ಮೇಲೆ 'ಬೋಲಸ್' ಅಥವಾ ಮಣ್ಣನ್ನು ಪೇರಿಸುವ ಗೆದ್ದಲುಗಳು, ತಮಗೆ ಬೇಕಾದ ಆಹಾರ ಬೆಳೆ ಶಿಲೀಂಧ್ರಗಳ ಮೇಲೆ ಮಣ್ಣನ್ನು ಅಥವಾ 'ಬೋಲಸ್'ಅನ್ನು ಪೇರಿಸುವ ಅವಶ್ಯಕತೆ ಏನಿದೆ? ಅವುಗಳನ್ನುಇರುವ ಹಾಗೆಯೇ ಬೆಳೆಯಲು ಬಿಡಬಹುದಲ್ಲ, ಇದರ ಹಿಂದಿನ ಕಾರಣವೇನು ಎಂದು ಯೋಚಿಸಿದ ಸಂಶೋಧಕರು, ಅಧ್ಯಯನದ ನಂತರ ಕಂಡುಕೊಂಡ ಸತ್ಯ ಮತ್ತಷ್ಟು ಅಚ್ಚರಿದಾಯಕ. ಕೃಷಿಕ ಗೆದ್ದಲುಗಳು, ಆಹಾರ ಬೆಳೆ ಶಿಲೀಂಧ್ರಗಳ ಮೇಲೆ ಮಣ್ಣು ಅಥವಾ 'ಬೋಲಸ್'ಅನ್ನು ಪೇರಿಸುವಾಗ ಜೊತೆಯಲ್ಲೇ ಕಳೆ ಶಿಲೀಂಧ್ರಗಳಿಂದ ಇವುಗಳನ್ನು ಕಾಪಾಡಲು ಬೇಕಾದ ಔಷಧಿಯುಕ್ತ ಲಾಲಾರಸವನ್ನೂ ಸ್ರವಿಸುತ್ತವೆಯಂತೆ! ಹಾಗಾಗಿ ಕಳೆ ಶಿಲೀಂಧ್ರಗಳಿಂದ ಆಗಬಹುದಾದ ಅಪಾಯವನ್ನು ತಪ್ಪಿಸುವ ಕ್ರಮ ಇದು ಎಂದು ಕಂಡುಬಂದಿದೆ
ಯಾವುದೇ ಬಗೆಯ ವ್ಯವಸಾಯದಲ್ಲಿ ಕೀಟನಾಶಕಗಳ ವಿವೇಚನಾರಹಿತ ಬಳಕೆ ಸಾರ್ವತ್ರಿಕ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಹುಡುಕಲು ನಾವು, ಕಳೆಗಳನ್ನು ನಿಯಂತ್ರಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ಈ ಕೃಷಿಕ ಗೆದ್ದಲುಗಳಿಂದ ಹೊಳಹುಗಳನ್ನು ಪಡೆಯಬಹುದೇನೋ!