“ದೇವರೇ ಬಂದರೂ ಬೆಂಗಳೂರಿನ ಟ್ರಾಫಿಕನ್ನು ಸರಿಪಡಿಸಲಾಗದು.” 

ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಉವಾಚ ಇದು. ಬೆಂಗಳೂರಿನ ಸಂಚಾರ ವ್ಯವಸ್ಥೆ ತರುವ ಸಂಕಟ ಹೊಸತೇನಲ್ಲ. ನಗರದ ರಸ್ತೆಗಳ ಸಾಮರ್ಥ್ಯವನ್ನೂ ಮೀರಿ ಬೃಹತ್ತಾಗಿ ಬೆಳೆದಿರುವ ವಾಹನ ಗಂಳ ಸಂಖ್ಯೆಯಿಂದಾಗಿ, ನಗರದಲ್ಲಿ ಆಗಾಗ್ಗೆ, ಅಲ್ಲಲ್ಲಿ ವಾಹನ ದಟ್ಟಣೆ ನಿರ್ವಹಿಸಲಾಗದಷ್ಟು ದಟ್ಟವಾಗುವುದುಂಟು.

ಇದೀಗ ವೆಲ್ಲೂರು ತಂತ್ರಜ್ಞಾನ ಸಂಸ್ಥೆಯ ಸಂಶೋಧಕರ ತಂಡವೊಂದು ಫೋನುಗಳಲ್ಲಿ ಜಿಪಿಎಸ್‌ ಬಳಸುವಂತಹದ್ದೇ ತಂತ್ರಾಂಶಗಳನ್ನು ಬಳಸಿಕೊಂಡು, ಸಂಚಾರ ವ್ಯವಸ್ಥೆ ಸುಗಮವಾಗುವಂತೆ ಬಸ್ಸುಗಳ ಹಾದಿಯನ್ನು ಬದಲಿಸಲು ಯೋಜಿಸುತ್ತಿದೆ. ಗಣಿತವನ್ನು ಬಳಸಿಕೊಂಡು ಬೆಂಗಳೂರಿನಂತಹ ನಗರಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಹೇಗೆಂದು ಇವರ ಹೊಸ ಅಧ್ಯಯನವು ಶೋಧಿಸಿದೆ. ಇದು ಇದೇ ಬಗೆಯ ಸಂಚಾರದ ಅವ್ಯವಸ್ಥೆಯನ್ನು ಎದುರಿಸುತ್ತಿರುವ ಇತರೆ ನಗರಗಳಿಗೂ ಕೂಡ ಸಂಚಾರವನ್ನು ಸುಗಮಗೊಳಿಸುವ ಉಪಾಯವನ್ನು ಒದಗಿಸಬಹುದು. ಈ ಹೊಸ ವಿಧಾನವು ಇದೀಗ ಎರಡು ನಿಲ್ದಾಣಗಳ ನಡುವೆ ಹೋಗಿ ಬರುವ ಬಸ್ಸುಗಳ ಮಾರ್ಗವನ್ನು ವರ್ತುಲಾಕಾರದ ಮಾರ್ಗವನ್ನಾಗಿ ಪರಿವರ್ತಿಸಬಹುದೇ ಎಂದು ಅನ್ವೇಷಿಸಿದೆ. ಇದು ವಾಹನ ಸಂಚಾರವನ್ನು ಎಲ್ಲೆಡೆ ಸಮನಾಗಿ ವಿತರಿಸಿ, ವಾಹನ ದಟ್ಟಣೆಯನ್ನು ಕುಗ್ಗಿಸುತ್ತದೆ.

ಇದನ್ನು ರೂಪಿಸಲು ಈ ಸಂಶೋಧಕರು ಬೆಂಗಳೂರಿನಲ್ಲಿ ಅತಿ ದಟ್ಟಣೆಯ ಮಾರ್ಗವೆಂದು ಕುಖ್ಯಾತಿ ಪಡೆದಿರುವ ಜೆಪಿನಗರ ಹಾಗೂ ಹೆಬ್ಬಾಳು ನಡುವಿನ ಮಾರ್ಗವನ್ನು ಆಯ್ದುಕೊಂಡರು. ಈ ಮಾರ್ಗದಲ್ಲಿನ ಸಂಚಾರದಲ್ಲಿ ಹಲವು ಘಟ್ಟಗಳಿವೆ. ಮಾರ್ಗದಲ್ಲಿ ಬರುವ ಚೌಕಗಳು ಹಾಗೂ ಕೂಡುರಸ್ತೆಗಳನ್ನು ಗ್ರಾಫ್‌ ರೂಪದಲ್ಲಿ ಪರಿವರ್ತಿಸಿದ ನಂತರ, ಇದನ್ನು ಹ್ಯಾಮಿಲ್ಟನ್‌ ಸರ್ಕೀಟು ಆಲ್ಗೋರಿದಂ ಎನ್ನುವ ಗಣಿತ ಸೂತ್ರದ ಮೂಲಕ ವಿಶ್ಲೇಷಿಸಿದರು. ಇದು ನಿರ್ದಿಷ್ಟ ಗುಣಗಳಿರುವ ಮಾರ್ಗಗಳನ್ನು ಗುರುತಿಸಲು ನೆರವಾಯಿತು. ಹ್ಯಾಮಿಲ್ಟನ್‌ ಸರ್ಕೀಟು ಆಲ್ಗೋರಿದಂ ಎನ್ನುವ ಸೂತ್ರವು ಮಾರ್ಗವೊಂದರಲ್ಲಿ ಇರುವ ಪ್ರತಿಯೊಂದು ಪ್ರಮುಖ ಸ್ಥಾನವನ್ನೂ ಮುಟ್ಟುವಂತೆ ವೃತ್ತಾಕಾರದ ಹಾದಿಯನ್ನು ಗುರುತಿಸುವ ಚತುರ ವಿಧಾನ. ಈ ಸಂದರ್ಭದಲ್ಲಿ ಅದು ವಾಹನವು ಸಂಚಾರ ಆರಂಭಿಸಿದ ಸ್ಥಾನವನ್ನು ಮರಳಿ ತಲುಪುವ ಮುನ್ನ ಹಾದಿಯಲ್ಲಿ ದೊರೆಯುವ ಪ್ರತಿಯೊಂದು ಕೂಡುರಸ್ತೆಯನ್ನೂ ಒಮ್ಮೆ ಮಾತ್ರ ಮುಟ್ಟುವಂತೆ ಗುರುತಿಸಿತು.

ಸಂಶೋಧಕರು ಮೊದಲಿಗೆ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯಿಂದ ಮಾಹಿತಿಯನ್ನು ಪಡೆದರು. ಜೆಪಿ ನಗರ ಹಾಗೂ ಹೆಬ್ಬಾಳಿನ ನಡುವೆ ಚಲಿಸುವ ಬಸ್ಸುಗಳ ಸಂಚಾರದ ಬಗ್ಗೆ ಗಮನವಿಟ್ಟರು. ಈ ಮಾರ್ಗದಲ್ಲಿನ ವಿವಿಧ ರಸ್ತೆಗಳ ಉದ್ದ, ವಾಹನಗಳ ಸಾಮರ್ಥ್ಯ, ವೇಗ ಹಾಗೂ ಸಂಚಾರ ದಟ್ಟವಾಗಿರುವ ಸಮಯದಲ್ಲಿ ಹಾಗೂ ವಿರಳ ಸಂಚಾರವಿರುವ ಸಮಯದಲ್ಲಿ ಈ ದೂರವನ್ನು ಕ್ರಮಿಸಲು ವಾಹನಗಳು ತೆಗೆದುಕೊಳ್ಳುವ ಸಮಯ ಮುಂತಾದವನ್ನು ಗುರುತಿಸಿಕೊಂಡರು. ಹಾದಿಯಲ್ಲಿ ಇರುವ ಪ್ರತಿಯೊಂದು ಕೂಡುರಸ್ತೆಯನ್ನೂ ಗ್ರಾಫಿನಲ್ಲಿ ಒಂದು ಬಿಂದುವನ್ನಾಗಿ ಗುರುತಿಸಿದಾಗ ಹಲವು ವಿಭಿನ್ನ ಬಸ್‌ ಮಾರ್ಗಗಳಿರುವ ನಕ್ಷೆಯನ್ನು ರೂಪಿಸಿದರು.

ಅನಂತರ ಈ ನಕ್ಷೆಯನ್ನು ಹ್ಯಾಮಿಲ್ಟನ್‌ ಸರ್ಕೀಟು ಆಲ್ಗೊರಿದಂ ಬಳಸಿ ವಿಶ್ಲೇಷಿಸಿದರು. ಇದು ನಕ್ಷೆಯಲ್ಲಿರುವ ಪ್ರತಿಯೊಂದು ಬಿಂದುವನ್ನೂ ಒಮ್ಮೆ ಮಾತ್ರ ಮುಟ್ಟಿ ಆರಂಭದ ಸ್ಥಾನಕ್ಕೆ ಮರಳುವಂತೆ ಹಾದಿಯನ್ನು ಗುರುತಿಸಿತ್ತು. ಆದರೆ ಇಂತಹ ಮಾರ್ಗಗಳು ಅಸಂಖ್ಯವಾಗಿರಬಹುದಾಗಿದ್ದರಿಂದ, ಬ್ಯಾಕ್‌ಟ್ರಾಕಿಂಗ್‌ ಎನ್ನುವ ಮತ್ತೊಂದು ಗಣಿತ ಸೂತ್ರವನ್ನು ಸಂಶೋಧಕರು ಬಳಸಿದರು. ಈ ವಿಧಾನವು ಪ್ರತಿಯೊಂದು ಸಂಭಾವ್ಯ ಮಾರ್ಗದಲ್ಲಿಯೂ ಚಲಿಸಿ ನೋಡುತ್ತದೆ. ಆ ಮಾರ್ಗ ಸರಿಯಾಗಿಲ್ಲ ಎನ್ನುವುದು ಸ್ಪಷ್ಟವಾದರೆ, ಅಂದರೆ ಆ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಬಹುದು ಎನ್ನಿಸಿದರೆ, ಹಿಂಚಲಿಸಿ ಇನ್ನೊಂದು ಹಾದಿಗೆ ಸರಿಯುತ್ತದೆ.
ಈ ರೀತಿಯಲ್ಲಿ ಸಂಶೋಧಕರು ಹನ್ನೆರಡು ವರ್ತುಲ ಮಾರ್ಗಗಳು ಸಾಧ್ಯವೆಂದು ಗುರುತಿಸಿದ್ದಾರೆ. ಪ್ರತಿಯೊಂದು ಮಾರ್ಗವನ್ನೂ ಕೂಡ ಆ ಹಾದಿಯಲ್ಲಿ ಇರಬಹುದಾದ ದಟ್ಟಣೆಯ ಪ್ರಮಾಣ ಸಂಚಾರಕ್ಕೆ ತಕ್ಕುದಾಗಿರುವಂತೆ ನೋಡಿಕೊಂಡಿದ್ದಾರೆ. ಅರ್ಥಾತ್‌ ಇದರ ಸೂಚಿ ಒಂದು ಇರುವಂತೆ ಗಮನಿಸಿಕೊಂಡಿದ್ದಾರೆ. 

ವಾಹನ ದಟ್ಟಣೆ ಹಾಗೂ ರಸ್ತೆಯ ಸಾಮರ್ಥ್ಯದ ನಡುವಿನ ಈ ಅನುಪಾತ ಒಂದಕ್ಕಿಂತ ಹೆಚ್ಚಿದ್ದರೆ, ವಾಹನಗಳ ಒತ್ತರಿಕೆ ಹೆಚ್ಚುತ್ತದೆ. ಈ ಅನುಪಾತ ಒಂದಕ್ಕಿಂತ ಕಡಿಮೆ ಇದೆ ಎಂದರೆ ರಸ್ತೆಗಳನ್ನು ಸಾಕಷ್ಟು ಬಳಸುತ್ತಿಲ್ಲ ಎಂದರ್ಥ. ಈ ರೀತಿಯಲ್ಲಿ ಬ್ಯಾಕ್‌ಟ್ರಾಕಿಂಗ್‌ ವಿಧಾನವನ್ನು ಬಳಸಿದ ಸಂಶೋಧಕರು, ಚೆನ್ನಾಗಿ ನಿರ್ವಹಿಸಲು ಆಗದ ಹಾದಿಗಳನ್ನು ಸೋಸಿದರು.

ಅನಂತರ ದೊರೆತ ಮಾರ್ಗಗಳನ್ನು ವಾಹನಗಳ ದಟ್ಟಣೆ, ದೂರ, ಇಂಧನದ ವ್ಯಯ ಮೊದಲಾದವುಗಳಿಗಾಗಿ ವಿಶ್ಲೇಷಿಸಿ, ಮೂರು ಮಾರ್ಗಗಳನ್ನು ಗುರುತಿಸಿದರು. ಈ ಮೂರು ಉತ್ತಮ ಮಾರ್ಗಗಳಲ್ಲಿ ಅತ್ಯುತ್ತಮವಾದ ಮಾರ್ಗವು ಬೆಳ್ಳಾರಿ ರಸ್ತೆಯನ್ನು ಬಳಸಿತ್ತು. ಈ ರಸ್ತೆಯಲ್ಲಿ ಯಾವಾಗಲೂ ತಿ ಕಡಿಮೆ ವಾಹನ ಸಂಚಾರವೂ, ಇಂಧನದ ಬಳಕೆಯೂ ಇತರೆ ಮಾರ್ಗಗಳಿಗೆ ಹೋಲಿಸಿದರೆ ಕಡಿಮೆ ಇತ್ತು. ಹೀಗೆ ಬಸ್‌ ಮಾರ್ಗಗಳನ್ನು ವರ್ತುಲ ಮಾರ್ಗಗಳನ್ನಾಗಿ ಬದಲಾಯಿಸುವದರಿಂದ ರಸ್ತೆಯ ಗರಿಷ್ಟ ಸಾಮರ್ಥ್ಯ ಅರ್ಥಾತ್‌ ಸ್ಯಾಚುರೇಶನ್‌ ಕಡಿಮೆಯಾಗುವಂತೆ ಸಂಶೋಧಕರು ಮಾಡಿದ್ದರು. ರಸ್ತೆಯ ಗರಿಷ್ಠ ಸಾಮರ್ಥ್ಯ ಆ ರಸ್ತೆಯಲ್ಲೆಷ್ಟು ವಾಹನ ಸಂಚಾರವಿದೆ ಎಂದು ಗುರುತಿಸುತ್ತದೆ. ಗರಿಷ್ಟ ಸಾಮರ್ಥ್ಯವನ್ನು ಮುಟ್ಟಿದೆ ಎಂದರೆ ಇನ್ನೊಂದೇ ಒಂದು ವಾಹನ ಬಂದರೂ  ಆ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿಬಿಡುತ್ತದೆ ಎಂದರ್ಥ.

ಬೆಂಗಳೂರಿನ ವಾಹನ ಸಂಚಾರವೊಡ್ಡುವ ಸವಾಲನ್ನು ಡೇಟಬಳಕೆಯ ಮೂಲಕ ಪಳಗಿಸುವ ಮಾರ್ಗವನ್ನು ಈ ಸಂಶೋಧನೆ ನೀಡಿದೆ. ರಸ್ತೆಯ ಸಾಮರ್ಥ್ಯ, ಪ್ರಯಾಣದ ಅವಧಿ ಹಾಗೂ ನಗರದ ಇಂದಿನ ಸ್ಥಿತಿಗತಿಯ ಮಾಹಿತಿಯನ್ನು ಬಳಸಿಕೊಂಡು, ಜಾಣತನದಿಂದ ಮಾರ್ಗಗಳನ್ನು ರೂಪಿಸುವುದರಿಂದ ನಿತ್ಯದ ಸಂಚಾರದ ಸಂಕಟಗಳ ಮೇಲೆ ಪರಿಣಾಮವನ್ನುಂಟು ಮಾಡಬಹುದು ಎಂದು  ಈ ಸಂಶೋಧಕರು ತೋರಿಸಿದ್ದಾರೆ. ಇದು ಕೇವಲ ಬಸ್‌ ಪ್ರಯಾಣಿಕರಷ್ಟೆ ಅಲ್ಲದೆ, ಪ್ರತಿಯೊಬ್ಬರ ಪ್ರಯಾಣದ ಅವಧಿಯನ್ನೂ ತಗ್ಗಿಸಲಿದೆ. ದಟ್ಟಣೆ ಕಡಿಮೆಯಾದರೆ, ಇಂಧನದ ವೆಚ್ಚವೂ ಕುಗ್ಗಲಿದೆ. ಇದು ಪರಿಸರಕ್ಕೆ ಒಳ್ಳೆಯದಷ್ಟೆ ಅಲ್ಲ, ಜನರ ವೆಚ್ಚವನ್ನೂ ಉಳಿಸಲಿದೆ.


ಈ ಸುದ್ದಿಯನ್ನು ಯಾಂತ್ರಿಕ ಬುದ್ಧಿಮತ್ತೆಯ ನೆರವಿನಿಂದ ತಯಾರಿಸಿ, ರೀಸರ್ಚ್‌ ಮ್ಯಾಟರ್ಸ್‌ ಸಂಪಾದಕರು ತಿದ್ದಿದ್ದಾರೆ. ಅನುವಾದ: ಜಾಣಸುದ್ದಿ