ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಗಿಡಮೂಲಿಕೆ ಔಷಧಿಗಳ ವ್ಯಾಪಾರಕ್ಕಿದೆ ಮೌಲ್ಯಮಾಪನದ ಅವಶ್ಯಕತೆ

Read time: 1 min
ಬೆಂಗಳೂರು
13 Mar 2019
ಗಿಡಮೂಲಿಕೆ ಔಷಧಿಗಳ ವ್ಯಾಪಾರಕ್ಕಿದೆ ಮೌಲ್ಯಮಾಪನದ ಅವಶ್ಯಕತೆ | ರಿಸರ್ಚ್ ಮಾಟ್ಟರ್ಸ್

ಪ್ರಪಂಚದಾದ್ಯಂತದ ಜನರು ಪ್ರತಿ ವರ್ಷ ಸಾವಿರಾರು ವಿವಿಧ ಗಿಡಮೂಲಿಕೆ ಔಷಧಿಗಳನ್ನು ಬಳಸುತ್ತಾರೆ; ಇದರ ಫಲವಾಗಿ ಈ ಗಿಡಮೂಲಿಕೆ ಔಷಧಿಗಳ ಉದ್ಯಮವು ಎಷ್ಟು ಲಾಭದಾಯಕವೆನಿಸಿದೆಯೆಂದರೆ, ವಿಶ್ವದಾದ್ಯಂತ ಈ ಉದ್ಯಮದ ಮೌಲ್ಯವು ₹ 7000 ಕೋಟಿಗೂ ಹೆಚ್ಚಿದೆ. ಈ ಉದ್ಯಮದ ವ್ಯಾಪಕತೆಯು ಕಣ್ಣಿಗೆ ಕಾಣದಂತೇನೂ ಇಲ್ಲ; ಇವುಗಳ ಜಾಹಿರಾತುಗಳಂತೂ ದಿನಬೆಳಗಾದರೆ ಪತ್ರಿಕೆಗಳು, ನಿಯತಕಾಲಿಕೆಗಳು, ವೈದ್ಯರ ಕ್ಯಾಬಿನ್ನುಗಳಲ್ಲಿ ಢಾಳಾಗಿ ಕಂಡುಬರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ಮಾರುಕಟ್ಟೆಯು ಗಣನೀಯ ವೇಗವನ್ನುಗಳಿಸಿದೆ ಮತ್ತು ಭವಿಷ್ಯದಲ್ಲಿ ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ. ಇದರ ಜೊತೆಗಿರುವ ಒಂದು ಪ್ರಮುಖ ಅಪಾಯವೆಂದರೆ, ಗ್ರಾಹಕರು ತಮಗರಿವಿಲ್ಲದೇ ಪರಿಶೀಲಿಸದ ಅಥವಾ ಅಧಿಕೃತವಲ್ಲದ ಪೂರಕ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಆಧುನಿಕ ವಿಜ್ಞಾನದಿಂದ ತುಲನಾತ್ಮಕವಾಗಿ ದೂರವಿರುವ ಗಿಡ ಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧಿಗಳ ವಿಚಾರದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ಮಾರುಕಟ್ಟೆ ಪ್ರವೇಶಿಸುವ ಮೊದಲು ಕಠಿಣ ತಪಾಸಣೆಗೆ ಒಳಪಡುವುದಿಲ್ಲ ಎಂಬುದು ಬೆಚ್ಚಿಬೀಳಿಸುವ ಸತ್ಯ.

"ಇತ್ತೀಚಿನ ವರ್ಷಗಳಲ್ಲಿ, ಭಾರತವೂ ಸೇರಿದಂತೆ ಜಾಗತಿಕವಾಗಿ ಎಲ್ಲೆಲ್ಲೂ ಗಿಡಮೂಲಿಕೆ ಉತ್ಪನ್ನಗಳ ವ್ಯಾಪಾರ ಕ್ಷಿಪ್ರವಾಗಿ ಬೆಳೆಯುತ್ತಿದೆ. ಆದರೂ, ಗಿಡಮೂಲಿಕೆ ಉತ್ಪನ್ನಗಳಲ್ಲಿ ಬಳಸುವ ಸಸ್ಯದ ಭಾಗಗಳನ್ನು ಗುರುತಿಸಲು ಮತ್ತು ಮೌಲ್ಯಮಾಪನ ಮಾಡಲು ಜಾಗತಿಕವಾಗಿ ಯಾವುದೇ ಶಿಷ್ಟಾಚಾರ ಅಥವಾ ಅಧಿಕೃತ ರೀತಿನೀತಿಗಳು ಇಲ್ಲ. ಗಿಡಮೂಲಿಕೆ ಉತ್ಪನ್ನಗಳಲ್ಲಿ ಕಲಬೆರಕೆಯಿದ್ದರೆ, ಅದು ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುವುದಷ್ಟೇ ಅಲ್ಲದೇ, ಔಷಧೀಯ ಸಸ್ಯಗಳ ವ್ಯಾಪಾರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಪರಿಸರ ಮತ್ತು ಪರಿಸರ ವಿಜ್ಞಾನದ ಸಂಶೋಧನೆಗಾಗಿರುವ ಅಶೋಕ ಟ್ರಸ್ಟ್ನ(ATREE) ಸಂಶೋಧಕ ಡಾ. ಗುಡಸಲಮನಿ ರವಿಕಾಂತ್ ವಿವರಿಸಿದ್ದಾರೆ.

ಬೆಂಗಳೂರಿನ ಅಶೋಕ ಟ್ರಸ್ಟ್ನ ಡಾ. ರವಿಕಾಂತ್ ಮತ್ತು ಅವರ ಸಹೋದ್ಯೋಗಿಗಳು ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದ ಸಂಶೋಧಕರ ಸಹಯೋಗದಲ್ಲಿ ನಡೆಸಿದ ಹೊಸ ಅಧ್ಯಯನವೊಂದರಲ್ಲಿ, ಗಾರ್ಸಿನಿಯಾ ಅಥವಾ ಪುನರ್ಪುಳಿ ಹಣ್ಣುಗಳು ಮತ್ತು ಅವುಗಳಿಂದ ತಯಾರಿಸುವ ಪೂರಕ ಆಹಾರಗಳಲ್ಲಿ ಕಲಬೆರಕೆಯಿರುವ ಸಾಧ್ಯತೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಗಾರ್ಸಿನಿಯಾ ಹಣ್ಣುಗಳನ್ನು (ಗಾರ್ಸಿನಿಯಾ ಗುಮ್ಮಿಗುಟ್ಟಾ ಮತ್ತು ಗಾರ್ಸಿನಿಯಾ ಇಂಡಿಕಾ) ಪುನರ್ಪುಳಿಯಲ್ಲದೇ ಮಲಬಾರ್ ಹುಣಸೆ ಅಥವಾ ಕುಡಮ್ ಪುಳಿ ಎಂದೂ ಕರೆಯಲಾಗುತ್ತದೆ. ಇದು ಇಂಡೋನೇಷ್ಯಾ ಮತ್ತು ಭಾರತದ ಕರಾವಳಿಯಲ್ಲಿ ಕಂಡುಬರುವ ಉಷ್ಣವಲಯದ ಸಸ್ಯವಾಗಿದ್ದು, ಇದು ಸ್ಥೂಲಕಾಯಕ್ಕೆ ಔಷಧವೆಂದು ನಂಬಲಾಗಿದೆ. ಈ ಹಣ್ಣುಗಳು ಹೈಡ್ರಾಕ್ಸಿಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಇದು ಹಸಿವು ನಿಗ್ರಹಿಸಲು ಸಹಕಾರಿ; ಅಷ್ಟೇ ಅಲ್ಲದೇ, ಕಾರ್ಬೋಹೈಡ್ರೇಟ್ಗಳಿಂದ ಕೊಬ್ಬನ್ನು ಸಂಶ್ಲೇಷಿಸುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಕಿಣ್ವವನ್ನು ತಡೆಯುವ ಮೂಲಕ ಕೊಬ್ಬಿನ ಸಂಶ್ಲೇಷಣೆಯನ್ನು ಕಡಿಮೆ ಮಾಡಿ, ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ.

"ನಮ್ಮ ಅಧ್ಯಯನವು, ಭಾರತದ ಔಷಧೀಯ ಸಸ್ಯ ವ್ಯಾಪಾರದಲ್ಲಿ ಅಡಗಿರುವ ಕಲಬೆರಕೆಯ ವ್ಯಾಪ್ತಿಯ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿದೆ” ಎಂದು ಈ ಅಧ್ಯಯನದ ಹಿಂದಿರುವ ಪ್ರೇರಣೆಯನ್ನು ಡಾ. ರವಿಕಾಂತ್ ವಿವರಿಸುತ್ತಾರೆ. ತಮ್ಮ ಮಾತನ್ನು ಮುಂದುವರೆಸುತ್ತಾ, "ನಾವು ಈ ಮೊದಲು ಸಾಬೀತು ಪಡಿಸಿದಂತೆ ಪುಡಿಗಳ ರೂಪದಲ್ಲಿ (ತೊಗಟೆ ಪುಡಿ ಅಥವಾ ಎಲೆ ಪುಡಿ) ಮಾರಾಟವಾಗುವ ಸರಿಸುಮಾರು 80% ಔಷಧೀಯ ಸಸ್ಯಗಳು ಕಲಬೆರಕೆಗೊಂಡಿರುತ್ತವೆ” ಎನ್ನುತ್ತಾರೆ.

ಜೈವಿಕ ತಂತ್ರಜ್ಞಾನ ಇಲಾಖೆಯು ಪ್ರಸ್ತುತ ಅಧ್ಯಯನವನ್ನು ಬೆಂಬಲಿಸಿದ್ದು, ಇದನ್ನು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.

ಸಂಶೋಧಕರು ಕಲಬೆರಕೆಯನ್ನು ಪರೀಕ್ಷಿಸುವ ಸಲುವಾಗಿ ದಕ್ಷಿಣ ಭಾರತದ ಮಾರುಕಟ್ಟೆಗಳಿಂದ ಕಚ್ಚಾ ಮಾದರಿಗಳನ್ನು, ಹಾಗೆಯೇ  ಭಾರತದ ಮತ್ತು ವಿಶ್ವದಾದ್ಯಂತದ ಔಷಧಾಲಯಗಳಿಂದ ಗಿಡಮೂಲಿಕೆ ಉತ್ಪನ್ನಗಳನ್ನು ಸಂಗ್ರಹಿಸಿದರು. ನಂತರ ‘ಜೈವಿಕ ಪರಾಮರ್ಶನ ಪದಾರ್ಥ’ ಎಂದು ಕರೆಯಲ್ಪಡುವ ಜೀವಿವರ್ಗೀಕರಣದ ಮೌಲ್ಯಮಾಪನಕ್ಕೆ ಒಳಪಟ್ಟ ಮಾದರಿಗಳ ಗುಂಪಿಗೆ, ಇದನ್ನು ಹೋಲಿಸಿದರು. ಈ ಮೌಲ್ಯಮಾಪನ ಹಾಗೂ ದೃಢೀಕರಣ ಪ್ರಕ್ರಿಯೆಯು  ಡಿಎನ್ಎ ಬಾರ್ಕೋಡಿಂಗ್ ಮತ್ತು ಎನ್ಎಂಆರ್ ಸ್ಪೆಕ್ಟ್ರೋಸ್ಕೋಪಿ (ನ್ಯೂಕ್ಲಿಯಾರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೊಪಿ) ಎಂಬ ಎರಡು ತಂತ್ರಗಳನ್ನು ಒಳಗೊಂಡಿತ್ತು.

ಸಂಶೋಧಕರು ಡಿಎನ್ಎ ಬಾರ್ಕೋಡಿಂಗ್ ವಿಧಾನವನ್ನು ಬಳಸಿ ಮಾರುಕಟ್ಟೆಯಲ್ಲಿರುವ ಔಷಧೀಯ ಸಸ್ಯಗಳು ಕಲಬೆರಕೆಗೊಂಡಿವೆಯೇ ಎಂದು ಪರೀಕ್ಷಿಸಿದರು; ಸ್ವಾಧೀನಪಡಿಸಿಕೊಂಡಿರುವ ಮಾದರಿಯಲ್ಲಿನ ಮೂರು ಜೀನೋಮಿಕ್ ಅನುಕ್ರಮಗಳನ್ನು ಪರಾಮರ್ಶನ ಪದಾರ್ಥದೊಂದಿಗೆ ಹೋಲಿಸಿದರು. ಇದರ ನಂತರ ದೊರೆತ ದತ್ತಾಂಶವನ್ನು BLAST (ಬೇಸಿಕ್ ಲೋಕಲ್ ಅಲೈನ್ಮೆಂಟ್ ಸರ್ಚ್ ಟೂಲ್) ವಿಶ್ಲೇಷಣೆ ವಿಧಾನವನ್ನು ಬಳಸಿ, ಜೊತೆಗೆ, ವಂಶವೃಕ್ಷ ಸಂಬಂಧಿತ ವಿಧಾನವನ್ನೂ ಬಳಸಿ ವಿಶ್ಲೇಷಿಸಲಾಯಿತು. ಮೊದಲ ವಿಧಾನವು ವಿಭಿನ್ನ ಡಿಎನ್ಎ ಮಾದರಿಗಳಲ್ಲಿನ ನಿರ್ದಿಷ್ಟ ನ್ಯೂಕ್ಲಿಯೋಟೈಡ್ ಅನುಕ್ರಮಗಳನ್ನು ಹೋಲಿಸಲು ಒಂದು ಕ್ರಮಾವಳಿಯನ್ನು ಬಳಸುತ್ತದೆ; ಎರಡನೆಯ ವಿಧಾನವು, ಹತ್ತಿರದ ಸಂಬಂಧ ಹೊಂದಿರುವ ಪ್ರಭೇದಗಳನ್ನು ಒಂದು ಸಮೂಹಕ್ಕೆ ಸೇರಿಸುವ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿ ದೊರೆತ ಪುನರ್ಪುಳಿ ಮಾದರಿಗಳಲ್ಲಿರುವ ಹೈಡ್ರಾಕ್ಸಿಸಿಟ್ರಿಕ್ ಆಮ್ಲದ ಸಾಂದ್ರತೆಯನ್ನು ಪರೀಕ್ಷಿಸಲು, ಎನ್ಎಂಆರ್ ಸ್ಪೆಕ್ಟ್ರೋಸ್ಕೋಪಿಯನ್ನು ಬಳಸಲಾಯಿತು. ಹೀಗೆ ಅಳೆಯಲಾದ ಪ್ರಮಾಣವನ್ನು  ಪರಾಮರ್ಶನ ಮಾದರಿಗಳಿಗೆ ಹೋಲಿಸಲಾಯಿತು. ಮಾದರಿಗಳನ್ನು ಪರೀಕ್ಷಿಸಲು ಈ ಎರಡು ವಿಶಿಷ್ಟ ವಿಧಾನಗಳನ್ನು ಬಳಸಿದ್ದರಿಂದ, ಮಾರುಕಟ್ಟೆಯಲ್ಲಿ ಸಿಗುವ ಪುನರ್ಪುಳಿ ಹಾಗೂ ಅದರ ಉತ್ಪನ್ನಗಳಲ್ಲಿ ಕಲಬೆರಕೆಯ ಉಪಸ್ಥಿತಿಯನ್ನು ಕೂಲಂಕುಷವಾಗಿ  ಶೋಧಿಸಿದಂತಾಯಿತು. 

ಈ ಪರೀಕ್ಷೆಗಳಿಗೆ ದೊರೆತ ಫಲಿತಾಂಶಗಳಲ್ಲಿ ಕೆಲವು ಧನಾತ್ಮಕವೆನಿಸಿದರೆ, ಕೆಲವು ಋಣಾತ್ಮಕ ಕಹಿಸತ್ಯಗಳನ್ನು ಪ್ರತಿಫಲಿಸಿದವು. ಡಿಎನ್ಎ ಮಾದರಿಗಳನ್ನು ಪರಿಶೀಲಿಸುವ ಮೂಲಕ, ಸಂಶೋಧಕರಿಗೆ ಭಾರತದಾದ್ಯಂತ ದೊರೆಯುವ  ಪುನರ್ಪುಳಿಯ ವಿವಿಧ ಜಾತಿಗಳ ಪಟ್ಟಿ ಮಾಡಿ, ಅವುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಲು ಸಾಧ್ಯವಾಯಿತು. ಈ ಪ್ರಕ್ರಿಯೆಯು ಗಿಡಮೂಲಿಕೆ ಸಸ್ಯಗಳ ಶ್ರೀಮಂತ ವೈವಿಧ್ಯವನ್ನು ಅರಿಯಲು, ಅವುಗಳ ನಡುವಿನ ವ್ಯತ್ಯಾಸವನ್ನು ದಾಖಲಿಸುವಲ್ಲಿ ಉಂಟಾಗಬಹುದಾದ ತೊಡಕನ್ನು ತಿಳಿಯಲು ಹಾಗೂ ಈ ಸಸ್ಯಗಳನ್ನಾಧರಿಸಿದ ಉತ್ಪನ್ನಗಳಲ್ಲಿ ಕಲಬೆರಕೆಯ ಸ್ಪಷ್ಟ ಇರುವನ್ನು ಅರ್ಥೈಸಿಕೊಳ್ಳಲು ಬೇಕಾದ ಭದ್ರ ಬುನಾದಿಯನ್ನು ರಚಿಸಿತು. ಆದಾಗ್ಯೂ, ಎನ್ಎಂಆರ್ ಸ್ಪೆಕ್ಟ್ರೋಸ್ಕೋಪಿಯನ್ನು ಬಳಸಿದ್ದರಿಂದ ತಿಳಿದುಬಂದ ಒಂದು ಖೇದಕರ ಅಂಶವೆಂದರೆ, ಕೆಲವು ಪುನರ್ಪುಳಿ ಆಧಾರಿತ ಪೂರಕ ಆಹಾರೋತ್ಪನ್ನಗಳಲ್ಲಿ ವಾಸ್ತವವಾಗಿ ಹೈಡ್ರಾಕ್ಸಿಸಿಟ್ರಿಕ್ ಆಮ್ಲವು ಕೇವಲ 4.6% - 5.5% ನಷ್ಟಿತ್ತು;  ಆದರೆ, ಆ ಉತ್ಪನ್ನದಲ್ಲಿ 60% ಹೈಡ್ರಾಕ್ಸಿಸಿಟ್ರಿಕ್ ಆಮ್ಲ ಇದೆ ಎನ್ನುತ್ತದೆ ಅದರ ಮೇಲಿರುವ ಲೇಬಲ್! ಮತ್ತೂ ಕೆಲವು ಉತ್ಪನ್ನಗಳದ್ದೂ ಇದೇ ಕಥೆ! ತೀರ ಇಷ್ಟು ಕಡಿಮೆಯಿಲ್ಲದಿದ್ದರೂ, ಲೇಬಲ್ ನ ಮೇಲೆ ಮುದ್ರಿಸಿದ ಪ್ರಮಾಣಕ್ಕೂ, ಉತ್ಪನ್ನದಲ್ಲಿ ವಾಸ್ತವವಾಗಿ ಇದ್ದ ಪ್ರಮಾಣಕ್ಕೂ ತಾಳಮೇಳವೇ ಇರಲಿಲ್ಲ ಎಂಬುದು ಕಹಿಸತ್ಯ.

ಈ ರೀತಿಯ ಅಧ್ಯಯನದ ಪರಿಣಾಮಗಳ ಬಗ್ಗೆ ಮಾತನಾಡಿದ ಡಾ. ರವಿಕಾಂತ್ “ಹಲವು ಭಾರತೀಯ ಗಿಡಮೂಲಿಕೆ ಉತ್ಪನ್ನಗಳು ಅನೇಕ ಪ್ರಭೇದಗಳ ಮಿಶ್ರಣಗಳಾಗಿದ್ದು, ಅವುಗಳನ್ನು ಗುರುತಿಸುವುದೆಂದರೆ, ಅದು ಸಮಯ ಬೇಡುವ, ಕಷ್ಟಕರ ಮತ್ತು ದುಬಾರಿ ಪ್ರಕ್ರಿಯೆಯಾಗಿದೆ. ಅದರಲ್ಲೂ ಹೊಸ ಹೊಸ ಅಭಿವೃದ್ಧಿಗಳು ಮತ್ತು ತಂತ್ರಜ್ಞಾನದಲ್ಲಿನ ಸುಧಾರಣೆಗಳು, ವಿಶೇಷವಾಗಿ,  ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ನಿರ್ವಹಿಸುವ ಸ್ವಯಂಚಾಲಿತ ತಂತ್ರಗಳು ಇಲ್ಲಿ ನಮ್ಮ ಸಹಾಯಕ್ಕೆ ಬರುತ್ತವೆ. ಇವುಗಳ ಮೂಲಕ ಕಚ್ಚಾ ಗಿಡಮೂಲಿಕೆ ಉತ್ಪನ್ನಗಳನ್ನು ಆಗಾಗ್ಗೆ ಮೌಲ್ಯೀಕರಿಸಲಾಗುವುದು, ಅಷ್ಟೇ ಅಲ್ಲದೇ, ಹೆಚ್ಚಿನ ಸಂಖ್ಯೆಯ ಪ್ರಭೇದಗಳನ್ನೂ ಗುರುತಿಸಬಹುದು” ಎಂದು ವಿವರಿಸುತ್ತಾರೆ.

ಇಂತಹ  ಸಂಶೋಧನೆಗಳು ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಆವಶ್ಯಕವೆನಿಸುತ್ತವೆ; ವ್ಯಾಪಕವಾಗಿ ಬೆಳೆಯುತ್ತಿರುವ ಗಿಡಮೂಲಿಕೆ ಉತ್ಪನ್ನಗಳ ವ್ಯಾಪಾರದಲ್ಲಿ ಗಮನಾರ್ಹ ಸಮಸ್ಯೆಗಳಿದ್ದು, ಹೊಸ ಹೊಸ ತಂತ್ರಜ್ಞಾನಗಳು ಈ ಸಮಸ್ಯೆಗಳನ್ನು ನಿವಾರಿಸಲು ಬೇಕೇಬೇಕಾಗುತ್ತವೆ. ಹಾಗಾಗಿ, ಭಾರತದ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ತಲುಪುವ ಗಿಡಮೂಲಿಕೆ ಔಷಧ ಉತ್ಪನ್ನಗಳ ಸುರಕ್ಷತೆ ಮತ್ತು ದೃಢೀಕರಣವನ್ನು ಖಾತರಿಪಡಿಸುವ ಆವಶ್ಯಕತೆಯಿದ್ದು, ಸುಧಾರಿತ ವೈಜ್ಞಾನಿಕ ತಂತ್ರಜ್ಞಾನಗಳ ಅಭಿವೃದ್ಧಿ, ಅರ್ಥೈಸಿಕೊಳ್ಳುವಿಕೆ ಮತ್ತು ಬಳಕೆಯು ಇದನ್ನು ಸಾಧ್ಯವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಂತೂ ಖಚಿತ.