ಭಾರತದಲ್ಲಿ ಜೀವವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದಕ್ಕೆ ಮತೊಮ್ಮೆ ಪುರಾವೆ ದೊರೆತಿದೆ. ಭಾರತೀಯ ವಿಜ್ಞಾನಿಗಳು ಇತ್ತೀಚಿಗೆ ಎರಡು ಹೊಸ ಚಿಮ್ಮಂಡೆ (ಕ್ರಿಕೆಟ್) ಕಪ್ಪೆಗಳನ್ನು ಕಂಡುಹಿಡಿದಿದ್ದು, ಈಗ ಭಾರತೀಯ ಉಪಖಂಡದಲ್ಲಿ ಕಂಡುಬರುವ ಕ್ರಿಕೆಟ್ ಕಪ್ಪೆಗಳ ೩೦ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡ ಪಟ್ಟಿಯನ್ನು ಮತ್ತೂ ವಿಸ್ತರಿಸಿದ್ದಾರೆ. ಇತ್ತೀಚಿಗೆ ಗೋವಾದಲ್ಲಿ ಕಂಡುಹಿಡಿಯಲಾದ ಚಿಮ್ಮಂಡೆ ಕಪ್ಪೆಯ ನಂತರ ಭಾರತದ ಪೂರ್ವಘಟ್ಟಗಳು ಮತ್ತು ಪಶ್ಚಿಮಘಟ್ಟಗಳಲ್ಲಿ ತಲಾ ಒಂದೊಂದು ಹೊಸ ಜಾತಿಯ ಚಿಮ್ಮಂಡೆ ಕಪ್ಪೆಗಳನ್ನು ಕಂಡುಹಿಡಿದಿದ್ದಾರೆ.
ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆ ಮತ್ತು ಉತ್ತರ ಒರಿಸ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಈ ಗಮನಾರ್ಹ ಸಾಧನೆಗೈದಿದ್ದಾರೆ. ಈ ಅದ್ಭುತ ಅನ್ವೇಷಣೆಯನ್ನು ವಿವರಿಸುವ ಅಧ್ಯಯನವನ್ನು ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ ಮತ್ತು ಈ ಅಧ್ಯಯನಕ್ಕೆ ಭಾಗಶಃ ವಿತ್ತೀಯ ಸಹಕಾರವನ್ನು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಮತ್ತು ಅಭಿಯಂತ್ರಿಕ ಸಂಶೋಧನಾ ಮಂಡಳಿಯು ಕೊಡಮಾಡಿದೆ.
ಏಷ್ಯಾದಲ್ಲಿ ಕಂಡುಬರುವ ‘ಫೆಜರ್ವಾರಿಯಾ’ ಕುಲದ ಚಿಮ್ಮಂಡೆ ಕಪ್ಪೆಗಳು, ‘ಡಿಕ್ರೊಗ್ಲೋಸಿಡೆ’ ಕುಟುಂಬಕ್ಕೆ ಸೇರಿದವು. ಈ ಕಪ್ಪೆಗಳು ಹೊರಡಿಸುವ ಕರೆಯು, ಸಾಮಾನ್ಯವಾಗಿ ಚಿಮ್ಮಂಡೆ ಅಥವಾ ಕ್ರಿಕೆಟ್ ಎಂಬ ಕೀಟದ ಕರೆಯನ್ನು ಹೋಲುವ ಕಾರಣ, ಇವಕ್ಕೆ ಚಿಮ್ಮಂಡೆ ಕಪ್ಪೆಗಳು ಎಂದು ನಾಮಕರಣ ಮಾಡಲಾಗಿದೆ. ಈ ಕಪ್ಪೆಗಳು ಅರೆ-ಜಲವಾಸಿಗಳಾಗಿದ್ದು, ಸಾಮಾನ್ಯವಾಗಿ ಕೊಳ, ಹೊಳೆ, ನದಿಗಳು ಮತ್ತು ಭತ್ತದ ಗದ್ದೆಗಳ ಬಳಿ ಕಂಡುಬರುತ್ತವೆ.
ಪೂರ್ವಘಟ್ಟಗಳಲ್ಲಿ ಕಂಡುಬಂದ ಈ ಹೊಸ ಜಾತಿಯ ಕಪ್ಪೆಗೆ ಸಂಶೋಧಕರು ‘ಫೆಜರ್ವಾರಿಯಾ ಕಳಿಂಗ’ ಎಂದು ಹೆಸರಿಟ್ಟಿದ್ದಾರೆ; ಪುರಾತನ ಕಳಿಂಗ ಸಾಮ್ರಾಜ್ಯಕ್ಕೆ ಸೇರಿದ ಮಹಾನದಿ ಮತ್ತು ಗೋದಾವರಿ ನದಿಗಳ ನಡುವಿನ ಕರಾವಳಿ ಪ್ರದೇಶಗಳಲ್ಲಿ, ಈ ಕಪ್ಪೆಯು ಕಂಡುಬಂದ ಕಾರಣ, ಈ ಹೆಸರು ನೀಡಲಾಗಿದೆ. ಕರ್ನಾಟಕದ ಜೋಗ್ ಜಲಪಾತದ ಬಳಿ ಕಂಡುಬಂದ ಇದೇ ಕುಲದ ಮತ್ತೊಂದು ಜಾತಿಯ ಕಪ್ಪೆಗೆ, ಭಾರತದ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಕೊಡುಗೆ ನೀಡಿದ ಹೆಸರಾಂತ ಜೀವಶಾಸ್ತ್ರಜ್ಞ ಡಾ. ಕೆ. ಎಸ್. ಕೃಷ್ಣನ್ ಅವರ ಗೌರವಾರ್ಥವಾಗಿ, ‘ಫೆಜರ್ವಾರಿಯಾ ಕೃಷ್ಣನ್’ ಎಂದು ನಾಮಕರಣ ಮಾಡಿದ್ದಾರೆ.
ಈ ಎರಡೂ ಕಪ್ಪೆಗಳು, ಗುಡ್ಡ-ಬೆಟ್ಟಗಳಲ್ಲಿ ವರ್ಷದಾದ್ಯಂತ ಹರಿಯುವ ತೊರೆಗಳಲ್ಲಿ ವಾಸಿಸುತ್ತವೆ. ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಯು ೬.೫ ಸೆಂಟಿಮೀಟರ್ ಉದ್ದವಿದ್ದು, ಅತಿದೊಡ್ಡ ಚಿಮ್ಮಂಡೆ ಕಪ್ಪೆಗಳಲ್ಲಿ ಇದೂ ಒಂದು. ‘ಫೆಜರ್ವಾರಿಯಾ ಕೃಷ್ಣನ್’ ಕಪ್ಪೆಯು ಕೇವಲ ೨ ಸೆಂಟಿಮೀಟರ್ ಉದ್ದವಿದ್ದು, ಭಾರತದ ಅತ್ಯಂತ ಚಿಕ್ಕ ಚಿಮ್ಮಂಡೆ ಕಪ್ಪೆಗಳ ಸಮೂಹದ ಸದಸ್ಯ ಎನಿಸಿದೆ. ಈ ಎರಡೂ ಜಾತಿಗಳ ಸಂತಾನೋತ್ಪತ್ತಿಯ ಋತುವಿನ ಬಗ್ಗೆ ದೊರೆತ ಮಾಹಿತಿ ಕೂಡ ಆಸಕ್ತಿದಾಯಕವಾಗಿದೆ.
"ಉಭಯಚರಗಳು ಸಾಮಾನ್ಯವಾಗಿ ಮಳೆಗಾಲಕ್ಕೂ ಕೊಂಚ ಮುಂಚೆ, ಮಳೆಗಾಲದಲ್ಲಿ ಅಥವಾ ಮಳೆಗಾಲದ ನಂತರದ ದಿನಗಳಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ; ಅದರಲ್ಲೂ ಫೆಜರ್ವಾರಿಯಾ ಕಪ್ಪೆಗಳು ಮಳೆಗಾಲದಲ್ಲಿ ಬಹುತೇಕ ಆಳವಿಲ್ಲದ ಜಲಪಾತ್ರಗಳು, ಕೆಸರುಹೊಂಡಗಳು ಮತ್ತು ಭತ್ತದ ಗದ್ದೆಗಳನ್ನು ಆಯ್ದುಕೊಳ್ಳುತ್ತವೆ. ಆದರೆ, ವಿಶೇಷವೆಂದರೆ, ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಗಳು ಸಂತಾನೋತ್ಪತ್ತಿಗೆ ಈ ಯಾವುದೇ ಋತುಗಳನ್ನೂ ಆಯ್ದುಕೊಳ್ಳದೇ, ಚಳಿಗಾಲಕ್ಕಾಗಿ ಕಾಯುತ್ತವೆ.” ಎನ್ನುತ್ತಾರೆ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಸಂಶೋಧಕರೂ, ಪ್ರಸ್ತುತ ಅಧ್ಯಯನದ ಪ್ರಮುಖ ಲೇಖಕರೂ ಆದ ಡಾ. ಪೃಥ್ವಿರಾಜ್.
"ಕರೆಯ ಮಾದರಿಗಳು, ಸಂತಾನೋತ್ಪತ್ತಿ ಸಂಬಂಧಿತ ವರ್ತನೆ ಮತ್ತು ಇನ್ನೂ ಪರಿಶೋಧನೆ ಮಾಡಬೇಕಾದ ಇತರ ಗುಣಲಕ್ಷಣಗಳನ್ನೂ ಒಳಗೊಂಡಂತೆ, ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಇವುಗಳಲ್ಲಿ ಕಾಣಬಹುದು" ಎನ್ನುತ್ತಾರೆ ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆಯ ವಿಜ್ಞಾನಿ ಹಾಗೂ ಈ ಅಧ್ಯಯನದ ಸಹಲೇಖಕರೂ ಆದ ಡಾ. ಕೆ. ಪಿ. ದಿನೇಶ್.
ಪ್ರೊಫೆಸರ್ ಸುಶೀಲ್ ಕುಮಾರ್ ದತ್ತಾ ಮತ್ತು ಡಾ. ಪೃಥ್ವಿರಾಜ್ ಅವರು ‘ಫೆಜರ್ವಾರಿಯಾ ಕೃಷ್ಣನ್’ ಮತ್ತು ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಗಳ ಮಾದರಿಗಳನ್ನು ಬಹಳ ಹಿಂದೆಯೇ ಸಂಗ್ರಹಿಸಿದ್ದರು. ಆದರೂ, ‘ಫೆಜರ್ವಾರಿಯಾ’ ಕುಲಕ್ಕೆ ಸಂಬಂಧಿಸಿದಂತೆ ವರ್ಗೀಕರಣದ ಗೊಂದಲವಿದ್ದ ಕಾರಣ, ಈ ಕಪ್ಪೆಗಳ ಔಪಚಾರಿಕ ವೈಜ್ಞಾನಿಕ ವಿವರಣೆ ವಿಳಂಬವಾಯಿತು; ಅಲ್ಲದೇ, ಈ ಎರಡೂ ಜಾತಿಗಳ ರೂಪವಿಜ್ಞಾನದ ಲಕ್ಷಣಗಳು ಒಂದಕ್ಕೊಂದು ಹೋಲುತ್ತವೆಯಾದ್ದರಿಂದ, ಅವುಗಳನ್ನು ಪ್ರತ್ಯೇಕಿಸಲು ಹೆಚ್ಚು ಸಮಯ ನೀಡಬೇಕಾಯಿತು. ಈ ಎರಡೂ ಜಾತಿಯ ಕಪ್ಪೆಗಳ ಬಗ್ಗೆ ವಿವರಣೆಗಾಗಿ 'ಸಂಯೋಜಿತ ಜೀವಿವರ್ಗೀಕರಣ ವಿಧಾನ'ವನ್ನು ಬಳಸಲಾಗಿದ್ದು, ದೈಹಿಕ ಗುಣಲಕ್ಷಣಗಳು, ಇದೇ ಕುಲದ ಇತರ ಸದಸ್ಯರ ಭೌಗೋಳಿಕ ಪ್ರತ್ಯೇಕತೆ ಮತ್ತು ಈ ಕಪ್ಪೆಗಳ ತಳೀಯತೆಯ ಆಧಾರದ ಮೇಲೆ ಇವುಗಳು ಹೊಸ ಜಾತಿಗೆ ಸೇರಿದ ಕಪ್ಪೆಗಳು ಎಂಬುದು ಧೃಢಪಟ್ಟಿದೆ.
ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ, ಹೊಸ ಜಾತಿಯ ಸಸ್ತನಿಗಳು ಮತ್ತು ಪಕ್ಷಿಗಳ ಅನ್ವೇಷಣೆ ಅಪರೂಪವಾಗಿದೆ; ಆದಾಗ್ಯೂ, ವಿಜ್ಞಾನಿಗಳು ದೇಶಾದ್ಯಂತ ಹಲವಾರು ಹೊಸ ಜಾತಿಯ ಉಭಯವಾಸಿಗಳನ್ನು ಮತ್ತು ಸರೀಸೃಪಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
"ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅಧಿಕೃತವಾಗಿ ಕಂಡುಹಿಡಿಯಲು ಇನ್ನೂ ಹಲವು ವಿನೂತನ ಉಭಯವಾಸಿಗಳು ಮತ್ತು ಸರೀಸೃಪಗಳಿವೆ; ಇದಕ್ಕೆ ತಕ್ಕಂತೆ, ಭಾರತದ ಶ್ರೀಮಂತ ಜೀವವೈವಿಧ್ಯ ಸಂಪತ್ತನ್ನು ಅನ್ವೇಷಿಸಲು, ಹಲವು ಯುವ ಸಂಶೋಧಕರ ಪ್ರಯತ್ನವು ಮುಂದುವರಿಯುತ್ತಿದೆ" ಎಂದು ಆಶಾವಾದದ ಕಿಡಿ ಹೊತ್ತಿಸುತ್ತಾರೆ ಪ್ರೊಫೆಸರ್ ದತ್ತಾ.
ಕಡಿಮೆ-ಪರಿಚಿತ ಜೀವಿಗಳ ಬಗ್ಗೆ ಅಧ್ಯಯನಕ್ಕಾಗಿ ಹೆಚ್ಚಿನ ವಿತ್ತೀಯ ಸಹಕಾರ, ಸುಧಾರಿತ ವರ್ಗೀಕರಣ ವಿಧಾನಗಳು ಮತ್ತು ಹೆಚ್ಚಿನ ಜನರು ಈ ಕ್ಷೇತ್ರಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು - ಇವೆಲ್ಲಾ ಕಾರಣಗಳಿಂದ ಮುಂಬರುವ ವರ್ಷಗಳಲ್ಲಿ, ಹೊಸ ಜಾತಿಗಳ ಹೆಚ್ಚಿನ ಅನ್ವೇಷಣೆಗಳನ್ನು ನಾವು ನಿರೀಕ್ಷಿಸಬಹುದು ಎಂಬುದು ಭರವಸೆದಾಯಕ.